ಕತರಿನಲ್ಲಿ ಕೊರೋನಾ ಸಮಯದಲ್ಲಿ ಹೊಸದಾಗಿ ಉದ್ಯೋಗ ವೀಸಾ ನೀಡುವುದನ್ನು ನಿಲ್ಲಿಸಲಾಗಿತ್ತು. ಆದರೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಿಗಳ ಅಗತ್ಯತೆ ಕಂಡು ಬಂದಿರುವುದರಿಂದಲೂ, ಕತರಿನಲ್ಲಿ ಕೊರೋನಾ ರೋಗವು ನಿಯಂತ್ರಣಕ್ಕೆ ಬಂದಿರುವುದರಿಂದಲೂ ಹೊಸದಾಗಿ ಉದ್ಯೋಗ ವೀಸಾ ನೀಡಲು ಆರಂಭಿಸಲಾಗಿದೆ. ಆದರೆ ಸದ್ಯಕ್ಕೆ ಆಫ್ರಿಕಾದ ದೇಶಗಳಿಂದ ಮಾತ್ರವೇ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುಮತಿ ಲಭಿಸಿದೆ.
ನಿನ್ನೆ ತಾನೇ ಕೀನ್ಯಾ ದೇಶದಿಂದ ಮೂವತ್ತು ಮಂದಿ ಹೊಸ ಉದ್ಯೋಗಾಕಾಂಕ್ಷಿಗಳು ದೋಹಾ ತಲುಪಿದರು. ಕಿನ್ಯಾ ಮಾತ್ರವಲ್ಲದೇ, ವಿವಿಧ ಆಫ್ರಿಕನ್ ದೇಶಗಳಿಂದ ಮುನ್ನೂರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ವೀಸಾದಡಿಯಲ್ಲಿ ಬರಲು ಅನುಮತಿ ನೀಡಲಾಗಿದಯೆಂದು ಪ್ರಮುಖ ಮ್ಯಾನ್ ಪವರ್ ಕಂಪೆನಿಯ ವಕ್ತಾರ “ಕತರ್ ಟ್ರಿಬ್ಯೂನಿ”ಗೆ ತಿಳಿಸಿದರು.
ಇವರೆಲ್ಲರೂ ಈ ತಿಂಗಳಿನಿಂದಲೇ ಉದ್ಯೋಗಕ್ಕೆ ಸೇರಲಿರುವರು. ಅದೇ ವೇಳೆ ಏಷ್ಯಾ ದೇಶಗಳಿಂದ ಹೊಸ ಉದ್ಯೋಗ ವೀಸಾದಡಿಯಲ್ಲಿ ಕತರಿಗೆ ಬರಲು ಇದುವರೆಗೆ ಅನುಮತಿ ಲಭಿಸಿಲ್ಲ. ಭಾರತ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದ ಬಳಿಕವಷ್ಟೇ ಇಂತಹ ವೀಸಾಗೆ ಅನುಮತಿ ಲಭಿಸಬಹುದೆಂಬ ಅಭಿಪ್ರಾಯಗಳು ಕೇಳಿಬರುತ್ತಿದೆ.