ಸಿಯೋಲ್(13-10-2020): ಉತ್ತರ ಕೊರಿಯಾದ ಸರ್ವಾಧಿಕಾರಿ, ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಬೆದರಿಕೆ ಹಾಕಿದ್ದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಣ್ಣೀರು ಹಾಕಿದ ಅಪರೂಪದ ಘಟನೆ ವರದಿಯಾಗಿದೆ.
ಕೊರೊನಾ ವೈರಸ್ ಸಾಂಕ್ರಾಮಿಕದ ವೇಳೆ ಉತ್ತರ ಕೊರಿಯಾದ ಜನರೊಂದಿಗೆ ಇರಲು ವಿಫಲವಾಗಿದ್ದಕ್ಕೆ ಕಿಮ್ ಜಾಂಗ್ ಕ್ಷಮೆಯಾಚಿಸಿದ್ದಾರೆ.
ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ’ದ 75ನೇ ಸಂಸ್ಥಾಪನಾ ದಿನದದಲ್ಲಿ ಮಾತನಾಡುತ್ತಿದ್ದ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್, ‘ಉತ್ತರ ಕೊರಿಯನ್ನರು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕಂತೆ ನಾನು ನಡೆದುಕೊಂಡಿಲ್ಲ. ನಮ್ಮ ಜನರು ನನ್ನ ಮೇಲೆ ಆಕಾಶದಷ್ಟು ಎತ್ತರಕ್ಕೆ ಮತ್ತು ಸಮುದ್ರದಷ್ಟು ಆಳವಾದ ನಂಬಿಕೆ ಇಟ್ಟಿದ್ದಾರೆ. ಆದರೆ ನಾನು ತೃಪ್ತಿಕರವಾಗಿ ನಡೆದುಕೊಳ್ಳುವಲ್ಲಿ ವಿಫಲವಾಗಿದ್ದೇನೆ. ಅದಕ್ಕಾಗಿ ನಾನು ನಿಜವಾಗಿಯೂ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.
ಉತ್ತರ ಕೊರಿಯಾದಲ್ಲಿ ಕರೊನಾ ಯಾವ ಪ್ರಮಾಣದಲ್ಲಿ ಇದೆ ಎನ್ನುವುದು ಮಾತ್ರ ಇದುವರೆಗೆ ಬಹಿರಂಗಗೊಂಡಿಲ್ಲ. ಕೊರಿಯಾ ಕರೊನಾಮುಕ್ತವಾಗಿದೆ ಎಂದು ಕಿಮ್ ಇತ್ತೀಚೆಗೆ ಹೇಳಿದ್ದರು.