ಕರಾಳ ಯುಗದ ಆತಂಕದ ನಡುವೆ ಒಂದು ಕರಾಳ ದಿನ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನಾ ದಿವಾಕರ, ಹಿರಿಯ ಲೇಖಕರು

ಆರು ತಿಂಗಳ ನಂತರ ಭಾರತ ಮತ್ತೊಮ್ಮೆ ಒಕ್ಕೊರಲ ದನಿಯಾಗಿ ಎದ್ದುನಿಲ್ಲುತ್ತಿದೆ. ಕಳೆದ ನವಂಬರ್ 26ರಂದು ನಡೆದ ದೇಶವ್ಯಾಪಿ ಕಾರ್ಮಿಕ ಮುಷ್ಕರ ಮತ್ತು ರೈತರ ಹೋರಾಟ ಈ ದೇಶದ ದುಡಿಯುವ ವರ್ಗಗಳಲ್ಲಿ ಕೊಂಚ ಮಟ್ಟಿಗೆ ಜಾಗೃತಿಯನ್ನು ಉಂಟುಮಾಡಿತ್ತು. #ಆತ್ಮನಿರ್ಭರ ಭಾರತದಲ್ಲಿ ಆಳುವ ವರ್ಗಗಳು ನೀಡುವ ಆಶ್ವಾಸನೆಗಳು, ಭರವಸೆಗಳು ಎಲ್ಲವೂ ಮಾರುಕಟ್ಟೆ ಜಗುಲಿಯಲ್ಲಿ ನೀಡಲಾಗುವ ರಿಯಾಯಿತಿಗಳಂತೆ ಎಂದು ಅರಿವಾಗಲು ಈ ದೇಶದ ದುಡಿಯುವ ವರ್ಗಗಳಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಒಂದು ಕೊಳ್ಳುವುದಾದರೆ ಒಂದನ್ನು ಉಚಿತವಾಗಿ ಕೊಡುವ ಮಾರುಕಟ್ಟೆ ನೀತಿಯನ್ನೇ ತನ್ನ ಆಡಳಿತ ವ್ಯವಸ್ಥೆಯಲ್ಲೂ ಅಳವಡಿಸಿಕೊಂಡಿರುವ ನವ ಭಾರತದ ಹರಿಕಾರರು, ಭಾರತದ ದುಡಿಯುವ ವರ್ಗಗಳ ಹೆಗಲ ಮೇಲೆ ಹೊರಿಸಿರುವ ನೊಗ ಎಷ್ಟು ಭಾರವಾಗಿದೆ ಎನ್ನುವುದು ಕೆಲವರಿಗಾದರೂ ಅರ್ಥವಾಗತೊಡಗಿದೆ.

ಮತ್ತಾರೋ ನೊಗ ಹೊತ್ತು,, ಬರಿಗಾಲಲ್ಲಿ ನೆಲ ಉತ್ತುತ್ತಾ, ಗಾಣದೆತ್ತುಗಳನ್ನು ನಿಯಂತ್ರಿಸುತ್ತಾ, ಉತ್ಪಾದನೆಯ ಪ್ರಕ್ರಿಯೆಯಲ್ಲಿ ಬೆವರು ಸುರಿಸುವುದನ್ನು ಕಂಡು “ ನೋಡಿ, ಎಷ್ಟು ಕಷ್ಟ ಪಟ್ಟು ದುಡಿಯುತ್ತಾರೆ, ಅವರು ದುಡಿದರೆ ಅಲ್ಲವೇ ನಮ್ಮ ಬದುಕು ” ಎನ್ನುತ್ತಾ ದೇಶಾವರಿ ನಗೆ ಬೀರುತ್ತಿದ್ದ ಹಿತವಲಯದ ಫಲಾನುಭವಿಗಳಿಗೆ. ಆ ಅಮಾಯಕರ ಹೆಗಲ ಮೇಲಿನ ನೊಗಗಳಲ್ಲಿ ಅಡಗಿರುವ ಮಣಭಾರದ ಹೊಣೆ ಏನೆಂದು ಕ್ರಮೇಣ ಅರಿವಾಗತೊಡಗಿದೆ. ಏಕೆಂದರೆ ತಾವು ನಿಂತ ನೆಲ ಕುಸಿಯುತ್ತಿದೆ ಎಂದು ಈ ವರ್ಗದ ಜನತೆಗೆ ಭಾಸವಾಗುತ್ತಿದೆ. ಒಂದು ಸೂಕ್ಷ್ಮ ವೈರಾಣು ಈ ಪಾಠ ಕಲಿಸಿದೆ.

ಕೊರೋನಾ ಮೊದಲನೆಯ ಅಲೆಯ ಸಂದರ್ಭದಲ್ಲಿ “ ಸುರಕ್ಷಿತ ವಲಯ ಪ್ರವೇಶ ನಿರ್ಬಂಧಿತ ” ಎಂದು ಬೋರ್ಡ್ ತಗುಲಿಸಿ ಲಾಕ್ ಡೌನ್ ಅವಧಿಯ ಯಾವ ಸಂಕಷ್ಟಗಳನ್ನೂ ಅನುಭವಿಸಿದೆ ತಮ್ಮ ಹಿತ ಬದುಕಿನ ಸವಿಯುಂಡ ಮಧ್ಯಮ ವರ್ಗದ ಒಂದು ವಲಯಕ್ಕೆ ಈಗ ಆ ಬೋರ್ಡ್ ಕಂಡುಬರುತ್ತಿಲ್ಲ. 50ನೆಯ ಮಹಡಿಯಲ್ಲಿ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ವರ್ಕ್ ಫ್ರಂ ಹೋಂ ಮಾಡುವ ಹಿತಾನುಭವಿಗಳಿಗೂ ಕೋವಿದ್ 19 ನಿದ್ದೆಗೆಡಿಸುತ್ತಿದೆ. ಹಾಗೆಯೇ ಕಳೆದು ಹೋದ ಅಲೆಯಲ್ಲಿ ಕೊಚ್ಚಿಹೋಗದೆ ಅಳಿದುಳಿದುವನ್ನು ಅನುಭವಿಸುತ್ತಾ ತಮ್ಮ ಬದುಕು ಸವೆಸಲು ಯತ್ನಿಸಿದ ಈ ವರ್ಗ ಈ ಬಾರಿ ತಮ್ಮ ಶೀತಲಪೆಟ್ಟಿಗಳಲ್ಲಿರುವ ಸರಕುಗಳು ಖಾಲಿಯಾಗುತ್ತಿರುವುದನ್ನೂ ಗಮನಿಸುತ್ತಿದೆ. ತನ್ನ ಜಾತ್ಯತೀತ ಲಕ್ಷಣಗಳನ್ನು ಉಳಿಸಿಕೊಂಡೇ ಹರಡುತ್ತಿರುವ ಕೊರೋನಾ ಈ ಬಾರಿ ವರ್ಗ ತಾರತಮ್ಯಗಳನ್ನೂ ಬದಿಗಿಟ್ಟು ಎಲ್ಲೆಡೆ ವ್ಯಾಪಿಸುತ್ತಿದೆ. ಈ ಬೆಳವಣಿಗೆ ಸ್ವಾಗತಾರ್ಹ ಎನ್ನಲಾಗುವುದಿಲ್ಲ, ಆದರೆ ಕೊಂಚ ಮಟ್ಟಿಗಾದರೂ ದಪ್ಪ ಚರ್ಮಗಳಿಗೆ ನೋವಿನ ಅರಿವಾಗುವಂತೆ ಮಾಡಿದೆ ಎನ್ನುವುದು ಸ್ವಾಗತಾರ್ಹ.

ಈ ನಡುವೆಯೇ ದೇಶದ ಕಾರ್ಮಿಕ ವರ್ಗ, ರೈತ ಸಮುದಾಯ, ಕೃಷಿ ಕಾರ್ಮಿಕರು, ಅಸಂಘಟಿತ ದುಡಿಮೆಗಾರರು ಮತ್ತು ಹಣೆಪಟ್ಟಿ ಇಲ್ಲದ ದುಡಿಮೆಯ ಕೈಗಳು ಇಂದು ದೇಶವ್ಯಾಪಿ ಮುಷ್ಕರದಲ್ಲಿ ತೊಡಗಿದ್ದಾರೆ. ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಮುಷ್ಕರ ಇಂದಿಗೆ ಆರು ತಿಂಗಳು ಪೂರೈಸುತ್ತಿದೆ. ದೇಶದ ಮೂಲ ಉತ್ಪಾದನೆಯ ಕೈಗಳು ಕಳೆದ ಆರು ತಿಂಗಳಿನಿಂದ ತಮ್ಮ ಹಕ್ಕೊತ್ತಾಯಗಳಿಗಾಗಿ ಹೋರಾಡುತ್ತಿದ್ದರೂ ಕಿವಿಗೊಡದ ಒಂದು ಕ್ರೂರ ವ್ಯವಸ್ಥೆಯನ್ನು ಮತ್ತೆ ಮತ್ತೆ ಬಡಿದೆಬ್ಬಿಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎನ್ನುವುದೇ ಸ್ವತಂತ್ರ ಭಾರತದ ದುರಂತ.

ಆದರೆ ಈ ದುರಂತದ ನಡುವೆಯೇ ಇಂದು ಕಾರ್ಮಿಕ ವರ್ಗವೂ ಕರಾಳ ಕಾಯ್ದೆಗಳ ವಿರುದ್ಧ ದನಿ ಎತ್ತಿದೆ. ಜಾಗತಿಕ ಹಣಕಾಸು ಬಂಡವಾಳ ಮತ್ತು ಮಾರುಕಟ್ಟೆ ಶಕ್ತಿಗಳು ಹೇಗೆ ಭಾರತದ ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುತ್ತವೆ ಎನ್ನುವುದಕ್ಕೆ ಇದಕ್ಕಿಂತಲೂ ಹೆಚ್ಚಿನ ಸಾಕ್ಷ್ಯಾಧಾರಗಳು ಬೇಕಿಲ್ಲ. ದೇಶದ ಶೇ 65ಕ್ಕೂ ಹೆಚ್ಚು ಜನರ ಜೀವನ ಮತ್ತು ಜೀವನೋಪಾಯಕ್ಕೆ ಆಧಾರವಾಗಿರುವ ಕೃಷಿ ಕ್ಷೇತ್ರ ಇಂದು ಜಾಗತಿಕ ಬಂಡವಾಳದ ಮತ್ತು ಬಂಡವಾಳಶಾಹಿಗಳ ಪಾಲಾಗುವ ಅಪಾಯ ಎದುರಿಸುತ್ತಿದೆ. ನೂತನ ಕೃಷಿ ಕಾಯ್ದೆಗಳು ರೈತರ ನೆಲ ಮತ್ತು ಶ್ರಮದ ಫಲ ಎರಡನ್ನೂ ಕಸಿದುಕೊಂಡು ಔದ್ಯಮಿಕ ಹಿತಾಸಕ್ತಿಗಳಿಗೆ ಒಪ್ಪಿಸಲು ನೆರವಾಗುವಂತಿವೆ. ತಮ್ಮ ಭೂಮಿಯ ಮೇಲಿನ ನಿಯಂತ್ರಣವನ್ನೂ ಕಳೆದುಕೊಂಡು, ತಾವು ಬೆಳೆಯುವ ಫಸಲಿನ ಮೇಲೆಯೂ ತಮ್ಮ ಹಕ್ಕು ಕಳೆದುಕೊಳ್ಳುವ ಭೀತಿಯಲ್ಲಿ ಈ ದೇಶದ ರೈತರು ಕಂಗಾಲಾಗಿದ್ದಾರೆ.

ಈ ಹಿನ್ನೆಲೆಯಲ್ಲೇ ಕಳೆದ ನವಂಬರ್ 26ರಂದು ರೈತ ಮುಷ್ಕರ ಆರಂಭವಾಗಿದೆ. ಇಲ್ಲಿ ಮುಷ್ಕರ ನಿರತರಾಗಿರುವವರಲ್ಲಿ ಪಾಕಿಸ್ತಾನಿಗಳು, ಖಲಿಸ್ತಾನಿಗಳು, ಅಂತಾರಾಷ್ಟ್ರೀಯ ಉಗ್ರಗಾಮಿಗಳು ಇಲ್ಲ ಎನ್ನುವುದು ಈ ವೇಳೆಗಾಗಲೇ ಭಾರತದ ಪ್ರಭುತ್ವಕ್ಕೂ ಸ್ಪಷ್ಟವಾಗಿದೆ. ಹಾಗೆಯೇ ಮುಷ್ಕರ ನಿರತ ರೈತರನ್ನು ದೇಶದ್ರೋಹಿಗಳೆಂದು ಬಿಂಬಿಸುವ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ. ಕಳೆದ ಆರು ತಿಂಗಳ ಅವಧಿಯಲ್ಲಿ ದೇಶದ ಸಾಮಾನ್ಯ ರೈತರು ಅನುಭವಿಸುತ್ತಿರುವ ಗೊಬ್ಬರ ಬೆಲೆ ಹೆಚ್ಚಳ, ಕೀಟನಾಶಕಗಳ ಬೆಲೆ ಹೆಚ್ಚಳ, ಬೆಂಬಲ ಬೆಲೆಯ ಕೊರತೆ ಮತ್ತು ಇತರ ಕೃಷಿ ಬಿಕ್ಕಟ್ಟುಗಳಿಂದ ಈ ಮುಷ್ಕರ ಕೇವಲ ಶ್ರೀಮಂತ ರೈತರ ಹಿತಾಸಕ್ತಿಯನ್ನು ಪ್ರತಿನಿಧಿಸುತ್ತದೆ ಎನ್ನುವ ಭ್ರಮೆಯೂ ದೂರವಾಗಿದೆ.

ಭೂ ಸ್ವಾಧೀನ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಕೃಷಿ ಭೂಮಿಯ ಮೇಲೆ ರೈತರ ಸಾಂಪ್ರದಾಯಿಕ ಹಕ್ಕುಗಳನ್ನೂ ಕಸಿದುಕೊಳ್ಳುವ ಬಂಡವಾಳ ವ್ಯವಸ್ಥೆಯ ಪಿತೂರಿಗಳನ್ನು ಸಾಮಾನ್ಯ ರೈತನೂ ಅರಿತಿದ್ದಾನೆ. ತನ್ನ ಶ್ರಮಕ್ಕೆ ತಕ್ಕ ಕೂಲಿಯನ್ನೂ ಪಡೆಯದೆ ಗ್ರಾಮೀಣ ಪ್ರದೇಶದ ಕೃಷಿ ಕಾರ್ಮಿಕರು, ಕೊರೋನಾ ಸಂದರ್ಭದಲ್ಲಿ ತಮ್ಮ ಜೀವನೋಪಾಯಕ್ಕಾಗಿ ಹೆಣಗಾಡುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ಜನ ಜಾಗೃತಿ ಮೂಡಿದೆ.  ಕೃಷಿ ಭೂಮಿ, ಕೃಷಿ ಉತ್ಪನ್ನ ಮತ್ತು ಕೃಷಿ ಮಾರುಕಟ್ಟೆ ಬಂಡವಾಳಿಗರ ನಿಯಂತ್ರಣಕ್ಕೊಳಪಟ್ಟಂತೆಲ್ಲಾ, ಜನಸಾಮಾನ್ಯರ ನಿತ್ಯ ಬದುಕಿಗೆ ಅತ್ಯಗತ್ಯವಾದ ಅವಶ್ಯ ವಸ್ತುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲೂ ಕೇಂದ್ರ ಸರ್ಕಾರ ಹೊಸ ಕಾನೂನುಗಳನ್ನು ಜಾರಿಗೊಳಿಸಿದ್ದು, ಕೃಷಿ ಉತ್ಪನ್ನಗಳ ದಾಸ್ತಾನು, ಮಾರುಕಟ್ಟೆ ಮತ್ತು ವಿತರಣೆಯನ್ನೂ ಖಾಸಗೀ ಬಂಡವಾಳಿಗರಿಗೆ ಒಪ್ಪಿಸುತ್ತಿರುವುದು ಸ್ಪಷ್ಟವಾಗುತ್ತಿದೆ.

ಜೀವನಾವಶ್ಯ ವಸ್ತುಗಳನ್ನೂ ಅವಶ್ಯ ವಸ್ತುಗಳ ಕಾಯ್ದೆಯ ಪರಿಧಿಯಿಂದ ಹೊರತುಪಡಿಸಿರುವುದರಿಂದ ಜನಸಾಮಾನ್ಯರ ನಿತ್ಯ ಬದುಕು ದುಸ್ತರವಾಗುತ್ತಿರುವುದು ನಗರವಾಸಿ ಮಧ್ಯಮ ಮತ್ತು ಕೆಳಮಧ್ಯಮ ವರ್ಗಗಳಿಗೂ ಅರಿವಾಗುತ್ತಿದೆ.  ನಿತ್ಯಾವಶ್ಯ ದವಸ ಧಾನ್ಯಗಳ ಬೆಲೆಗಳು, ಅಡುಗೆ ಎಣ್ಣೆ ಮತ್ತಿತರ ಅವಶ್ಯ ಪದಾರ್ಥಗಳ ಬೆಲೆಗಳು ಕಳೆದ ಆರು ತಿಂಗಳಲ್ಲಿ ಶೇ 100ರಷ್ಟು ಹೆಚ್ಚಾಗಿರುವುದು ಮುಂಬರುವ ಕರಾಳ ದಿನಗಳ ಸೂಚನೆಯಾಗಿಯೇ ಕಾಣುತ್ತದೆ. ಕೊರೋನಾ ಬಿಕ್ಕಟ್ಟಿನ ನಡುವೆಯೂ ಗಗನಕ್ಕೇರುತ್ತಿರುವ ಅವಶ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸುವ ಬಗ್ಗೆ ಕಿಂಚಿತ್ತೂ ಗಮನಹರಿಸದ ನಿಷ್ಕ್ರಿಯ ಆಡಳಿತ ವ್ಯವಸ್ಥೆಯಲ್ಲಿ ಭಾರತದ ದುಡಿಯುವ ವರ್ಗಗಳು ಬದುಕುವಂತಾಗಿದೆ.

ಈ ನಡುವೆಯೇ ಕೊರೋನಾ ಎರಡನೆಯ ಅಲೆ ಭಾರತದ ಜನಸಾಮಾನ್ಯರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಇದಕ್ಕೆ ವೈರಾಣು ಕಾರಣವಲ್ಲ. ನಮ್ಮ ಆಡಳಿತ ವ್ಯವಸ್ಥೆಯ ನಿಷ್ಕ್ರಿಯತೆಯೇ ಕಾರಣ. ಕೊರೋನಾ ಎರಡನೆಯ ಅಲೆ ಅನಿರೀಕ್ಷಿತವಲ್ಲ. ವಿಜ್ಞಾನಿಗಳ, ವೈರಾಣು ತಜ್ಞರ ಮತ್ತು ವೈದ್ಯರ ಮುನ್ನೆಚ್ಚರಿಕೆಯ ಮಾತುಗಳನ್ನು ಗಮನಿಸಿದ್ದರೆ ಬಹುಶಃ ಐದು ರಾಜ್ಯಗಳ ಚುನಾವಣೆಗಳು ನಡೆಯುತ್ತಿರಲಿಲ್ಲ. ಕುಂಭಮೇಳದಲ್ಲಿ ಲಕ್ಷಾಂತರ ಭಕ್ತಾದಿಗಳು ಮಿಂದೇಳುತ್ತಿರಲಿಲ್ಲ. ಗಂಗೆಯಲ್ಲಿ ನೂರಾರು ಅನಾಥ ಶವಗಳು ತೇಲಿ ಬರುತ್ತಿರಲಿಲ್ಲ. ಈ ದೇಶದ ಜನಸಾಮಾನ್ಯರು ಉಸಿರಾಡಲು ಆಮ್ಲಜನಕ ಇಲ್ಲದೆ ಸಾಯುತ್ತಿರಲಿಲ್ಲ. ಪ್ರತಿಷ್ಠಿತ ನಗರಗಳಲ್ಲೂ ಜನರು ಆಸ್ಪತ್ರೆ ಸೌಕರ್ಯಗಳಿಲ್ಲದೆ ಸಾಯುತ್ತಿರಲಿಲ್ಲ.

ಅಧಿಕಾರ ರಾಜಕಾರಣದ ವ್ಯಾಮೋಹ ಮತ್ತು ಅಧಿಪತ್ಯ ರಾಜಕಾರಣದ ಹಪಹಪಿ ಈ ದೇಶದ ಜನಸಾಮಾನ್ಯರನ್ನು ವಿನಾಶದ ಅಂಚಿಗೆ ದೂಡುತ್ತಿದೆ. ಕಳೆದ ಒಂದು ವರ್ಷದಲ್ಲಿ ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಆರೋಗ್ಯ ಸೇವೆಯನ್ನು ಒಮ್ಮೆ ಪರಾಮರ್ಶಿಸಿದ್ದರೂ ಇಂದು ಸಾವಿರಾರು ಸಾವುಗಳು ಸಂಭವಿಸುತ್ತಿರಲಿಲ್ಲ. ಕೊರೋನಾ ವೈರಾಣುವಿನ ಮಾರಣಾಂತಿಕ ಗುಣ ಬದಲಾಗಿಲ್ಲ ಆದರೆ ಈ ವೈರಾಣುವನ್ನು ಎದುರಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿರುವುದು ಹೆಚ್ಚು ಮರಣಗಳಿಗೆ ಕಾರಣವಾಗಿದೆ. ಜೀವ ರಕ್ಷಕ ಲಸಿಕೆಯೂ ಸಹ ಮಾರುಕಟ್ಟೆ ನಿಯಂತ್ರಣಕ್ಕೊಳಪಟ್ಟಿರುವುದರಿಂದ ಇಂದು ಜನರು “ ನಮ್ಮ ಬದುಕಿಗೆ ನಾವೇ ಜವಾಬ್ದಾರರು ” ಎಂದು ಬದುಕುವಂತಾಗಿದೆ.

ಬಂಡವಾಳ ವ್ಯವಸ್ಥೆಯಲ್ಲಿ ಮತ್ತು ಮಾರುಕಟ್ಟೆ ಆರ್ಥಿಕತೆಯಲ್ಲಿ ಜೀವಗಳೂ ಸಹ ಬಿಕರಿಯಾಗುತ್ತವೆ, ಹೆಣಗಳೂ ಬಿಕರಿಯಾಗುತ್ತವೆ. ಸಾವುಗಳು ಸೂಚ್ಯಂಕಗಳಲ್ಲಿ ಬಿಂಬಿತವಾಗುತ್ತವೆಯೇ ಹೊರತು ಆಳುವವರ ಹೃದಯದಲ್ಲಿ ದಾಖಲಾಗುವುದಿಲ್ಲ. ಬಡತನದ ಆಕ್ರಂದನ, ಹಸಿವಿನ ಹಾಹಾಕಾರ ಮತ್ತು ಅಮಾಯಕರ ಸಾವಿನ ವೇದನೆ ಎಲ್ಲವೂ ಶೇರು ಮಾರುಕಟ್ಟೆಯ ಹರಾಜು ಜಗುಲಿಯಲ್ಲಿನ ಕೂಗಿನಂತೆ ಕೇಳುವುದೇ ಹೊರತು, ಅಧಿಕಾರ ಪೀಠದ ಮುಂದಿನ ಆಗ್ರಹಗಳಂತೆ ಕೇಳುವುದಿಲ್ಲ. ಹಾಗಾಗಿಯೇ ಲಸಿಕೆಯ ಕೊರತೆ ಸುಸ್ಪಷ್ಟವಾದ ನಂತರವೂ ಭಾರತದ ಜನತೆಗೆ ಲಸಿಕೆ ಎಂದು ಲಭ್ಯವಾಗುತ್ತದೆ ಎನ್ನುವ ಸ್ಪಷ್ಟ ಚಿತ್ರಣ ದೊರೆಯುತ್ತಿಲ್ಲ. ಏಕೆಂದರೆ ಇದನ್ನು ನಿಯಂತ್ರಿಸುವ ಶಕ್ತಿಗಳು ಗೋಚರಿಸುವುದಿಲ್ಲ. ನಿರ್ವಹಿಸುವ ಶಕ್ತಿಗಳು ಗೋಚರಿಸಿದರೂ ಪ್ರತಿಕ್ರಯಿಸುವುದಿಲ್ಲ..

ಇಂತಹ ಒಂದು ವಿಕೃತ ವ್ಯವಸ್ಥೆಯ ನಡುವೆಯೇ ನಾವು ಸುಂದರ, ಸುಸಜ್ಜಿತ, ಭವ್ಯ ಸಂಸತ್ ಭವನಕ್ಕೆ ಶಿಲಾನ್ಯಾಸವನ್ನು ನೆರವೇರಿಸುತ್ತೇವೆ. ಆಮ್ಲಜನಕ ಇಲ್ಲದೆ ಸಾಯುವ ಜೀವಗಳು, ಹೆಣ ಸುಡಲು ಕಟ್ಟಿಗೆ ಇಲ್ಲದೆ ಪರದಾಡುವ ಅಮಾಯಕರು,  ಹೂಳಲು ಜಾಗ ಇಲ್ಲದ ಶವಗಳು,  ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲದೆ ಸೊರಗುವ ಸೋಂಕಿತರು ಈ ಮಾರುಕಟ್ಟೆ ವ್ಯವಸ್ಥೆಯ ಸಂತೆ ಮಾಳದಲ್ಲಿ ಜೋಡಿಸಿರುವ ತರಕಾರಿ ಗುಪ್ಪೆಗಳಂತೆ ಕಾಣುತ್ತವೆ. ಈ ಜೀವಗಳ ಆಕ್ರಂದನಗಳು ಹರಾಜು ಮಾರುಕಟ್ಟೆಯ ಕೂಗಿನಂತೆ ಕೇಳಿಬರುತ್ತದೆ. ಮಧ್ಯಮ ವರ್ಗಗಳಿಗೇ ನಿರ್ವಹಿಸಲಾಗದ ಮಟ್ಟಿಗೆ ಬೆಲೆ ಏರಿಕೆಯಾಗುತ್ತಿದ್ದರೂ ನಿಯಂತ್ರಿಸಲಾರದೆ ಕೈಕಟ್ಟಿ ಕುಳಿತ ಒಂದು ಆಡಳಿತ ವ್ಯವಸ್ಥೆಯಲ್ಲಿ ನಾವಿದ್ದೇವೆ.

ಇದು ನವ ಉದಾರವಾದದ ಫಲ. ಒಂದೂವರೆ ವರ್ಷದ ಕಾಲ ಈ ದೇಶದ ಜನಸಾಮಾನ್ಯರು ಸೂಕ್ತ ಆರೋಗ್ಯ ಸೇವೆಯನ್ನು ಪಡೆಯಲಾಗದೆ ಜೀವ ರಕ್ಷಣೆಗಾಗಿ ಪರದಾಡುತ್ತಿರುವಾಗಲೂ, ಆರೋಗ್ಯ ಕ್ಷೇತ್ರವನ್ನು ಸುಧಾರಿಸುವ ಮತ್ತು ಖಾಸಗೀ ಆರೋಗ್ಯ ವಲಯವನ್ನು ನಿಯಂತ್ರಿಸುವ ಯಾವುದೇ ಕ್ರಮಗಳನ್ನು ಸರ್ಕಾರಗಳು ಕೈಗೊಳ್ಳದಿರುವುದು ಬಂಡವಾಳ ವ್ಯವಸ್ಥೆ ಮತ್ತು ನವ ಉದಾರವಾದದ ನಿಯಂತ್ರಣಾಧಿಕಾರ ಮತ್ತು ಆಂತರ್ಯದ ಕ್ರೌರ್ಯವನ್ನು ತೋರುತ್ತದೆ. ಆಮ್ಲಜನಕದ ಕೊರತೆಯ ನಡುವೆಯೂ ಉತ್ಪಾದನೆ ಮತ್ತು ವಿತರಣೆಯ ಮೇಲಿನ ನಿಯಂತ್ರಣ, ಜೀವ ರಕ್ಷಕ ಲಸಿಕೆಯ ಉತ್ಪಾದನೆ ಮತ್ತು ವಿತರಣೆಯಲ್ಲೂ ಮಾರುಕಟ್ಟೆ ಶಕ್ತಿಗಳ ಮೇಲುಗೈ, ಜನಸಾಮಾನ್ಯರ ಜೀವನವೇ ದುಸ್ತರವಾಗಿರುವ ಸಂದರ್ಭದಲ್ಲೂ ಲಸಿಕೆಗೆ ಜಿಎಸ್‍ಟಿ ತೆರಿಗೆ ವಿಧಿಸುವಂತಹ ಮಾರುಕಟ್ಟೆಯ ಆಡಳಿತ ಕ್ರೌರ್ಯ ಇವೆಲ್ಲವೂ ಮುಂಬರುವ ಕರಾಳದ ದಿನಗಳ ಮುನ್ಸೂಚನೆಯಾಗಿಯೇ ಕಾಣುತ್ತದೆ.

ಈ ನಡುವೆಯೇ ಭಾರತದ ಕಾರ್ಮಿಕ ವರ್ಗ ತನ್ನೆಲ್ಲಾ ಸಾಂವಿಧಾನಿಕ ಹಕ್ಕುಗಳನ್ನು ಕಳೆದುಕೊಳ್ಳಲಿದೆ. ನೂತನ ಕಾರ್ಮಿಕ ಸಂಹಿತೆಗಳು ಭಾರತದ ದುಡಿಮೆಯ ಕೈಗಳನ್ನು ಮತ್ತೊಮ್ಮೆ ಬಂಡವಾಳಿಗರ ದಾಸ್ಯದ ಸಂಕೋಲೆಗಳಲ್ಲಿ ಬಂಧಿಸುವ ಸೂತ್ರಗಳಾಗಿ ಪರಿಣಮಿಸಲಿವೆ. ತಮ್ಮ ನೆಲೆ ಸುಭದ್ರವಾಗಿದೆ ಎಂಬ ಭ್ರಮೆಯಲ್ಲೇ ಕಳೆದ ಮೂರು ದಶಕಗಳಿಂದಲೂ ಅಸಂಘಟಿತ ದುಡಿಮೆಗಾರರೊಡನೆ ಕೈಜೋಡಿಸದ ಸಂಘಟಿತ ಕಾರ್ಮಿಕ ವಲಯ ನಿಂತ ನೆಲ ಈಗ ಅಲುಗಾಡುತ್ತಿದೆ. ಕುಸಿಯುವ ಮುನ್ನ ಎಚ್ಚೆತ್ತುಕೊಳ್ಳುವ ಜಾಗೃತಿಯಾದರೂ ಮೂಡಿರಲೇಬೇಕು. ಕೊರೋನಾ ಸಂಕಷ್ಟದ ನಡುವೆಯೂ ಕೇಂದ್ರ ಸರ್ಕಾರ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ಸಿದ್ಧತೆಗಳನ್ನು ನಡೆಸುತ್ತಿದ್ದು, ಹರಾಜು ಮಾರಾಟದ ಜಗುಲಿ ಈಗಾಗಲೇ ಸಿದ್ಧವಾಗಿದೆ. ಇದಕ್ಕೆ ಬ್ಯಾಂಕಿಂಗ್ ವಲಯವೂ ಹೊರತಾಗಿಲ್ಲ ಎನ್ನುವುದು ಹಿತವಲಯದ ವೈಟ್‍ಕಾಲರ್ ಉದ್ಯೋಗಿಗಳಿಗೆ ಇನ್ನಾದರೂ ಅರ್ಥವಾಗಬೇಕಿದೆ.

ಲಕ್ಷಾಂತರ ರೈತರು ನೆರೆದಿರುವ ದೆಹಲಿಯ ಗಡಿಗಳಲ್ಲಿ ಕೋವಿದ್ ಹರಡದೆ ಇರುವುದು ಸಮಾಧಾನಕರ ಅಂಶ. ಆದರೆ ಇಡೀ ದೇಶದಲ್ಲಿ ಕೋವಿದ್ ಸಾಂಕ್ರಾಮಿಕ ಹರಡುತ್ತಿರುವಾಗಿ ಇಲ್ಲಿಯೂ ಹರಡಬಹುದು ಎಂಬ ಅನುಮಾನ ಆಳುವ ವರ್ಗಗಳಲ್ಲಿ ಮೂಡಿರಲೇಬೇಕು. ಹಾಗೊಮ್ಮೆ ಮೂಡಿದ್ದಲ್ಲಿ , ರೈತರ ಬೇಡಿಕೆಯಂತೆ ಕೃಷಿ ಮಸೂದೆಗಳನ್ನು ಹಿಂಪಡೆಯುವ ಆಶ್ವಾಸನೆ ನೀಡಿ ರೈತರನ್ನು ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗುವಂತೆ ಹೇಳಬಹುದಿತ್ತು. ಒಂದು ವೇಳೆ ಆ ಜನದಟ್ಟಣೆಯಲ್ಲಿ ಕೋವಿದ್ ಹರಡಿದ್ದರೆ ? ಈ ಭೀತಿ ಮೂಡಿಸುವ ಪ್ರಶ್ನೆ ಇಂದಿಗೂ ಸಂಯಮಶೀಲರನ್ನು, ಸಂವೇದನಾಶೀಲರನ್ನು ಕಾಡಲೇಬೇಕು. ಆದರೆ ನಮ್ಮ ಆಳುವ ವರ್ಗಗಳಲ್ಲಿ ಈ ಪ್ರಶ್ನೆ ಮೂಡಿಯೇ ಇಲ್ಲ. ಏಕೆಂದರೆ ಸಂವೇದನೆಯೇ ಇಲ್ಲದ ಒಂದು ಆಡಳಿತ ವ್ಯವಸ್ಥೆಯಲ್ಲಿ ನಾವಿದ್ದೇವೆ.

ಭಾರತದ ಆಳುವ ವರ್ಗಗಳಲ್ಲಿ , ಅಧಿಕಾರಸ್ಥ ರಾಜಕಾರಣಿಗಳಲ್ಲಿ ಸಂವೇದನೆ, ಸಂಯಮ ಮತ್ತು ಮಾನವೀಯ ಮೌಲ್ಯಗಳು ಕಿಂಚಿತ್ತಾದರೂ ಇದ್ದಿದ್ದಲ್ಲಿ ಕಳೆದ ಒಂದು ವರ್ಷದಲ್ಲಿ ಜನವಿರೋಧಿ, ರೈತ ವಿರೋಧಿ ಕರಾಳ ಶಾಸನಗಳು ಜಾರಿಯಾಗುತ್ತಿರಲಿಲ್ಲ. ಭೂ ಸ್ವಾಧೀನ ಕಾಯ್ದೆಯ ತಿದ್ದುಪಡಿಯಾಗುತ್ತಿರಲಿಲ್ಲ. ಆರೋಗ್ಯ ಕ್ಷೇತ್ರದಲ್ಲಿನ ಈ ಅವ್ಯವಸ್ಥೆಯ ನಡುವೆಯೂ ಖಾಸಗಿ ವಲಯ ತನ್ನ ಪ್ರಭಾವವನ್ನು ಬಳಸಲಾಗುತ್ತಿರಲಿಲ್ಲ. ಕನಿಷ್ಟ ಪಕ್ಷ ನೂತನ ಸಂಸತ್ ಭವನದ ಶಿಲಾನ್ಯಾಸ ನಡೆಯುತ್ತಿರಲಿಲ್ಲ. ಸಾವಿನ ಮನೆಯಲ್ಲಿ ಭೂರಿ ಭೋಜನ ಸವಿಯುವ ಒಂದು ವಿಕೃತ ವ್ಯವಸ್ಥೆಯಲ್ಲಿ ನಾವಿದ್ದೇವೆ. ಈ ವ್ಯವಸ್ಥೆಯ ವಿರುದ್ಧ ಈ ದೇಶದ ಜನತೆ ದನಿ ಎತ್ತಿದ್ದಾರೆ. ಹಾಗಾಗಿಯೇ ಈ ದೇಶದ ದುಡಿಮೆಯ ಕೈಗಳು, ದುಡಿಯುವ   ದೇಹಗಳು , ದುಡಿಮೆಯ ಜೀವಗಳು ಇಂದು ಕರಾಳ ದಿನವನ್ನಾಗಿ ಆಚರಿಸುತ್ತಿವೆ.  ಈ ಹೋರಾಟ ಮುಂಬರುವ ಹೋರಾಟಗಳ ಪರ್ವಕ್ಕೆ ನಾಂದಿಯಾಗಲಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು