ಕರ್ನಾಟಕಕ್ಕಂತೂ ಇದು ಕೆಟ್ಟಕಾಲ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕರ್ನಾಟಕಕ್ಕಂತೂ ಇದು ಕೆಟ್ಟಕಾಲ.‌‌‌‌..‌!?

– ಬಾಲಾಜಿ ಕುಂಬಾರ, ಲೇಖಕರು

ಸರ್, ನಾನು ಕಮಲಕ್ಕೆ ಓಟ್ ಹಾಕಿದ್ದೇನೆ,
ದಯವಿಟ್ಟು ನನ್ನ ತಾಯಿಗೆ ಆಕ್ಸಿಜನ್ ಕೊಡ್ಸಿ‌‌‌‌.‌‌‌‌‌‌..‌!
ಸರಿಯಾದ ಸಮಯಕ್ಕೆ ಬೆಡ್ ಸಿಗದೆ ಸೋಂಕಿತರ ಸಾವು, ಆಕ್ಸಿಜನ್ ಕೊರತೆಯಿಂದ ಹತ್ತಾರು ಜನರ ಸಾವು, ಆಸ್ಪತ್ರೆಯಲ್ಲಿ ಆಕ್ಸಿಜನ್ ಪೈಪ್ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ, ಬೆಡ್ ಸಿಗದೇ ಫುಟ್ ಪಾತ್ ಮೇಲೆ ನರಳಾಟ, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸೋಂಕಿತರ ಸಾವು, ತಂದೆ – ತಾಯಿ ಕಳೆದುಕೊಂಡ ಮಕ್ಕಳು ಅನಾಥ, ಗಂಡ ಸತ್ತ ನಾಲ್ಕು ದಿನಕ್ಕೆ ಹೆಂಡತಿ ಕೋವಿಡ್ ಗೆ ಬಲಿ, ಹಸೆಮಣೆ ಏರುವ ಮುನ್ನ ದಿನ ಮದುಮಗ ಕೊರೊನಾಗೆ ಬಲಿ, ಮಗನಿಗೆ ಕೊರೊನಾ ಬಂತೆಂದು ಭಯಪಟ್ಟು ತಂದೆ ಸಾವು.‌‌‌‌‌..ಇವೆಲ್ಲವೂ ಕೊರೊನಾ ದಿನಗಳಲ್ಲಿ ಘಟಿಸಿದ ಕರುಣಾಜನಕ ಕಥೆಗಳು..ಕರುಳು ಕಿತ್ತು ಬರುವ ಇಂಥ ತೀವ್ರ ಸಂಕಟ, ನೋವು, ಯಾತನೆ, ಕಣ್ಣೀರು, ಚೀರಾಟ, ಹತಾಶೆ, ಅಸಹಾಯಕತೆ…ಎಲ್ಲವೂ ಪ್ರತಿದಿನ ಕಂಡಿಯೂ ಕೇಳಿಯೂ, ನೋಡಿಕೊಂಡು ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಬದುಕುಬೇಕಾದ ಅನಿವಾರ್ಯತೆ ಎದುರಾಗಿದೆ.

ಕೊರೊನಾ ಎರಡನೇ ಅಲೆಯ ಭಯಾನಕ ಆಕ್ರಮಣ ಇಷ್ಟೊಂದು ಕ್ರೂರವಾಗಿ ಇರುತ್ತದೆ ಎಂದು ಬಹುಶಃ ಯಾರಿಗೂ ಗೊತ್ತೇ ಇರಲಿಲ್ಲವೇನೋ ಅನ್ಸುತ್ತೆ. ಈ ಹಿಂದೆ ತಜ್ಞರು ಇದರ ಕರಾಳಮುಖದ ಕುರಿತು ಸಂಶೋಧನೆ ನಡೆಸಿ ಮುಂದಿನ ಅನಾಹುತ ಬಗ್ಗೆ ಎಚ್ಚರಿಕೆ ನೀಡಿದ್ದಾರೆ, ಆದರೂ ಅದನ್ನು ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವ ದರ್ದು, ಕಳಕಳಿ ಸರ್ಕಾರ ಮಾಡಲಿಲ್ಲ. ಭಾರತಕ್ಕೆ ವ್ಯಾಪಿಸಿದ ಕೊರೊನಾ 2020ರ ಅಕ್ಟೋಬರ್ – ನವೆಂಬರ್ ವೇಳೆಗೆ ಕೊರೊನಾ ಒಂದನೇ ಅಲೆ ಪ್ರಭಾವ ಸ್ವಲ್ಪ ಮಟ್ಟಿಗೆ ಇಳಿಮುಖ ಕಂಡಿತ್ತು. ಎಲ್ಲ ವ್ಯವಹಾರಗಳು ಎಂದಿನಂತೆ ಚುರುಕುಗೊಂಡು ನಡೆದವು, ಲೆಫ್ಟ್, ರೈಟು ಹಾಗೂ ಬಾಟಮ್ ಎಲ್ಲಾ ಕಡೆಯಿಂದಲೂ ಭಾರತ ದೇಶ ಕೊರೊನಾಗೆ ಓಡಿಸಿ, ಕೊರೊನಾ ಯುದ್ಧ ಗೆದ್ದು ಬೀಗಿದೆ ಎನ್ನುವ ಮೇಡಿಯಾ ಹವಾ ತಂತಾನೇ ಸೃಷ್ಟಿಸಿದರು.
ಆ ಕೊರೊನಾ ಕೂಡ ಹಾಗೇ ಬಿಡಿ, ಅಂದು ಪ್ರತಿ ಜಿಲ್ಲೆಯಲ್ಲಿ 50-60 ಕೇಸ್ ಪತ್ತೆಯಾಗುವ ಬದಲು ಒಂದಂಕಿ, ಜೀರೋ ಗೆ ಸಮಾಧಾನ ಪಟ್ಟಿತ್ತು. ಜನರಿಗೆ ಭಯದಿಂದ ಮುಕ್ತಗೊಳಿಸಿತ್ತು. ಕೊರೊನಾದ ಮೊದಲ ನಿಟ್ಟುಸಿರು ಅದಾಗಿತ್ತು.

ಮತ್ತೆ ಎಂದಿನಂತೆ ಶಾಲಾ, ಕಾಲೇಜು, ಸಿನಿಮಾ, ಪಾಲಿಟಿಕ್ಸ್ ಎಲ್ಲವೂ ಓಪನ್, ಕೊರೊನಾ ಕರಾಳ ದಿನಗಳ ನಂತರ ಹೊಸ ವರ್ಷಕ್ಕೆ ಕಾಲಿಟ್ಟೇವು, ಚೀನಾದಿಂದ ಬಂದಿರುವ ‘ಚೈನಾ ಪೀಸ್’ ವೈರಸ್ ಅಂದರೆ ‘ಒನ್ ಇಯರ್ ಅಷ್ಟೇ ವೆಲಿಡಿಟಿ’ ಇರುತ್ತದೆ, ಈಗ ಬಹುಶಃ ಹೋಗಿರಬಹುದು ಎಂದೇ ಬಹುತೇಕರು ನಿಟ್ಟುಸಿರು ಬಿಟ್ಟು ತಮ್ಮ ಕೆಲಸಗಳಲ್ಲಿ ತೊಡಗಿದರು. ಸರ್ಕಾರಗಳೂ ಅಷ್ಟೇ ನಿರ್ಲಕ್ಷ್ಯ ತೋರಿದರು. ಐವತ್ತು ,ನೂರು ಜನಗಳಿಗೆ ಸೀಮಿತವಾದ ಕೋವಿಡ್ ಸಿಂಪಲ್ ಮ್ಯಾರೇಜ್ ಗಳು ಮತ್ತೆ ಸಾವಿರಾರು ಜನಗಳ ಮಧ್ಯೆ ಭವ್ಯ ಮೆರವಣಿಗೆಗಳಿಗೆ ಸಾಕ್ಷಿಯಾದವು, ಲಕ್ಷಾಂತರ ಜನರು ಸೇರುವ ಎಲೆಕ್ಷನ್ ರೋಡ್ ಶೋ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚುನಾವಣೆಗಳು, ಮತ್ತದೇ ರಾಗ ಅದೇ ತಾಳ, ಕೊರೊನಾ ಕಥೆ ನೆನಪು ಹೋದವು, ಕೊರೊನಾ ಕೂಡ ಅಷ್ಟೇ.‌‌..‌‌ಒಂದಿಷ್ಟು ರಜೆ ತೆಗೆದುಕೊಂಡಿತ್ತು, ಕೊರೊನಾ ಕಾಟಕ್ಕೆ ಸಿಲುಕಿದ ಜನರು ಒಂದಿಷ್ಟು ಮಜಾ ಮಾಡಲು ಮುಂದಾದರು,

ಈ ಗ್ಯಾಪ್ ನಲ್ಲಿ ಸರ್ಕಾರಗಳ ನಿರ್ಲಕ್ಷ್ಯ, ಬೇಜವಾಬ್ದಾರಿ, ರಾಜಕೀಯ ಹೊಡೆದಾಟ, ಕೆಸರೆರಚಾಟ, ಪಂಚ್ ರಾಜ್ಯ ಚುನಾವಣೆ, ಬೈ ಎಲೆಕ್ಷನ್, ಪರೀಕ್ಷೆ, ಫಲಿತಾಂಶ, ಬಜೆಟ್, ಕಲಾಪ, ಚರ್ಚೆ, ಹಾರಾಟ, ಲಕ್ಷಾಂತರ ಜನರ ಮಧ್ಯೆ ಕುಂಭಮೇಳ.. ಎಲ್ಲವೂ ವೈಭವವಾಗಿ ನಡೆದು ಹೋದವು, ಆವಾಗ ಯಾರಿಗೂ ಕೋವಿಡ್ ಬಗ್ಗೆ ಯೋಚನೆ ಮಾಡಲಿಲ್ಲ, ಪಾಸಿಟಿವ್ ರೇಟ್ ಗೊತ್ತಿರಲಿಲ್ಲ. ಎಲೆಕ್ಷನ್ ಪ್ರಚಾರದ ಭರಾಟೆಯಲ್ಲಿ ಜನತೆಗೆ ಲಸಿಕೆ ನೀಡುವ ಅಭಿಯಾನ ಕೂಡ ನೆನಪಿಗೆ ಬರಲಿಲ್ಲ. ಎರಡನೇ ಅಲೆಯ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳು ಕೈಗೊಳ್ಳಲು ಸಾಧ್ಯ ಆಗಲಿಲ್ಲ. ‘ಒಟ್ಟಿನಲ್ಲಿ ನಾವೇ ಗೆಲ್ಲಬೇಕು, ಎಲ್ಲಾ ರಾಜ್ಯಗಳಲ್ಲಿ ನಮ್ಮ ಅಧಿಕಾರ ಇರಬೇಕು’ ಎಂಬುದಷ್ಟೇ ಟಾರ್ಗೆಟ್, ರಾಜಕೀಯ ಪಡಸಾಲೆಯಲ್ಲಿ ಪರಸ್ಪರ ಏಟು – ತಿರುಗೇಟು, ಚರ್ಚೆ, ಪ್ರಚಾರ, ತಂತ್ರ, ಭಾಷಣ, ಭರವಸೆಗಳು ಎಲ್ಲವೂ ಆಯ್ತು, ಮತ್ತೆ ಎಚ್ಚರಗೊಂಡ ಕೊರೊನಾ ರಣಕೇಕೆ ಆರಂಭಿಸಲು ಮುಂದಾಗಿತ್ತು.

ಅಂದು ಜಿಲ್ಲೆಗೊಂದು ಕೊರೊನಾ ಕೇಸ್ ವರದಿಯಾದರೆ ಸಾಕು, ಭಯಭೀತರಾಗಿದ್ದ ನಾವು ಇಂದು ರಾಜ್ಯದಲ್ಲಿ ಪ್ರತಿದಿನ ಅರ್ಧ ಲಕ್ಷ ಜನರಿಗೆ ಕೊರೊನಾ ಪಾಸಿಟಿವ್ ಪತ್ತೆ ಆಗಿರುವ ವರದಿ ನೋಡಿದರೂ ಅಬ್ಬಾ‌‌! ಎಂದು ಸುಮ್ಮನಾಗುತ್ತಿದ್ದೇವೆ. ಇನ್ಮುಂದೆ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಲಾಕ್ ಡೌನ್ ಹೇರುವುದಿಲ್ಲ ಎಂದವರು ಚುನಾವಣೆ ನಂತರ ವರಸೆ ಬದಲಾಯಿಸಿದರು. ಮತ್ತೆ ರಾಜ್ಯದಲ್ಲಿ ಅಘೋಷಿತ ಲಾಕ್ ಡೌನ್ ಅಸ್ತ್ರ ಪ್ರಯೋಗ ಮಾಡಿದರು. ಬಡ ಜನರಿಗೆ ಯಾವುದೇ ಆರ್ಥಿಕ ನೆರವು ನೀಡದೇ ಕಠಿಣ ಲಾಕ್ ಡೌನ್ ಘೋಷಣೆ ಮಾಡಿದ ಮುಖ್ಯಮಂತ್ರಿಗಳು. ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ಆಕ್ಸಿಜನ್ ಇಲ್ಲದೇ ಜನರು ಪರದಾಟ ನಡೆಸುತ್ತಿದ್ದಾರೆ. ನಮಗೆ ಆಮ್ಲಜನಕ ಕೊಡಿ ಎಂದು ಹೈಕೋರ್ಟ್ ಗೆ ಕೇಳಬೇಕಾದ ಪರಿಸ್ಥಿತಿ ರಾಜ್ಯದಾದರೆ, ರಾಜ್ಯದ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸುವ ಕೇಂದ್ರ ಸರ್ಕಾರ. ರಾಜ್ಯ ಹಾಗೂ ಕೇಂದ್ರದಲ್ಲಿಯೂ ಒಂದೇ ಸರ್ಕಾರ ಒಂದೇ ಪಕ್ಷದವರು, ಆದರೂ ಕೊಡಬೇಕಾದ ನೆರವು ರಾಜ್ಯಕ್ಕೆ ನೀಡದೇ ತಾರತಮ್ಯ ಎಸಗುವ ಕೇಂದ್ರ ಸರ್ಕಾರ. ಬೇಡುವರು ಮೌನ, ಕೊಡುವರು ಇನ್ನೂ ಮೌನ.

ಒಂದು ಡೋಸ್ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಲಭ್ಯವಿಲ್ಲ. ಮೊದಲ ಡೋಸ್ ಪಡೆಯಬೇಕಾದರೆ ಲಸಿಕೆಯ ಕೊರತೆ, ಈ ಮಧ್ಯೆ 18 ವರ್ಷ ಮೇಲ್ಪಟ್ಟವರಿಗೆ ಮೇ 1 ರಿಂದ ಲಸಿಕೆ ಅಭಿಯಾನ ಆಯ್ತು, ನೋಂದಣಿ ಆರಂಭವಾಯ್ತು, ಈಗ ಲಸಿಕೆಯೇ ಲಭ್ಯವಿಲ್ಲ, ಯಾರೂ ಲಸಿಕಾ ಕೇಂದ್ರಕ್ಕೆ ಹೋಗಬೇಡಿ ಎಂದು ಸಮಜಾಯಿಷಿ ನೀಡುವ ಸಚಿವರು. ಇವರ ಮಧ್ಯೆ ಸಾವಿರಾರು ರೂಪಾಯಿಗಳಿಗೆ ಆಕ್ಸಿಜನ್ ಸಿಲಿಂಡರ್, ಲಸಿಕೆಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಖದೀಮರು ಬೇರೆ ಇದ್ದಾರೆ. ದಿನಗೂಲಿ ಮಾಡಿ ಜೀವನ ಸಾಗಿಸುವ ಬಡಜನರು ಅಸಹಾಯಕರಾಗಿ ಬದುಕು ಹೇಗೋ ನಿರ್ವಹಣೆ ಮಾಡುತ್ತಿದ್ದಾರೆ. ಅವರಿಗೆ ಜೀವ ಇದ್ದರೆ ಜೀವನ ಎಂಬುದು ಗೊತ್ತು, ಆದರೆ ಜೀವನ ನಿರ್ವಹಣೆಗೆ ಏನೂ ಇಲ್ಲದಿದ್ದರೆ ಜೀವ ಉಳಿದಿತೇ? ಎನ್ನುವ ಚಿಂತೆಗೀಡಾಗಿದ್ದಾರೆ. ಅವರಿಗೆ ಲಸಿಕೆ ತೆಗೆದುಕೊಳ್ಳಬೇಕು ಎನ್ನುವ ಜಾಗೃತಿ ಮೂಡಿಸುವ ಪ್ರಯತ್ನವೂ ಅಷ್ಟು ಫಲ ಕೊಡಲಿಲ್ಲ. ಲಸಿಕೆಯ ಅಡ್ಡ ಪರಿಣಾಮಗಳಿಗೆ ಹೆದರಿ ಹಿಂಜರಿದ ಅದೆಷ್ಟು ಹಳ್ಳಿಗರು, ಇವರಿಗೆ ಪತ್ತೆ ಹಚ್ಚಿ ಲಸಿಕೆ ಕೊಡುವುದು ದೊಡ್ಡ ಸಾಹಸದ ಕೆಲಸ.

ಲಾಕ್ ಡೌನ್ ಮಾಡುವುದು ಎಷ್ಟು ಮುಖ್ಯವೋ ಜನರ ಬದುಕಿನ ಬಗ್ಗೆ ಚಿಂತಿಸುವುದು ಅಷ್ಟೇ ಮುಖ್ಯ, ತಮಿಳುನಾಡು, ದೆಹಲಿ, ಆಂಧ್ರಪ್ರದೇಶ ಸೇರಿದಂತೆ ನೆರೆಯ ರಾಜ್ಯಗಳು ಜನರಿಗೆ ಆಹಾರ ಹಾಗೂ ಆರ್ಥಿಕ ನೆರವು ಘೋಷಿಸಿ ನಂತರ ಲಾಕ್ ಡೌನ್ ಹೇರಿದ್ದಾರೆ‌. ತೆಲಂಗಾಣದಲ್ಲಿ ಖಾಸಗಿ ಶಿಕ್ಷಕರಿಗೂ ತಿಂಗಳಿಗೆ 2 ಸಾವಿರ ರೂಪಾಯಿ ಹಾಗೂ ಆಹಾರ ಧಾನ್ಯ ಒದಗಿಸುತ್ತಿದ್ದಾರೆ. ಇಂಥ ಜನಪರ ಚಿಂತನೆಗಳು ರಾಜ್ಯ ಸರ್ಕಾರಕ್ಕೆ ಯಾಕೆ ಹೊಳೆಯುದಿಲ್ಲ. ಸರ್ಕಾರ ಹೇರಿದ ಕಟ್ಟುನಿಟ್ಟಿನ ಬಿಗಿಕ್ರಮ ಜನರು ಅಕ್ಷರಶಃ ಪಾಲಿಸುತ್ತಾರೆ. ಆದರೆ ಜನರು ಬಾಯಿಬಿಟ್ಟು ಕೇಳುವ ಮಾತುಗಳು ಸರ್ಕಾರದ ಕಿವಿಗೆ ಅಪ್ಪಳಿಸುತ್ತಿಲ್ಲವೇ? ಇದ್ದ ಸರ್ಕಾರ ಕೆಡವಲು, ಶಾಸಕರಿಗೆ ಖರೀದಿಸಲು ಬಜೆಟ್ ಇತ್ತು, ಜನರಿಗೆ ಬೆಡ್ , ಆಕ್ಸಿಜನ್, ಆಹಾರ ಧಾನ್ಯ, ಆರ್ಥಿಕ ನೆರವು ಒದಗಿಸಲು ಬಜೆಟ್ ಇಲ್ಲವೇ? ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಉತ್ತರಿಸುವರೇ?

ಇಂಥ ಬಿಕ್ಕಟ್ಟು ಎದುರಿಸುತ್ತಿರುವ ಕಾಲದಲ್ಲಿ ಅನೇಕ ಸಂಘ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು, ಜನಪರ ಕಳಕಳಿಯ ಜನರು ತಮ್ಮ ಮಾನವೀಯತೆ ಕಾರ್ಯ ಎಗ್ಗಿಲ್ಲದೆ ಮಾಡುತ್ತಿದ್ದಾರೆ. ಸ್ಮಶಾನಗಳು ಭರ್ತಿ ಆಗುತ್ತಿವೆ‌, ಚಿತೆಯ ಬೆಂಕಿ ಆರುತ್ತಿಲ್ಲ, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ, ಹೆಣಗಳ ರಾಶಿಯ ಸಾಲು ದಿನೇದಿನೇ ಹೆಚ್ಚಾಗುತ್ತಿದೆ, ಹೆತ್ತವರನ್ನು ಕಳೆದುಕೊಂಡಿರುವ ಮಕ್ಕಳ ಮುಂದಿನ ಭವಿಷ್ಯ ಏನಾಗಬಹುದು, ಅವರಿಗೆ ಪರಿಹಾರ ಏನಾದರೂ ಇದೆಯಾ? ಈಗ ಎಲ್ಲವೂ ಮೌನ, ಸ್ತಬ್ಧ, ಎಲ್ಲೆಡೆ ಸೂತಕದ ಛಾಯೆ, ಜನಪರ, ಜೀವಪರಕ್ಕಾಗಿ ಮಿಡಿದ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುತ್ತಿರುವ ಭಾರತ ಹಾಗೂ ಕರ್ನಾಟಕಕ್ಕಂತೂ ಇದು ಕೆಟ್ಟಕಾಲ.

ಅಂದ ಹಾಗೇ, ಕಳೆದ ವರ್ಷದ ಲಾಕ್ ಡೌನ್ ದಿನಗಳು ಬೇರೆ, ಈ ಲಾಕ್ ಡೌನ್ ದಿನಗಳೇ ಬೇರೆಯಾಗಿವೆ. ಕಳೆದ ಲಾಕ್ ಡೌನ್ ದಿನಗಳಲ್ಲಿ ಜನರಿಗೆ ಎಷ್ಟು ಭಯ ಇತ್ತೋ ಅಷ್ಟೇ ಹೊಂ ಕ್ವಾರಂಟೈನ್ ನಲ್ಲಿ ಏಂಜಾಯ್ ಕೂಡ ಮಾಡಿದರು. ಮನೆಯಲ್ಲಿ ತರ ತರಹದ ಅಡುಗೆ ಮಾಡಿದರು, ಪುಸ್ತಕ ಓದಿದರು, ಹೊಸ ಮೂವೀ ವೀಕ್ಷಿಸಿದರು, ಆನ್ ಲೈನ್ ಕಾರ್ಯಕ್ರಮ ನಡೆಸಿದರು, ಕವಿತೆ ಬರೆದರು, ಕಥೆ ಹೇಳಿದರು, ಹೊಸದೊಂದು ಕಲಿಯುವ ಸಾಹಸ ಕೂಡ ಮಾಡಿದರು. ಆದರೆ ಈ ಲಾಕ್ ಡೌನ್ ದಿನಗಳಲ್ಲಿ ಅದೆಲ್ಲಾ ಸಾಧ್ಯ ಆಗ್ತಿಲ್ಲ, ಈಗ ಕೇಸ್ ಪ್ರಕರಣ, ಸಾವಿನ ಪ್ರಮಾಣ ಹೆಚ್ಚಾಗಿದೆ. ಅದೆಷ್ಟೋ ಜನರು ಸಂಬಂಧಿಕರನ್ನು ಕಳೆದುಕೊಂಡು ನೋವಿನ ಮಡುವಿನಲ್ಲಿ ಮುಳುಗಿದ್ದಾರೆ. ಆತ್ಮೀಯರನ್ನು ಕಳೆದುಕೊಂಡ ನೋವು ಎಲ್ಲರಿಗೂ ಕಾಡುತ್ತಿದೆ. ಎಂಥೆಂಥ ಅಮೂಲ್ಯ ಜೀವಗಳನ್ನು ಈ ಕೊರೊನಾ ಬಲಿ ತೆಗೆದುಕೊಳ್ಳುತ್ತಿದೆ ಎನ್ನುವ ಸಿಟ್ಟು, ಆಕ್ರೋಶ, ಹತಾಶೆ ಉಕ್ಕಿ ಬರುತ್ತಿದೆ, ಆದರೂ ನಾವೆಲ್ಲರೂ ಅಸಹಾಯಕರಾಗಿ ಬದುಕುವ ಅನಿವಾರ್ಯ. ಮನುಷ್ಯನ ಜೀವ ಎಂದರೆ ನೀರ ಮೇಲಿನ ಗುಳ್ಳೆ ಹಾಗೇ ಎನ್ನುವುದು ಸಾಬೀತಾಗುತ್ತಿದೆ.  ಜೀವ ಕೈಯಲ್ಲಿ ಹಿಡಿದುಕೊಂಡು ಎಚ್ಚರಿಕೆಯಿಂದ ಬದುಕುವ ಕಾಲ, ಆಸ್ತಿ ಅಂತಸ್ತು, ಅಧಿಕಾರ ಏನೆಲ್ಲಾ ಇದ್ದರೂ ಬರೀ ಶೂನ್ಯ, ಜೀವನ ಹೇಗಾದರೂ ನಡೆಸಬಹುದು, ಜೀವ ಒಂದು ಉಳಿಯಲು ಸಾಕು ಎನ್ನುವ ಅಂತಿಮ ನಿರ್ಧಾರಕ್ಕೆ ಬಂದಿದ್ದೇವೆ.

ದೇವರು, ಧರ್ಮ, ಜಾತಿ, ಮತ , ಪಂಥಗಳು ಬದುಕಿಗೆ ಅನಿವಾರ್ಯ ಅಲ್ಲವೇ ಅಲ್ಲ. ಮೊದಲು ಜೀವ ಆರೋಗ್ಯ, ಜೀವನ ಅಷ್ಟೇ ಅನಿವಾರ್ಯ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ‌. ಏನೆಲ್ಲಾ ಬೇಕೆಂದು ನಾವು ಬೀದಿಗಿಳಿದು ಹೋರಾಟ ಮಾಡಿದ್ದೇವೆ, ಉಪವಾಸ ಸತ್ಯಾಗ್ರಹ ಮಾಡಿದ್ದೇವೆ, ಮಂದಿರ, ಮಸೀದಿ, ಚರ್ಚ ಬೇಕೆಂದು ಅಲೆದಾಡಿದ್ದೇವೆ, ಆದರೆ ನಮ್ಮೂರಿಗೊಂದು ಆಸ್ಪತ್ರೆ ಬೇಕೆಂದು ಹೋರಾಟ ಮಾಡಲು ನಾವ್ಯಾರು ಮನಸ್ಸು ಮಾಡಲಿಲ್ಲ. ಸುಸಜ್ಜಿತ ಆಸ್ಪತ್ರೆ, ನುರಿತ ವೈದ್ಯರೇ ಇಂದು ಜಗತ್ತು ಉಳಿಸುತ್ತಿವೆ ಎಂಬುದು ಬಹುತೇಕರಿಗೆ ಅರಿವಿಗೆ ಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಟೋ ಕಂಡರೆ ನೋಡಲು ಏನೋ ಭಯ, ಹಿಂಜರಿಕೆ, ಆತಂಕದ ಭಾವ ಮೂಡುತ್ತಿದೆ. ಈ ಶತಮಾನ ಕಂಡ ಅತ್ಯಂತ ಭಯಾನಕ, ಕರಾಳ ದಿನಗಳು ಇವೇ ಇರಬಹುದು. ಈ ತಲೆಮಾರು ಇಷ್ಟೊಂದು ಕ್ರೂರ ದಿನಗಳು ಅನುಭವಿಸಬಹುದು ಎಂದು ಯಾರೂ ಊಹಿಸಿರಲಿಲ್ಲ. ಏನೇ ಆಗಲಿ,.”ಹೆದರದಿರು ಮನವೆ, ಬೆದರದಿರು ತನುವೆ, ನಿಜವನರಿತು ನಿಶ್ಚಿಂತನಾಗಿರು” ಎನ್ನುವಂತೆ ಎಲ್ಲವೂ ತಾಳ್ಮೆಯಿಂದ ಎದುರಿಸಲು ಸಜ್ಜಾಗಿರೋಣ.
“ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ” ಎನ್ನುವ ಶರಣರ ವೈಜ್ಞಾನಿಕ ನಿಲುವಿನ ಧೈರ್ಯದ ಮಾತುಗಳು ಜೊತೆಯಾಗಿರಲಿ.

ಇನ್ನಾದರೂ ಜನಪ್ರತಿನಿಧಿಗಳು ರಾಜ್ಯ, ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಜನರ ಜೀವ ಹಾಗೂ ಜೀವನ ಉಳಿಸುವ ಕುರಿತು ಶತಪ್ರಯತ್ನ ಮಾಡುವುದು ತೀರ ಅನಿವಾರ್ಯವಿದೆ. ರಾಜ್ಯದವರು ಕೇಂದ್ರದ ಮೇಲೆ ಒತ್ತಡ ಹೇರಿ ಅಗತ್ಯ ನೆರವು ತರಲು ಮುಂದಾಗಿ, ಕೆಲಸ ಕಳೆದುಕೊಂಡು ಮನೆಯಲ್ಲಿ ಕುಳಿತಿರುವ ಅಸಂಘಟಿತ ಕೂಲಿಕಾರರ ಬದುಕಿಗೆ ನೆರವು ಒದಗಿಸಿ, ಲಸಿಕೆ ಅಭಿಯಾನ ಸಂಪೂರ್ಣವಾಗಿ ಯಶಸ್ವಿಯಾಗಿ ನಿರ್ವಹಣೆ ಮಾಡಿಸಲು ಪ್ರಯತ್ನಿಸಿ. ಸರ್ಕಾರಗಳು ಜನರ ಜೀವ ಉಳಿಸಲು ಮುಂದಾಗಬೇಕು, ಜನರು ಅಷ್ಟೇ ಸರ್ಕಾರವೇ ನಮ್ಮ ಜೀವ ಕಾಪಾಡುತ್ತದೆ ಎನ್ನುವ ಭ್ರಮೆಯಲ್ಲಿ ಬದುಕಬಾರದು, ನಮ್ಮ ಜೀವ ನಾವೇ ರಕ್ಷಿಸಿಕೊಳ್ಳುವ ಸಂಕಟದ ದಿನಗಳಿವು, ನಾವೆಲ್ಲರೂ ಸುರಕ್ಷಿತವಾಗಿದ್ದು, ನಮ್ಮವರೂ ಸುರಕ್ಷಿತವಾಗಿರುವಂತೆ ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಕೊರೊನಾ ಎಂದರೆ ಹೆದರದಿರೋಣ, ಎದುರಿಸೋಣ…ಗೆದ್ದು ಬರೋಣ..

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು