ತಿರುವನಂತಪುರಂ(11-01-2021): ಕೇಂದ್ರ ಕಾರಾಗೃಹದೊಳಗಿನ ಕೆವಿನ್ ಹತ್ಯೆ ಪ್ರಕರಣದ ಆರೋಪಿಗಳನ್ನು ಥಳಿಸಿದ ಆರೋಪ ಹೊತ್ತಿರುವ ಮೂವರು ಅಧಿಕಾರಿಗಳನ್ನು ಕೇರಳ ಕಾರಾಗೃಹ ಇಲಾಖೆ ವರ್ಗಾಯಿಸಿದೆ.
ಬಿಜುಕುಮಾರ್ ಎಸ್ ಮತ್ತು ಸನಾಲ್ ಅವರನ್ನು ಜಿಲ್ಲೆಯ ಹೊರವಲಯದಲ್ಲಿರುವ ನೇಟ್ಟುಕಲ್ಥೇರಿಯ ಜೈಲಿಗೆ ವರ್ಗಾಯಿಸಲಾಗಿದ್ದು, ಬಿಜುಕುಮಾರ್ ವಿ.ವಿ ಅವರನ್ನು ವಿಶೇಷ ಉಪ ಜೈಲು ನಿಯಂತ್ರಕರಾಗಿ ವರ್ಗಾಯಿಸಲಾಗಿದೆ.
ಬಿಜುಕುಮಾರ್ ಎಸ್ ಮತ್ತು ಸನಾಲ್ ಉಪ ಜೈಲು ಅಧಿಕಾರಿಗಳಾಗಿದ್ದಾರೆ. ಬಿಜುಕುಮಾರ್ ವಿ.ವಿ ಸಹಾಯಕ ಜೈಲು ಅಧಿಕಾರಿಯಾಗಿದ್ದಾರೆ.
ಜೈಲಿನ ಡೆಪ್ಯೂಟಿ ಇನ್ಸ್ ಪೆಕ್ಟರ್ ಜನರಲ್ (ಡಿಐಜಿ) ಪಿ.ಅಜಯಕುಮಾರ್ ಈ ಕುರಿತು ಮಾಹಿತಿ ತಿಳಿಸಿದ್ದು, ಈ ಪ್ರಕರಣದ ಆರೋಪಿಗಳು ಮತ್ತು ಥಳಿಸಿದ ಆಪಾದನೆಗೆ ಒಳಗಾಗಿರುವ ಅಧಿಕಾರಿಗಳು ಒಂದೇ ಕಾರಾಗೃಹದಲ್ಲಿದ್ದರುವುದು ಸೂಕ್ತವಲ್ಲ. ಆದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದ್ದಾರೆ.
ಕ್ಯಾಥೋಲಿಕ್ ತಂದೆ- ಮುಸ್ಲಿಂ ತಾಯಿ ದಂಪತಿಯ ಮಗಳು ನೀನುಳನ್ನು ಮದುವೆಯಾದ ನಂತರ ಮೇ ತಿಂಗಳಲ್ಲಿ 23 ವರ್ಷದ ದಲಿತ ಕ್ರಿಶ್ಚಿಯನ್ ಕೆವಿನ್ ಜೋಸೆಫ್ ಅವರನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು.
ಆಗಸ್ಟ್ 2019 ರಲ್ಲಿ, ನೀನು ಅವರ ಸಹೋದರ ಶಾನು ಮತ್ತು ಟಿಟ್ಟು ಜೆರೋಮ್ ಸೇರಿದಂತೆ ಹತ್ತು ಜನರಿಗೆ ಕೊಟ್ಟಾಯಂನ ಪ್ರಧಾನ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಟಿಟ್ಟುವಿನ ಪೋಷಕರು ಈಗ ಟಿಟ್ಟು ಅವರನ್ನು ಜೈಲಿನಲ್ಲಿ ಥಳಿಸಲಾಗಿದೆ ಎಂದು ಆರೋಪಿಸಿದ್ದಾರೆ.