ಬೆಂಗಳೂರು(03-12-2020): ಕರ್ನಾಟಕ ಪಶುಸಂಗೋಪನಾ ಸಚಿವ ಪ್ರಭು ಚವಾಣ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಅಲ್ಲಿನ ಗೋವಧೆ ವಿರೋಧಿ ಶಾಸನವನ್ನು ಜಾರಿಗೆ ತರುವ ಬಗ್ಗೆ ಮತ್ತು ರಾಜ್ಯದಲ್ಲಿ ಇದೇ ರೀತಿಯ ಕಾನೂನು ಜಾರಿಗೆ ತರುವ ಪ್ರಸ್ತಾಪದ ಬಗ್ಗೆ ಚರ್ಚೆ ನಡೆಸಿದರು.
ಡಿಸೆಂಬರ್ 7 ರಿಂದ ಪ್ರಾರಂಭವಾಗುವ ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಗೋಹತ್ಯೆ ವಿರೋಧಿ ಮಸೂದೆಯನ್ನು ತರಲಾಗುವುದು ಎಂದು ಈಗಾಗಲೇ ಘೋಷಿಸಿರುವ ಸಚಿವರು, ಪ್ರಸ್ತುತ ಉತ್ತರ ಪ್ರದೇಶ ಮತ್ತು ಗುಜರಾತ್ ಪ್ರವಾಸದಲ್ಲಿದ್ದು, ಅಲ್ಲಿ ಕಾನೂನು ಅನುಷ್ಠಾನದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಚವಾಣ್ ಅವರ ಕಚೇರಿಯು ನೀಡಿರುವ ಮಾಹಿತಿ ಪ್ರಕಾರ, ಶಾಸನವನ್ನು ಜಾರಿಗೆ ತರುವ ಕರ್ನಾಟಕದ ಯೋಜನೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ ಆದಿತ್ಯನಾಥ್, ಗೋಹತ್ಯೆ ನಿಷೇಧವನ್ನು ಉತ್ತರಪ್ರದೇಶದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ ಇದರಂತೆಯೇ ಜಾರಿಗೆ ಮಾಡಬೇಕೆಂದು ಸೂಚಿಸಿದ್ದಾರೆ.
ಸಚಿವರು ತಮ್ಮ ಭೇಟಿಯ ಸಂದರ್ಭದಲ್ಲಿ ಗೋಹತ್ಯೆ ವಿರೋಧಿ ಶಾಸನದ ಅನುಷ್ಠಾನದ ಕುರಿತು ಉತ್ತರ ಪ್ರದೇಶದ ಸರ್ಕಾರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು ಮತ್ತು ಗೋಶಾಲೆ ನಿರ್ವಹಣೆ, ಹಸುಗಳ ಆರೈಕೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದರು.
ಉತ್ತಮ ಸ್ಥಳೀಯ ಹಸು ತಳಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಚವಾನ್ ಯುಪಿ ಪಶುಸಂಗೋಪನಾ ವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಎರಡು ಸಾಹಿವಾಲ್ ತಳಿ ಎತ್ತುಗಳು ಮತ್ತು ಹತ್ತು ಹಸುಗಳನ್ನು ರಾಜ್ಯಕ್ಕೆ ಕಳುಹಿಸಲು ಅಧಿಕಾರಿಗಳ ಜೊತೆ ಒಪ್ಪಂದ ಮಾಡಿದ್ದಾರೆ.
ಗುಜರಾತ್ ನಲ್ಲಿ ಕಾನೂನು ಅನುಷ್ಠಾನದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ಸಚಿವರು ನಾಳೆ ಗುಜರಾತ್ ಪ್ರವಾಸ ಕೈಗೊಳ್ಳಲಿದ್ದಾರೆ. ಗೋ ವಧೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವುದರ ಜೊತೆಗೆ, ವಧೆಗಾಗಿ ಪ್ರಾಣಿಗಳನ್ನು ಅಕ್ರಮವಾಗಿ ಸಾಗಿಸುವುದನ್ನು ನಿಲ್ಲಿಸಲಾಗುವುದು ಎಂದು ಚವಾಣ್ ಇತ್ತೀಚೆಗೆ ಹೇಳಿದ್ದರು.
2018 ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಗೋಹತ್ಯೆಯನ್ನು ನಿಷೇಧಿಸುವುದಾಗಿ ಭರವಸೆ ನೀಡಿತ್ತು.