ಹೊಸದೆಹಲಿ(24/10/2020): ಕೋವಿಡ್-19 ಲಸಿಕೆ ಕೇವಲ ಬಿಹಾರಿಗಳಿಗೆ ಮಾತ್ರವಲ್ಲ ದೇಶದ ಸರ್ವ ಜನರಿಗೆ ಲಸಿಕೆಯನ್ನು ಉಚಿತವಾಗಿ ಹಂಚಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಆಗ್ರಹಿಸಿದ್ದಾರೆ.
ಈಶಾನ್ಯ ದೆಹಲಿಯಲ್ಲಿ ಎರಡು ಮೇಲು ಸೇತುವೆ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಬಿಹಾರದ ಜನತೆಗೆ ಉಚಿತವಾಗಿ ಕೋವಿಡ್ 19 ಲಸಿಕೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಇದರ ಬದಲು ಇಡೀ ದೇಶವೇ ಉಚಿತವಾಗಿ ಕೋವಿಡ್-19 ಲಸಿಕೆ ಪಡೆಯಬೇಕು. ಅದು ದೇಶದ ಜನತೆಯ ಹಕ್ಕ ಎಂದರು.
ಕೊರೊನಾ ವೈರಸ್ ಸೋಂಕಿನಿಂದಾಗಿ ಕೇವಲ ಬಿಹಾರದ ಜನರು ಮಾತ್ರವಲ್ಲ ದೇಶದ ಸರ್ವ ಜನರು ಸಮಸ್ಯೆಗೆ ಸಿಲುಕಿದ್ದಾರೆ. ಹಾಗಾಗಿ ಲಸಿಕೆಯು ದೇಶದ ಪ್ರತಿಯೊಬ್ಬರಿಗೂ ಲಭ್ಯವಾಗಬೇಕು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.