ಬೆಂಗಳೂರು(15-12-2020): ವಿಧಾನ ಪರಿಷತ್ ವಿಶೇಷ ಕಲಾಪದ ವೇಳೆ ಸದನದಲ್ಲಿ ಗದ್ದಲ-ಗಲಾಟೆ ಕೈ ಕೈ ಮಿಗಿಲಾಯಿಸುವ ಪರಿಸ್ಥಿತಿ ನಡೆದಿದ್ದು, ಬುದ್ದಿವಂತರಿದ್ದ ಸದನ ಹೊಡೆದಾಟಕ್ಕೆ ಸಾಕ್ಷಿಯಾಗಿದೆ. ಇದು ವಿಧಾನಪರಿಷತ್ ನ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದಿದೆ.
ಸಭಾಪತಿ ಪೀಠಕ್ಕೆ ಬರುತ್ತಿದ್ದಂತೆ ಕಲಾಪ ಮುಂದೂಡಲಾಯಿತು. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕಲಾಪವನ್ನು ಅನಿರ್ದಿಷ್ಠಾವಧಿ ಮುಂದೂಡಿದ್ದಾರೆ.
ಉಪಸಭಾಪತಿಯನ್ನು ಬಿಜೆಪಿಗರು ಕೂರಿಸಿ ಸದನ ಆರಂಭಿಸಿದ್ದಾರೆಂದು ಕಾಂಗ್ರೆಸ್ ಸದನದಲ್ಲಿ ಗದ್ದಲ ಉಂಟುಮಾಡಿದೆ. ಉಪಸಭಾಪತಿಯನ್ನು ಪೀಠದಿಂದ ಕಾಂಗ್ರೆಸ್ ಶಾಸಕರು ಹೊರೆಗೆ ಎಳೆದಿದ್ದಾರೆ. ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಸ್ಥಾನದಲ್ಲಿ ಉಪ ಸಭಾಪತಿ ಜೆಡಿಎಸ್ ನ ಧರ್ಮೇಗೌಡ ಕುಳಿತಿದ್ದದನ್ನು ಕಂಡು ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಅವರನ್ನು ಎಬ್ಬಿಸಿ ಎಳೆದೊಯ್ದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ನೂಕಾಟ, ತಳ್ಳಾಟ ನಡೆಯಿತು.
ಬಿಜೆಪಿ ಸಂವಿಧಾನದ ಆಶಯವನ್ನು ಗಾಳಿಗೆ ತೂರಿ ತಮಗೆ ಇಚ್ಚೆ ಬಂದಂತೆ ವರ್ತಿಸಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಸದನದ ಒಳಗೆ ಸಭಾಪತಿ ಬರದಂತೆ ಬಿಜೆಪಿಗರು ಬಾಗಿಲು ಬಳಿ ತಡೆದಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ.