ದೆಹಲಿ(29-10-2020): ಬಿಜೆಪಿ ನಾಯಕ ಕಪಿಲ್ ಮಿಶ್ರಾ ವಿರುದ್ಧ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ಕೈ ಬಿಟ್ಟಿದೆ. ತಾನು ಬೇಷರತ್ ಕ್ಷಮೆ ಯಾಚನೆ ಮಾಡುವೆನೆಂದು ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಮಾನ ಕೈಗೊಂಡಿದೆ.
2017 ರಲ್ಲಿ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಅದ್ಮಿ ಪಕ್ಷದ ನಾಯಕನೂ, ಆರೋಗ್ಯ ಸಚಿವರೂ ಆದ ಸತ್ಯೇಂದ್ರ ಜೈನ್ ವಿರುದ್ಧ ಕಪಿಲ್ ಮಿಶ್ರಾ ಲಂಚದ ಆರೋಪ ಹೊರಿಸಿದ್ದರು. ಈ ವಿಚಾರವಾಗಿ ಕಪಿಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು.
ಕೇಜ್ರಿವಾಲಿಗೆ ಸತ್ಯೇಂದ್ರ ಜೈನ್ ಎರಡು ಕೋಟಿ ಲಂಚ ನೀಡಿದ್ದಾರೆ. ಕೇಜ್ರಿವಾಲ್ ಸಂಬಂಧಿಯ ಐವತ್ತು ಕೋಟಿ ರೂಪಾಯಿ ಬೆಲೆಬಾಳುವ ಜಮೀನಿನ ವ್ಯವಹಾರದಲ್ಲೂ ಸತ್ಯೇಂದ್ರ ಪಾತ್ರವಿತ್ತು ಎಂದು ಕಪಿಲ್ ಮಿಶ್ರಾ ಆರೋಪಿಸಿದ್ದರು. ಸತ್ಯೇಂದ್ರ ಜೈನ್ ಈ ಬಗ್ಗೆ ಕಪಿಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಇದೀಗ ಕಪಿಲ್ ಬೇಷರತ್ ಕ್ಷಮೆ ಯಾಚಿಸಿದ ಹಿನ್ನೆಲೆಯಲ್ಲಿ ದೂರುದಾರನ ಅಪೇಕ್ಷೆ ಮೇರೆಗೆ ಪ್ರಕರಣವನ್ನು ಕೈಬಿಟ್ಟಿರುವುದಾಗಿ ಮೆಜಿಸ್ಟ್ರೇಟ್ ತಿಳಿಸಿದೆ. ಈ ಮೂಲಕ ಎರಡು ವರ್ಷಗಳ ವರೆಗೂ ಶಿಕ್ಷೆ ಸಿಗುವಂತಹ ಕೇಸಿನಿಂದ ಅವರು ತಪ್ಪಿಸಿಕೊಂಡಂತಾಗಿದೆ.