ಕೃಷಿ ಕಾಯ್ದೆ ವಿರೋಧಿಸಿ ಬಸವಕಲ್ಯಾಣದಿಂದ ಬಳ್ಳಾರಿವರೆಗೆ ರೈತ ಪಾದಯಾತ್ರೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕಲ್ಬುರ್ಗಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ 3 ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಮತ್ತು ಎಂಎಸ್‌ಪಿಗಾಗಿ ಕಾನೂನು ರಚಿಸಬೇಕೆಂದು ಒತ್ತಾಯಿಸಿ ಕರ್ನಾಟಕದಲ್ಲಿ ವಿನೂತನ ಚಳವಳಿಯೊಂದು ಸದ್ದಿಲ್ಲದೆ ನಡೆಯುತ್ತಿದೆ. ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳ ನೂರಾರು ಗ್ರಾಮಗಳನ್ನು ತಲುಪಿ ಕೃಷಿ ಕಾಯ್ದೆಗಳ ಕುರಿತು ವಿವರಿಸುತ್ತಾ, ಜನರನ್ನು ಹೋರಾಟಕ್ಕೆ ಅಣಿಗೊಳಿಸಲು 200ಕ್ಕೂ ಹೆಚ್ಚು ರೈತರು ಬೀದರ್‌ ಜಿಲ್ಲೆಯ ಬಸವಕಲ್ಯಾಣದಿಂದ ಬಳ್ಳಾರಿವರೆಗೆ ರೈತ ಪಾದಯಾತ್ರೆ ನಡೆಸುತ್ತಿದ್ದಾರೆ.

ಆಲ್ ಇಂಡಿಯಾ ಕಿಸಾನ್ ಮಜ್ದೂರ್ ಸಭಾ, ರೈತನಾಯಕ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ರಿ) ರಾಜ್ಯಾಧ್ಯಕ್ಷರಾದ ಬಿ.ಜೆ ಹಳ್ಳಿ ಜಿ ನಾರಾಯಣಸ್ವಾಮಿಯವರ ನೇತೃತ್ವದಲ್ಲಿ ಮಾರ್ಚ್ 5 ರಂದು ಬಸವಕಲ್ಯಾಣದಲ್ಲಿ ರೈತ ಪಾದಯಾತ್ರೆ ಆರಂಭವಾಗಿದೆ. ‘ರೈತ ಹಕ್ಕುಗಳ ರಕ್ಷಣೆಗೆ ರೈತರ ನಡಿಗೆ’ ಹೆಸರಿನಲ್ಲಿ 10 ದಿನಗಳನ್ನು ಪೂರೈಸಿ ಸದ್ಯ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕುಗಳಲ್ಲಿ ಜಾಗೃತಿ ಜಾಥ ನಡೆಯುತ್ತಿದೆ. 400 ಕಿ.ಮೀ ಉದ್ದದ ಈ ಪಾದಯಾತ್ರೆಯು ಮಾರ್ಚ್ 23 ಭಗತ್ ಸಿಂಗ್ ಹುತಾತ್ಮ ದಿನದಂದು ಬಳ್ಳಾರಿಯಲ್ಲಿ ಸಮಾರೋಪಗೊಳ್ಳಲಿದೆ.

“250 ರೈತರು ಪಾದಯಾತ್ರೆ ಹೊರಟಿದ್ದು, ಅದರಲ್ಲಿ 22 ಜನ ಮಹಿಳಾ ರೈತರಿದ್ದಾರೆ. 2 ಟ್ರ್ಯಾಕ್ಟರ್‌ನಲ್ಲಿ ಆಹಾರ ಸಾಮಗ್ರಿಗಳು ಮತ್ತು ಅಗತ್ಯ ವಸ್ತುಗಳನ್ನು ಜೊತೆಗೆ ಒಯ್ಯಲಾಗುತ್ತಿದೆ. ತುರ್ತು ಪರಿಸ್ಥಿತಿ ನಿಭಾಯಿಸಲು 2 ಕಾರು ನಮ್ಮ ಜೊತೆಗಿವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

ದೆಹಲಿಯಲ್ಲಿ ರೈತರು ನೂರು ದಿನಗಳಿಂದಲೂ ಹೋರಾಡುತ್ತಿದ್ದರೂ ಕೇಂದ್ರ ಸರ್ಕಾರ ರೈತರಿಗೆ ಮರಣಶಾಸನವಾಗಿರುವ ಕಾನೂನುಗಳನ್ನು ವಾಪಸ್ ಪಡೆಯುತ್ತಿಲ್ಲ. ರಾಜ್ಯ ಸರ್ಕಾರ ಭೂಸುಧಾರಣಾ ತಿದ್ದುಪಡಿ, ಗೋಹತ್ಯೆ ನಿಷೇಧ ಕಾಯ್ದೆಗಳನ್ನು ತಂದು ರೈತರನ್ನು ಬೀದಿಗೆ ತಳ್ಳುತ್ತಿದೆ. ಬೆಲೆಏರಿಕೆ, ಸರ್ಕಾರಿ ಸಂಸ್ಥೆಗಳ ಖಾಸಗೀಕರಣದಿಂದ ಇತರ ಜನವರ್ಗಗಳನ್ನು ಹಿಂಸಿಲಾಗುತ್ತಿದೆ. ಹಾಗಾಗಿ ಈ ಕುರಿತು ಜನಜಾಗೃತಿ ಮೂಡಿಸಲು ಪಾದಯಾತ್ರೆಯಲ್ಲಿ ನೂರಾರು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ಮಾರ್ಚ್ 23 ರಂದು ಬಳ್ಳಾರಿಯಲ್ಲಿ ಪಾದಯಾತ್ರೆಯ ಸಮಾರೋಪ ಸಮಾವೇಶ ನಡೆಯಲಿದೆ. ಅಖಿಲ ಭಾರತ ಮಟ್ಟದ ರೈತ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಕರ್ನಾಟಕದಲ್ಲಿ ರೈತ ಹೋರಾಟದ ಮುಂದಿನ ರೂಪುರೇಷೆಗಳನ್ನು ಚರ್ಚಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು