ಕೇಂದ್ರ ಸರ್ಕಾರ ಇಂಧನ ದರ ಹೆಚ್ಚಿಸುವುದು ಲೂಟಿ ಅಲ್ಲದೇ ಮತ್ತೇನು? ಇದೇನಾ ಅಚ್ಛೇ ದಿನ್? : ಸಿದ್ದರಾಮಯ್ಯ ವಾಗ್ದಾಳಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ವಿದ್ಯುತ್, ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರವನ್ನು ಮನಸೋಯಿಚ್ಛೆ ಏರಿಸುವ ಮೂಲಕ ಕೊರೊನಾದಿಂದ ಸಂಕಷ್ಟದಲ್ಲಿರುವ ಜನರ ತಲೆಯ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಚಪ್ಪಡಿ ಎಳೆದಿವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ವಿದ್ಯುತ್ ದರವನ್ನು ರಾಜ್ಯ ಸರ್ಕಾರ ಕಳೆದ ಒಂದು ವರ್ಷದಲ್ಲಿ ಶೇ. 30ರಷ್ಟು ಏರಿಸಿದೆ. ಇದು ರಾಜ್ಯದ ಇತಿಹಾಸದಲ್ಲಿಯೇ ಮೊದಲು. ರಾಜ್ಯದಲ್ಲಿ ಉತ್ಪಾದನೆ ಹೆಚ್ಚಾಗಿದ್ದರೂ ಕೇಂದ್ರ ಸರ್ಕಾರ ಮತ್ತು ಅದಾನಿ ಕಂಪನಿಯಿಂದ ಹೆಚ್ಚು ದರಕ್ಕೆ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ಅದಕ್ಷತೆ ಕಾರಣ. ಮನಮೋಹನಸಿಂಗ್ ಅವರು ಪೆಟ್ರೋಲ್ ಬೆಲೆ ಕೇವಲ ರೂ.1 ಏರಿಕೆ ಮಾಡಿದಾಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರು ತೀವ್ರ ವಿರೋಧ ಮಾಡಿದ್ದರು. ಬಿಜೆಪಿ ದೇಶವ್ಯಾಪಿ ಪ್ರತಿಭಟನೆ ನಡೆಸಿತ್ತು. ಈಗ ನಿತ್ಯವೂ ದರ ಏರಿಕೆಯಾಗುತ್ತಲೇ ಇದೆ. ತಾವೇ ವಿರೋಧಿಸಿ, ಈಗ ತಾವೇ ಬೆಲೆಯೇರಿಕೆ ಮಾಡಲು ಬಿಜೆಪಿ ನಾಯಕರಿಗೆ ನಾಚಿಕೆಯಾಗಲ್ವೇ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ 125 ಡಾಲರ್ ಇತ್ತು. ಆಗ ಪೆಟ್ರೋಲ್, ಡೀಸೆಲ್ ದರವನ್ನು ಈ ಪ್ರಮಾಣದಲ್ಲಿ ಏರಿಕೆ ಮಾಡಿರಲಿಲ್ಲ. ಮೋದಿಯವರು ಪ್ರಧಾನಿಯಾದ ಬಳಿಕ ಒಂದು ಹಂತದಲ್ಲಿ ಕಚ್ಛಾ ತೈಲ ದರ 46-47 ಡಾಲರ್‌ಗೆ ಕುಸಿದಿತ್ತು. ಆಗ ಗ್ರಾಹಕರಿಗೆ ಕಡಿಮೆ ಬೆಲೆಗೆ ಕೊಟ್ಟಿದ್ದರೆ? ಪೆಟ್ರೋಲ್, ಡೀಸೆಲ್ ಮಾರಾಟದ ಮೇಲಿನ ಅಬಕಾರಿ ಸುಂಕ 2013-14ರಲ್ಲಿ 3.45 ರೂ. ಹಾಗೂ 9.25 ರೂ. ಇತ್ತು. ಈಗ ಪೆಟ್ರೋಲ್ ಮಾರಾಟದ ಮೇಲೆ 31.84 ರೂ. ಡೀಸೆಲ್ ಮಾರಾಟದ ಮೇಲೆ, 32.98 ರೂ. ಹೆಚ್ಚಿಸಲಾಗಿದೆ.

ರಾಜ್ಯ ಸರ್ಕಾರ ಪೆಟ್ರೋಲ್ ಮಾರಾಟದ ಮೇಲೆ ಶೇ. 35, ಡೀಸೆಲ್ ಮಾರಾಟದ ಮೇಲೆ ಶೇ. 24 ತೆರಿಗೆ ವಿಧಿಸುತ್ತಿದೆ. ಅಡುಗೆ ಅನಿಲದ ಸಿಲಿಂಡರ್ ಬೆಲೆ 414 ರೂ.ಗಳಿಂದ 850 ರೂ.ಗಳಿಗೆ ಏರಿಕೆಯಾಗಿದೆ. ಇದು ಲೂಟಿ ಅಲ್ಲದೇ ಮತ್ತೇನು? ಇದೇನಾ ಅಚ್ಛೇ ದಿನ್?
ಬೆಲೆ ಏರಿಕೆ ಹಿನ್ನೆಲೆಯಲ್ಲಿ ಎಐಸಿಸಿ ಸೂಚನೆ ಮೇರೆಗೆ ರಾಜ್ಯದಲ್ಲಿ 5 ದಿನಗಳ ಕಾಲ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೊರೊನಾದಿಂದ ಸುಮ್ಮನಿರ್ತಾರೆ, ಲಾಕ್‍ಡೌನ್ ಇರುವ ಕಾರಣ ಹೊರಗೆ ಬಂದು ಪ್ರತಿಭಟನೆ ಮಾಡುವುದಿಲ್ಲ ಎಂದು ಜನರ ತಲೆಯ ಮೇಲೆ ಚಪ್ಪಡಿ ಎಳೆಯುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತಿವೆ ಎಂದಿದ್ದಾರೆ.

ದೇವಾಲಯಗಳಿಗೆ ನೀಡುವ ತಸ್ತೀಕ್ ಹಣ, ಮಸೀದಿ, ಚರ್ಚ್ ಹಾಗೂ ಗುರುದ್ವಾರಗಳಿಗೆ ನೀಡುತ್ತಿರುವ ಅನುದಾನವನ್ನು ರಾಜ್ಯ ಸರ್ಕಾರ ಮುಂದುವರಿಸಬೇಕು. ಕೊರೊನಾ ಸಂಕಷ್ಟ ಯಾರನ್ನೂ ಬಿಟ್ಟಿಲ್ಲ, ಹೀಗಿರುವಾಗ ಜಾತಿ, ಧರ್ಮದ ಆಧಾರದ ಮೇಲೆ ವಿಂಗಡಣೆ ಮಾಡುವುದು ಸರಿಯಲ್ಲ. ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಹಗರಣದ ಬಗ್ಗೆ ಸಹಕಾರ ಸಚಿವರು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಮಾತನಾಡಿ ತನಿಖೆಗೆ ಒತ್ತಾಯ ಮಾಡಿದ್ದೇನೆ. ತನಿಖೆಗೂ ಮೊದಲು ಇಡೀ ಒಕ್ಕೂಟವನ್ನು ಸೂಪರ್ ಸಿಡ್ ಮಾಡಬೇಕೆಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಶಾಸಕರ ಕ್ಷೇತ್ರಗಳಿಗೆ ಬಿಡುಗಡೆ ಮಾಡುವ ಅನುದಾನದಲ್ಲಿ ಶೇ.50 ಅನ್ನು ಕೊರೊನಾ ನಿಯಂತ್ರಣಕ್ಕೆ ಬಳಕೆ ಮಾಡುವಂತೆ ಸರ್ಕಾರವೇ ಹೇಳಿದೆ. ಶಾಸಕರ ಅನುದಾನದಲ್ಲಿ ಕೊರೊನಾ ಲಸಿಕೆ ಖರೀದಿ ಮಾಡಿ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡಿದರೆ ಅದು ಪಕ್ಷದ ಕಾರ್ಯಕ್ರಮ ಹೇಗಾಗುತ್ತದೆ? ಲಸಿಕೆ ನೀಡುವಲ್ಲಿ ಸರ್ಕಾರ ವಿಫಲವಾಗಿರುವುದರಿಂದ ನಾವು ಆ ಕೆಲಸ ಮಾಡಲು ಮುಂದಾಗಿದ್ದೆವು. ಬಿಜೆಪಿ ಶಾಸಕರೂ ಜನರಿಗೆ ಉಪಕಾರ ಮಾಡುವ ಮನಸ್ಸಿದ್ದರೆ ತಮ್ಮ ಕ್ಷೇತ್ರದ ಅನುದಾದನದಲ್ಲಿ ಲಸಿಕೆ ಖರೀದಿ ಮಾಡಿ ಜನರಿಗೆ ಕೊಡಲಿ. ಬೇಡ ಎಂದವರು ಯಾರು?
ಶಾಸಕರು ತಮ್ಮ ಸ್ವಂತ ಹಣವನ್ನು ಲಸಿಕೆ ಖರೀದಿ ಮಾಡಲಿ ಎಂದು ನಾರಾಯಣಗೌಡರು ಹೇಳಿದ್ದಾರೆ. ನಮ್ಮ‌ ಪಕ್ಷದ ಶಾಸಕರು ಸ್ವಂತ ಖರ್ಚಿನಿಂದ ಆಂಬ್ಯುಲೆನ್ಸ್, ಮೆಡಿಸನ್ ಕಿಟ್ ಮತ್ತಿತರ ಸಾಮಗ್ರಿಗಳನ್ನು ನೀಡುತ್ತಿದ್ದಾರೆ. ಈ ವಿಚಾರದಲ್ಲಿ ನಾರಾಯಣ ಗೌಡ ಅವರು ನಮಗೆ ಉಪದೇಶ ಕೊಡುವುದು ಬೇಡ ಎಂದು ಗುಡುಗಿದ್ದಾರೆ.

ಮೈಸೂರಿನ ಭೂ ಹಗರಣಗಳ ಬಗ್ಗೆ ತನಿಖೆ ನಡೆದು ಸತ್ಯಾಂಶ ಹೊರಬರಬೇಕು. ಈ ವಿಷಯದಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತು ರೋಹಿಣಿ ಸಿಂಧೂರಿ ಹೇಳಿಕೆಗಳನ್ನು ನೀಡಿದ್ದಾರೆ. ರಾಜ ಕಾಲುವೆ ಮೇಲೆ ಮಾಜಿ ಸಚಿವ ಸಾ.ರಾ. ಮಹೇಶ್ ಕಲ್ಯಾಣ ಮಂಟಪ ಕಟ್ಟಿದ್ದಾರೋ ಇಲ್ಲವೋ ಎಂಬುದು ತನಿಖೆ ನಡೆದಾಗ ಮಾತ್ರ ಗೊತ್ತಾಗುತ್ತದೆ.ಸಂಸದ ಪ್ರತಾಪ್ ಸಿಂಹ ತೆಲುಗು ಭಾಷೆಯಲ್ಲಿ ನನ್ನನ್ನು ಸಿದ್ದರಾಮಯ್ಯಗಾರು ಎಂದಿದ್ದಾರೆ. ನಾನು ಇದನ್ನು ಸಕಾರಾತ್ಮಕವಾಗಿಯೇ ಸ್ವೀಕಾರ ಮಾಡುತ್ತೇನೆ. ನನಗೆ ಗೌರವ ನೀಡಲು ಈ ರೀತಿ ಸಂಬೋಧಿಸಿದ್ದಾರೆ ಎಂದು ತಿಳಿದುಕೊಂಡಿದ್ದೇನೆ.
ಸಂಸದ ಪ್ರತಾಪ್ ಸಿಂಹ ಅವರಿಗೆ ರಾಜಕೀಯವಾಗಿ ಇನ್ನೂ ಪ್ರಬುದ್ಧತೆ ಬಂದಿಲ್ಲ. ಮೊದಲು ರೋಹಿಣಿ ಸಿಂಧೂರಿ ಪರ ಇದ್ದವರು ಯಾರು? ಈಗ ಅವರು ಬದಲಾದದ್ದು ಏಕೆ? ಸ್ವಾರ್ಥಕ್ಕಾಗಿ ತಮ್ಮ ನಿಲುವುಗಳನ್ನು ಬದಲಾವಣೆ ಮಾಡಿಕೊಳ್ಳುವವರು ಅಪ್ರಬುದ್ಧ ರಾಜಕಾರಣಿಗಳು ಎಂದು ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಅವರನ್ನು ಬದಲಿಸಿ ಎಂದು ನಾವ್ಯಾರೂ ಒತ್ತಾಯ ಮಾಡಿಲ್ಲ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದಾದರೆ ಶಾಸಕರಾದ ಬಸನಗೌಡ ಯತ್ನಾಳ್, ಅರವಿಂದ ಬೆಲ್ಲದ್, ವಿಶ್ವನಾಥ್, ರೇಣುಕಾಚಾರ್ಯ ಹಾಗೂ ಸಚಿವ ಯೋಗೀಶ್ವರ್ ವಿರುದ್ಧ ಬಿಜೆಪಿ ಹೈ ಕಮಾಂಡ್ ಏಕೆ ಕ್ರಮ ಕೈಗೊಂಡಿಲ್ಲ? ಬಿಜೆಪಿಯಲ್ಲಿ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಎರಡೂ ದುರ್ಬಲ. ಅರುಣಸಿಂಗ್ ಅವರು ಬದಲಾವಣೆ ಬಗ್ಗೆ ಮಾತನಾಡಬೇಡಿ ಎಂದಿದ್ದಾರೆ. ಹಾಗಾದರೆ ಬದಲಾವಣೆ ಆಗಬೇಕು ಎಂದವರ ವಿರುದ್ಧ ಕ್ರಮ ಏಕಿಲ್ಲ? ಇದರಿಂದ ರವಾನೆಯಾಗುವ ಸಂದೇಶ ಏನು? ಎಂದು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು