ಕನ್ನಡಿಗರ ಅಪಜಯದ ಇತಿಹಾಸ

Share on facebook
Share on twitter
Share on linkedin
Share on whatsapp
Share on telegram
Share on email
Share on print

 

-ಡಾ ಕೆ ಪಿ ನಟರಾಜ

ಇತ್ತೀಚೆಗೆ ಹಿರಿಯ ಲೇಖಕರಾದ ದೇವನೂರು ಮಹಾದೇವ ಮತ್ತು ಬರಗೂರು ರಾಮಚಂದ್ರಪ್ಪನವರನ್ನೂ ಒಳಗೊಂಡ ಹಿರಿಯ ಲೇಖಕರು UGC ಯ ಸಿಬಿಸಿಎಸ್( choice based credit system ) ಎಂಬ ನೀತಿ ಕನ್ನಡದಂತಹ ಭಾಷೆ ಮತ್ತು ವಿಷಯಗಳ ಕಲಿಕೆಯ ಸಮಯವನ್ನು 18ರಿಂದ 20 ಗಂಟೆಯವರೆಗೆ ಕಿತ್ತುಕೊಂಡು ಕನ್ನಡದ ಎಲ್ಲಾ ನೆಲೆಗಳ ಅಸ್ತಿತ್ವಕ್ಕೂ ಬಹು ದೊಡ್ಡ ಆಪತ್ತನ್ನು ಉಂಟುಮಾಡುತ್ತದೆ ಎಂದು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಇದನ್ನು ತಡೆಯಬೇಕೆಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಗಳು ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಕೇಂದ್ರಕ್ಕೆ ಕೊಂಡೊಯ್ದರೂ ಇವರ ಮಾತಿಗೆ ಅಲ್ಲಿ ಬೆಲೆ ಸಿಗುವುದು ಕಷ್ಟ. ಇವರ ಮಾತಿಗೆ, ಬೇಡಿಕೆಗಳಿಗೆ ನಯಾಪೈಸೆಯ ಬೆಲೆಯೂ ಇಲ್ಲ ಎನ್ನುವುದು ಬೇರೆ ಬೇರೆ ಸಂದರ್ಭದಲ್ಲಿ ಗೊತ್ತಾಗಿದೆ.

ಕೇಂದ್ರದ ಹಿಂದಿ ಲಾಬಿಗಳು ‘ಶಿಕ್ಷಣ ನೀತಿ’ ಎಂಬ ಹೆಸರಿನಲ್ಲಿ ರೂಪಿಸಿರುವ, ರೂಪಿಸುತ್ತಿರುವ ಭಾರತೀಯ ಜನ ಭಾಷೆಗಳನ್ನು ನಾಶ ಮಾಡುವ ಹುನ್ನಾರ ಇದರ ಹಿಂದೆ ಇದೆ. ಆದ್ದರಿಂದ ಕೇಂದ್ರದ ಬಿಜೆಪಿ ತನ್ನ ಪ್ರತಿಯೊಂದು ನೀತಿಯನ್ನೂ ನಮ್ಮ ಭಾಷೆ, ಸಂಸ್ಕೃತಿ, ಪರಂಪರೆಯ ಬಹುತ್ವವನ್ನು ನಾಶ ಮಾಡುವ “ಹಿಂದೂ, ಹಿಂದಿ, ಹಿಂದೂಸ್ಥಾನ ” one nation, one language, one religion ತರಹದ ಏಕಾಕಾರಿ ರಾಷ್ಟ್ರದ ಅಜೆಂಡಾದ ವ್ಯವಸ್ಥಿತ ಉದ್ದೇಶವಿಟ್ಟುಕೊಂಡು ಮಾಡುತ್ತಿರುವ ಕಾರಣ ಇದು ಕಷ್ಟ ಸಾದ್ಯವಾಗಿದೆ.

ಇದನ್ನು ಪ್ರತಿಭಟಿಸಲು ಎಲ್ಲ ರಾಜ್ಯಗಳ – ಕನಿಷ್ಠ ಪಕ್ಷ ದಕ್ಷಿಣದ ದ್ರಾವಿಡ ರಾಜ್ಯಗಳ ವಿವಿಧ ವಿವಿಗಳ ಭಾಷಾ ಬೋಧಕ ಪ್ರಾಧ್ಯಾಪಕರು ಕೇಂದ್ರವನ್ನು ಅದರಲ್ಲೂ ಯುಜಿಸಿ ಯನ್ನು ಇದರ ವಿರುದ್ಧ ನಿಂತು ಪ್ರಶ್ನಿಸಬೇಕಾಗಿದೆ. ಇಲ್ಲದಿದ್ದರೆ ಈ ಪ್ರತಿಭಟನೆ ಉಪಯುಕ್ತವಾಗುವುದಿಲ್ಲ.

ಆದರೆ ಈ ಪ್ರತಿಭಟನೆಯ ಬೇಡಿಕೆ ಮೂಲಭೂತ ಸ್ವರೂಪದ್ದಲ್ಲ ಎನ್ನುವ ಮಾತನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಇದು ಕನ್ನಡಿಗರ ಹಲವು ದಶಕಗಳ ನಿರಂತರ ಕನ್ನಡದ ಉಪೇಕ್ಷೆಯ ಫಲ. ಆ ಉಪೇಕ್ಷೆಯ ಇತಿಹಾಸವನ್ನಿಲ್ಲಿ ದಾಖಲಿಸಿದ್ದೇನೆ.

1960 ರ ದಶಕದ ತ್ರಿಭಾಷಾಸೂತ್ರ

1960 ರ ದಶಕದಲ್ಲಿ ದಕ್ಷಿಣ ಭಾರತೀಯ ಭಾಷಿಕ ಸಮುದಾಯಗಳ ಮೇಲೆ ಹೇರಲಾದ ತ್ರಿಬಾಷಾ ಸೂತ್ರವು ಕನ್ನಡದ ಮಹಾಕವಿ ಕುವೆಂಪು ಅವರು ವಿವರಿಸಿದಂತೆ ಉತ್ತರ ಭಾರತ ಕೇಂದ್ರಿತ ಹಿಂದಿ ಪ್ರಭುತ್ವವು ದಕ್ಷಿಣದ ದ್ರಾವಿಡ ಭಾಷಾ ಪರಿವಾರಗಳ ಮೇಲೆ ಹಿಂದಿಯನ್ನು ಹಿಂದಿನ ಬಾಗಿಲಿನಿಂದ ಒಳ ತೂರಿಸುವ ಸಂಚಾಗಿತ್ತು.

ಈ ಸಂಚನ್ನು ಹಿಮ್ಮೆಟ್ಟಿಸಲು ಕುವೆಂಪು ಕರೆಕೊಡುತ್ತಾರೆ. ಆದರೆ ಇವತ್ತಿನವರೆಗೂ ಕನ್ನಡಿಗರು ಕುವೆಂಪು ಕರೆಗೆ ಓಗೊಡದೆ ಗುಮ್ಮನ ಗುಸುಗರಂತೆ, ಮುಟ್ಟಾಳರಂತೆ ಮೂಲೆ ಸೇರಿದ್ದಾರೆ. ಈ ತ್ರಿಭಾಷಾ ಸೂತ್ರದ ಕಾರಣದಿಂದಲೆ ಪರದೇಸಿ ಭಾಷೆಗಳಾದ ಹಿಂದಿ ಮತ್ತು ಸಂಸ್ಕೃತ ಬಾಷೆಗಳು ಹೆಗಲೇರಿದವು. ಇವುಗಳ ಬಗ್ಗೆ ಅಶಿಕ್ಷಿತ ಅರೆ ಶಿಕ್ಷಿತ ಕನ್ನಡಿಗ ಗಮಾರರಿಗೆ ರಾಷ್ಟ್ರ ಭಾಷೆ , ದೇವ ಭಾಷೆ ಎಂದೆಲ್ಲ‌ ಹೇಳಿ ಒಪ್ಪಿಸಲಾಗಿದೆ.

ಸಂಸ್ಕೃತ ಭಾಷಾ ಕಲಿಕೆ ಎಷ್ಟೊಂದು ನಗೆಪಾಟಲಿನದೂ, ಆಕ್ಷೇಪಾರ್ಹದ್ದೂ, ಅನ್ಯಾಯದ್ದೂ ಆಗಿದೆಯೆಂದರೆ, ಕನ್ನಡದ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯಲು ಸಂಸ್ಕೃತ ಪಠ್ಯಗಳನ್ನು ಸರಳಗೊಳಿಸಲಾಗಿದೆಯಷ್ಟೇ ಅಲ್ಲ , ಪರೀಕ್ಷೆಗಳಲ್ಲಿ ಕನ್ನಡ ಮತ್ತು‌ ಇಂಗ್ಲಿಷ್ ಗಳಲ್ಲಿ ಉತ್ತರ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಇದು ಕನ್ನಡ ಸಂಜಾತರ್ಯಾರಿಗೂ ಪ್ರಶ್ನಿಸಬೇಕಾದ ಮೋಸವೆಂದು ಅನ್ನಿಸಿಯೇ ಇಲ್ಲ.

ಇದರ ವೈಪರೀತ್ಯ ಅರ್ಥವಾಗಲು ನೀವು ಕನ್ನಡ ಪ್ರಶ್ನೆಪತ್ರಿಕೆಗೆ ಇಂಗ್ಲಿಷ್ ನಲ್ಲಿ ಉತ್ತರ ಬರೆಯಬಹುದು ಎಂದು ಅವಕಾಶ ಮಾಡಿಕೊಡಲಾಗಿದೆ ಎಂಬುದನ್ನು ಊಹಿಸಿ‌ ನೋಡಿ. ಕನ್ನಡ ಬಾಷೆಯ ವಿದ್ಯಾರ್ಥಿಗಳು ಕನ್ನಡ ಪ್ರಶ್ನೆಗಳಿಗೆ ಇಂಗ್ಲಿಷಿನಲ್ಲಿ ಉತ್ತರ ಬರೆಯಲಾದರೂ ಸಾಧ್ಯವೆ? ಬರೆದರೂ ಕನ್ನಡ ಅದ್ಯಾಪಕ ಅದನ್ನು ಮೌಲ್ಯಮಾಪನ ಮಾಡಲು ಸಾದ್ಯವೆ? ಒಂದು ಪಕ್ಷ ಮಾಡಿದರೂ ಮಹಾ ಮಹಾ ಪೋಷಕರು ಅದನ್ನು ಒಪ್ಪಲು ಸಿದ್ದರಿದ್ದಾರಾ ಯೋಚಿಸಿ…

” ಕನ್ನಡ ಟೀಚರ್ ಇಂಗ್ಲಿಷಿನಲ್ಲಿ ಬರೆದರೆ ಹೆಂಗ್ರಿ ಮೌಲ್ಯ ಮಾಪನ ಮಾಡ್ತಾನೆ ?” ಅಂತ ಪ್ರಶ್ನಿಸಿರುತ್ತಿದ್ದರು. ಆದರೆ ಇದೇ ‘ಮರಳು ಪೋಷಕರು’ ಸಂಸ್ಕೃತದ ಬಗ್ಗೆ ಈ ಮಾತಾಡುತ್ತಿಲ್ಲ‌. ಇದು ಕನ್ನಡಿಗರ ಮಾನಸಿಕ ಅಸ್ವಸ್ಥತೆಯನ್ನು ತೋರಿಸುತ್ತದೆ.

ಹೀಗೆ ಕನ್ನಡವನ್ನು ಉದ್ದಕ್ಕೂ ಕೊಲ್ಲುತ್ತ ಬಂದಿರುವ ತ್ರಿಭಾಷಾ ಸೂತ್ರವನ್ನು ಇದುವರೆಗೂ ಪ್ರಶ್ನಿಸದ ಕಾರಣಕ್ಕೆ ಇವತ್ತು ugc ತಂದಿರುವ ಸ್ಥಳೀಯ ಭಾಷೆಗಳನ್ನು ಒರೆಸಿಹಾಕುವ ಹೊಸ ಸಂಚು ಹೊಸೆಯಲು ಸಾದ್ಯವಾಗಿದೆ. ತ್ರಿಭಾಷಾ ಸೂತ್ರದ ತಾರ್ಕಿಕ ಪರಿಣಾಮಗಳೆಂದೂ ಈ ugc ತಿದ್ದುಪಡಿಯನ್ನು ನಾವು ಅರ್ಥೈಸಬಹುದಾಗಿದೆ..

1980 ರ ದಶಕದ ಭಾಷಾ(ಗೋಕಾಕ್) ಚಳವಳಿ

1980 ರ ದಶಕವನ್ನು ನಾವು ಗೋಕಾಕ್ ಚಳವಳಿಯ ಯುಗ ಎನ್ನಬಹುದಾಗಿದೆ. ಕುವೆಂಪು ಮತ್ತು ಡಾ ರಾಜ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಚಳವಳಿ ಕನ್ನಡಿಗರಲ್ಲಿ ಆತ್ಮಾಭಿಮಾನವನ್ನು, ಭಾಷಾಭಿಮಾನವನ್ನು ಜಾಗೃತಿಗೊಳಿಸಿತು.

ಈ ಚಳವಳಿ ತ್ರಿಭಾಷಾ ಸೂತ್ರದ ಕಾರಣದಿಂದಾಗಿ ಪ್ರೌಢ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ನಮ್ಮ “ಶ್ರೇಷ್ಠ” ಕನ್ನಡಿಗರು ತಮ್ಮ ಮಾತೃಭಾಷೆಯಾದ ಕನ್ನಡವನ್ನು ಕೈಬಿಟ್ಟು ಸಂಸ್ಕೃತವನ್ನು ತೆಗೆದುಕೊಳ್ಳುತ್ತಿದ್ದುದನ್ನು ತಪ್ಪಿಸಲು ನಡೆದ ಚಳವಳಿ.

ಸಂಸ್ಕೃತದ ಹಾವಳಿಯನ್ನು ತಪ್ಪಿಸಲೋಸುಗ ಭುಗಿಲೆದ್ದ ಈ ಚಳವಳಿ, ಪ್ರೌಢ ಶಾಲಾ ಹಂತಗಳಲ್ಲಿ ಸುಲಭವಾಗಿದ್ದ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳುವ ಮೂಲಕ ಮಾರ್ಕ್ಸ್ ಲೂಟಿ ಹೊಡೆದು ಕನ್ನಡ ಭಾಷೆ ತೆಗೆದುಕೊಂಡಿದ್ದ ಹುಡುಗರನ್ನು ಸೈಡ್ ಹೊಡೆಯುತ್ತಿದ್ದುದ್ದನ್ನು ನಿವಾರಿಸಲೆಂದು ಶುರುವಾದ ಚಳವಳಿ, ವಿ ಕೃ ಗೋಕಾಕ್ ಅವರ ನೇತೃತ್ವದ ಸಮಿತಿಯ ಅಧ್ಯಯನ ಮತ್ತು ಶಿಫಾರಸುಗಳ ತನಕ ವಿಕಾಸಹೊಂದಿತು. ಡಾ ರಾಜ್ ಚಳವಳಿಯ ಕಣಕ್ಕಿಳಿದರು.

ಗೋಕಾಕ್ ಸಮಿತಿಯ ಶಿಫಾರಸುಗಳು ಕನ್ನಡದ ಪರವಾಗಿ ಬಂದರೂ ನಂತರ ಕೋರ್ಟುಗಳು ಅದನ್ನು ಅಮಾನ್ಯಗೊಳಿಸಿ ಈಗ ಮತ್ತದೇ ತ್ರಿಬಾಷಾ ಸೂತ್ರ, ಕನ್ನಡ ಸಂಸ್ಕೃತ ಹಿಂದಿ ಯಾವುದನ್ನಾದರು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳಬಹುದಾಗಿದೆ.

ಕನ್ನಡದ ಸ್ಥಾನ‌ಮಾನವನ್ನು ಸಾರ್ವಭೌಮಗೊಳಿಸಲು ಉದ್ದೇಶಿಸಿದ್ದ ಗೋಕಾಕ್ ಚಳವಳಿಯ ವಿಫಲತೆಯು ಕನ್ನಡಿಗರಾದ ನಮಗೆ ಆದ ಚಾರಿತ್ರಿಕ ಅವಹೇಳನವಾಗಿದೆ, ಮುಖಭಂಗವಾಗಿದೆ ಮತ್ತು ಪ್ರಶ್ನಿಸಬೇಕಾದ ಮೂಲಭೂತ ಅನ್ಯಾಯವಾಗಿದೆ.

2009 ರಲ್ಲಿ ಜಾರಿಗೆ ಬಂದ ಶಿಕ್ಷಣ ಹಕ್ಕುಕಾಯ್ದೆ (RTE)

2009 ರಲ್ಲಿ ಕೇಂದ್ರವು ಜಾರಿಗೆ ತಂದ ಶಿಕ್ಷಣ ಹಕ್ಕು ಕಾಯ್ದೆಯು‌ ಇದುವರಗೆ ಕರ್ನಾಟಕದಲ್ಲಿ ಪ್ರತಿ ವರ್ಷ 1/5 ರಷ್ಟು ಬೃಹತ್ ಸಂಖ್ಯೆಯ ವಿದ್ಯಾರ್ಥಿಗಳನ್ನು ಸರ್ಕಾರಿ ಸಾಲೆಗಳ ಕನ್ನಡ ಮಾಧ್ಯಮ ತರಗತಿಗಳಿಂದ ಹೊತ್ತೊಯ್ದು ತಲಾ ಒಂಭತ್ತರಿಂದ ಹತ್ತು ಸಾವಿರ ಶುಲ್ಕ ಪಾವತಿ‌ಮಾಡಿ ಖಾಸಗಿ ಇಂಗ್ಲಿಷ್ ಮಾಧ್ಯಮದ ಸಾಲೆಗಳಿಗೆ ಸೇರಿಸುತ್ತಾ ಬಂದಿದೆ. ಈ ಮೂಲಕ ಸರ್ಕಾರ ಕನ್ನಡಕ್ಕೆ ದ್ರೋಹವೆಸಗಿದೆಯಷ್ಟೇ ಅಲ್ಲ, ಕಾನ್ವೆಂಟ್‌ಗಳೆಂಬ ಇಂಗ್ಲಿಷ್ ಮಾಧ್ಯಮದ ವ್ಯಾಪಾರಿ ಮಳಿಗೆಗಳು ಕೊಬ್ಬಲು ಕಾರಣವಾಗಿದೆ.

ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿಸಂಖ್ಯೆ ಹೇಳುವಂತೆ, ಪ್ರತಿವರ್ಷ ಹತ್ತಿರ ಹತ್ತಿರ 1.25 ಲಕ್ಷ ವಿದ್ಯಾರ್ಥಿಗಳನ್ನು ಸರ್ಕಾರವೇ ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರತಿವರ್ಷ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದೆ ಅವರ ಶಿಕ್ಷಣ ಶುಲ್ಕವನ್ನು ಸರ್ಕಾರವೇ ಭರಿಸುತ್ತಿದೆ .ಈ ಮೂಲಕ ಸರ್ಕಾರಿ ಶಾಲೆಗೆ ಬರುವ 1/5 ರಷ್ಟು ವಿದ್ಯಾರ್ಥಿಗಳನ್ನು ಸರ್ಕಾರವೇ ಖಾಸಗಿ ಶಾಲೆಗಳತ್ತ ಒಯ್ಯುತ್ತಿದೆ.

ಆದ್ದರಿಂದ RTE ಕನ್ನಡಕ್ಕೆ, ಸರ್ಕಾರೀ ಶಾಲೆಗಳಿಗೆ, ಕನ್ನಡ ಮಾದ್ಯಮಕ್ಕೆ ಮಾರಕವಾಗಿ ಪರಿಣಮಿಸಿದ್ದು, ಇದನ್ನು ಕಿತ್ತು ಹಾಕದೆ ಕನ್ನಡಕ್ಕೆ ಬಿಡುಗಡೆಯೇ ಇಲ್ಲವಾಗಿದೆ. ಕಳೆದ ಹನ್ನೊಂದು ವರ್ಷಗಳಲ್ಲಿ ಕನ್ನಡ ಮಾದ್ಯಮದ 13 ಲಕ್ಷ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದ ಕಾನ್ವೆಂಟ್ ಸಾಲೆಗಳ ಪಾಲಾಗಿವೆ.

ಪ್ರತಿ ವರ್ಷ 500 ಕೋಟಿಯಷ್ಟು ಹಣ rte ಮೂಲಕ ಖಾಸಗಿ ಸಾಲೆಗಳ ಜೇಬು ಸೇರುತ್ತಿದೆ. ಕಳೆದ ಹನ್ನೊಂದು ವರ್ಷಗಳಲ್ಲಿ ಸರ್ಕಾರಿ ಬೊಕ್ಕಸದ ಎಷ್ಟು ಹಣ ಖಾಸಗಿಯವರತ್ತ ಹರಿದಿದೆ ಎಂದು ಲೆಕ್ಕ ಹಾಕಬಹುದಾಗಿದೆ. ಆದರೆ ಇದೇ ಹಣವನ್ನು ಸರ್ಕಾರಿ ಸಾಲೆಗಳ ಬಲವರ್ಧನೆಗೆ , ಹೊಸ ಶಿಕ್ಷಕರ ನೇಮಕಾತಿಗೆ ಬಳಸಿದ್ದರೆ, ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯ ಬಲಗೊಳ್ಳುತ್ತಿತ್ತು.

ಅಂತಿಮವಾಗಿ rte ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚಿಸುತ್ತದೆ. ಅದು ಕೇವಲ ಕಾಲದ ಪ್ರಶ್ನೆಯಷ್ಟೆ. ಈ ಕಾಯ್ದೆ ಬಂದ ನಂತರ ಕಳೆದ ಹನ್ನೊಂದು ವರ್ಷಗಳಲ್ಲಿ ಹಾಜರಾತಿ ಕ್ಷೀಣಿಸಿದ ಕಾರಣ 20 ಸಾವಿರಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚಿಹೋಗಿವೆ.

2014 ರ ಸುಪ್ರೀಂ ಕೋರ್ಟ್ ತೀರ್ಪು: ಶಿಕ್ಷಣದಲ್ಲಿ ಕಲಿಕೆಯ‌ ಭಾಷೆ ಅಥವಾ ಮಾಧ್ಯಮವನ್ನು ಸರ್ಕಾರ ನಿರ್ಧರಿಸುವಂತಿಲ್ಲ

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಅಥವಾ ಮಾತ್ರುಭಾಶೆಯನ್ನು ಸಾರ್ವತ್ರಿಕವಾಗಿ ಜಾರಿಗೊಳಿಸುವ ಸರ್ಕಾರದ ಪ್ರಯತ್ನಗಳನ್ನು 2014ರಲ್ಲಿ ಹೊರಬಿದ್ದ ಸುಪ್ರೀಂ ಕೋರ್ಟ್ ಪೂರ್ಣ ಪೀಠ ಅಸಾಂವಿಧಾನಿಕ ಎಂದು ಹೇಳಿದೆ. ಈ ಮೂಲಕ 20 ವರ್ಷಗಳ ಸುದೀರ್ಘ ಕಾನೂನು ಹೋರಾಟ ಶೂನ್ಯ ಸಾಧನೆಯೊಂದಿಗೆ ಕೊನೆಗೊಂಡಿದೆ. ಕನ್ನಡ ಅಥವಾ ಮಾತ್ರುಭಾಶೆಯನ್ನು ಶಿಕ್ಷಣ ಮಾಧ್ಯಮವಾಗಿ ಕಡ್ಡಾಯ ಮಾಡುವುದನ್ನು ಪೋಷಕರ ಮತ್ತು ವಿದ್ಯಾರ್ಥಿಗಳ ಆಯ್ಕೆ ಮಾಡುವ ಮೂಲಭೂತ ಹಕ್ಕಿನ ಚ್ಯುತಿ ಎಂದು ಬಣ್ಣಿಸಿದೆ.

ಮೇಲಿನ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸಾರ್ವತ್ರಿವಾಗಿ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಧ್ಯಮ ವನ್ನು ಜಾರಿಗೊಳಿಸುವುದು ಭವಿಷ್ಯದಲ್ಲಿ ಅಸಾಧ್ಯ ಸಂಗತಿಯಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಿ ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಭರವಸೆ ನೀಡುತ್ತ ಮೂರು ಸಾಧ್ಯತೆಗಳನ್ನು ಜನತೆ ಎದುರು ಇಟ್ಟಿದ್ದರು

1.RTE ಕಾಯದೆ ಗೆ ತಿದ್ದುಪಡಿ ತರುವುದು

2 . ಕೇಂದ್ರ ಸರ್ಕಾರ ವನ್ನು ಒತ್ತಾಯಿಸುವ ಮೂಲಕ ಸಂವಿಧಾನಕ್ಕೆ ತಿದುಪಡಿ ತರುವುದು.

3 . ಪ್ರಧಾನಿಯ ಬಳಿಗೆ ಮುಖ್ಯಮಂತ್ರಿಗಳ ನಿಯೋಗ ಕರೆದೊಯ್ದು, ಸೂಕ್ತ ಕಾನೂನಿನ ಮೂಲಕ ಭಾರತೀಯ ಭಾಷೆಯ ಹಿತ ಕಾಯಲಾಗುವುದು.

ಎಂದು‌ ಹೇಳುತ್ತಲೇ ಏನೂ‌ ಮಾಡದೆ ಅವರು ನಿರ್ಗಮಿಸಿದರು‌

ಕನ್ನಡಕ್ಕೆ ದಶದಿಕ್ಕಿನಿಂದಲೂ ಗಂಡಾಂತರ

ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಬಳಿಕ ಸರ್ಕಾರದ ಅನುಮತಿಗಾಗಿ ಕಾದಿದ್ದ 4 ಸಾವಿರಕ್ಕೂ ಹೆಚ್ಚು ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳು ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ತಳ ಊರಿವೆ. 2009 ರ ಶಿಕ್ಷಣ ಹಕ್ಕು ಕಾಯ್ದೆ ಮತ್ತು 2014 ರಲ್ಲಿ ಹೊರಬಿದ್ದ ಸುಪ್ರೀ ಕೋರ್ಟ್ ತೀರ್ಪುಗಳೆರಡೂ ನಮ್ಮ ಸರ್ಕಾರಿ ಶಾಲೆಗಳನ್ನು ಮಸಣಗಾಣಿಸಲು ಪಣ ತೊಟ್ಟು ಕೆಲಸ ಮಾಡುತ್ತಿವೆ. ಕಳೆದ ಹನ್ನೆರಡು ವರ್ಷಗಳಲ್ಲಿ ಹತ್ತಿರ ಹತ್ತಿರ 15000 ಶಾಲೆಗಳು ವಿದ್ಯಾರ್ಥಿಗಳ ಪ್ರವೇಶಾತಿ ಇಲ್ಲದೆ ಮುಚ್ಚಿ ಹೋಗಿವೆ ಮತ್ತು ಸದ್ಯೋ ಭವಿಷ್ಯದಲ್ಲಿ ಅಪಾರ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿಹೋಗುವ ಅಪಾಯ ಎದುರಾಗಿದೆ.

ಪ್ರಾಥಮಿಕ‌ ಶಿಕ್ಷಣದಲ್ಲಿ ಸಾರ್ವತ್ರಿಕ‌ ಕನ್ನಡ‌ ಮಾಧ್ಯಮ ಇನ್ನು ‌ಮುಗಿದ ವಿಚಾರ

ಪ್ರಾಥಮಿಕ ಶಿಕ್ಷಣದಲ್ಲಿ ಮಾದ್ಯಮದ ಹೇರಿಕೆಯು ಅಸಾಂವಿದಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ನಂತರ , ಸಾರ್ವತ್ರಿಕವಾಗಿ ಪ್ರಾಥಮಿಕ ನಾಲ್ಕನೇ ತರಗತಿವರೆಗೆ ಕನ್ನಡ ಅಥವಾ ಮಾತ್ರುಭಾಶೆ ತರುವ ಪ್ರಯತ್ನ ಗಳನ್ನು ಕೈಬಿಟ್ಟು , ಸರಕಾರಗಳು 1ರಿಂದ 10 ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ರಕ್ಶಿಸಲು ಮುಂದಾಗಬೇಕಾಗಿದೆ.

ಇಂತಹ ವ್ಯತಿರಿಕ್ತ ಸನ್ನಿವೇಶದಲ್ಲಿಯೂ ಸಹ 2014-15 ಹಾಗೂ 2015-16 ರ SSLC ಯಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 5 ಲಕ್ಷ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 2.5 ಲಕ್ಷ. ಈ ಸಂಖ್ಯಾನುಪಾತ ಕ್ರಮವಾಗಿ 65% ಮತ್ತು 35%ರ ಪ್ರಮಾಣದಲ್ಲಿದೆ.

ಅಂದರೆ, ನಾಲ್ಕನೇ ತರಗತಿವರೆಗೆ ಇರಲಿ,ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ 65% ವಿದ್ಯಾರ್ಥಿಗಳು ಕನ್ನಡಮಾಧ್ಯಮದಲ್ಲಿ ಓದುತ್ತಿರುವ ಸೂರ್ಯ ಸ್ಪಷ್ಟ ಸಂಗತಿ. ಈ ಸರ್ಕಾರಕ್ಕೆ ಇದುವರೆಗೆ ಇದ್ದ ಸರ್ಕಾರಗಳಿಗೆ ಗಮನಿಸಬೇಕಾದ ವಿದ್ಯಮಾನವಾಗಿ ಕಾಣುತ್ತಲೇ ಇಲ್ಲ .

ಶೇ 65 ವಿದ್ಯಾರ್ಥಿಗಳು(5 ಲಕ್ಷ) 1ನೇ ತರಗತಿಯಿಂದ 10 ನೆ ತರಗತಿಯವರೆಗೆ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವಾಗ ಸರ್ಕಾರ ಈ ಬ್ರುಹತ್ ಸಂಖ್ಯೆಯ ಮಕ್ಕಳತ್ತ ಕಣ್ಣೆತ್ತಿಯೂ ನೋಡದೆ ಪ್ರಾಥಮಿಕ ಶಿಕ್ಷಣದಲ್ಲಿ 1ನೇ ತರಗತಿಯಿಂದ 4 ನೇ ತರಗತಿಯವರೆಗೆ ಕನ್ನಡ ಅಥವಾ ಮಾತ್ರುಭಾಶೆಯನ್ನು ಶಿಕ್ಷಣ ಮಾಧ್ಯಮವಾಗಿ ಜಾರಿ ಮಾಡುವ ಪ್ರಯತ್ನ ಕ್ರುತ್ರಿಮ ಪ್ರಯತ್ನವಾಗಿ,ಮಿಥ್ಯಾ ಪ್ರಯತ್ನವಾಗಿ ಕಾಣುತ್ತದೆ.

SSLC ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಕನ್ನಡ ಮಾಧ್ಯಮದಲ್ಲಿಯೇ ಉನ್ನತ ಶಿಕ್ಷಣ ಒದಗಿಸಬೇಕು

ಪ್ರೌಢಶಾಲೆ ಯಲ್ಲಿ ಪ್ರಥಮ ಭಾಷೆಗಾಗಿ ನಡೆದ ಗೋಕಾಕ್ ಚಳವಳಿ ಮತ್ತು ಪ್ರಾಥಮಿಕ ಹಂತದಲ್ಲಿ ಕನ್ನಡ ಶಿಕ್ಷಣ ಮಾಧ್ಯಮಕ್ಕಾಗಿ ನಡೆದ ಹೋರಾಟಗಳೆರಡೂ ಭಾಷಾಧಾರಿತ ಒಕ್ಕೂಟ ರಾಷ್ಟ್ರದಲ್ಲಿ ಅಧಿಕ್ರುತ ರಾಜ್ಯ ಭಾಷೆಯೊಂದು ತನ್ನ ಸಶಕ್ತೀಕರಣದ ದ್ರುಶ್ಟಿಯಿಂದ ನಡೆಸಿದ ಅತ್ಯಂತ ಕನಿಷ್ಟ ಫಲಾಪೇಕ್ಷೆಯ ಪ್ರಯತ್ನಗಳಾಗಿದ್ದವು.

ಆದರೆ ಭಾಷಾಧಾರಿತ ಒಕ್ಕೂಟ ರಾಷ್ಟ್ರವೊಂದರಲ್ಲಿ ರಾಜ್ಯಭಾಷೆಯ ಸಬಲೀಕರಣದ ದೃಷ್ಟಿಯಿಂದ ಈ ಕ್ರಮಗಳು ಅತ್ಯಂತ ಜುಜಬಿಯಾಗಿದ್ದರೂ ಈ ಎರಡೂ ಕನ್ನಡ ಸಂವರ್ಧನೆಯ ಪ್ರಯತ್ನಗಳನ್ನು ಕನ್ನಡ ವಿರೋಧಿ ಶಕ್ತಿಗಳು ವಿಫಲಗೊಳಿಸಿದವು. 35 ವರ್ಷಗಳ ದೀರ್ಘ ಹೋರಾಟ ಈ ರೀತಿ ಕರುಣಾಜನಕವಾಗಿ ನೆಲಕಚ್ಚಿತು.

ಕನ್ನಡ ಭಾಷೆ, ಕನ್ನಡ ಮಾಧ್ಯಮ ಹಾಗೂ ಸರ್ಕಾರಿ ಶಾಲೆಗಳ ಉಳಿವಿಗೂ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೂ ಪಾರಸ್ಪರಿಕವಾದ ಸಂಬಂಧವಿದ್ದು, ಈ ಅಂಶದತ್ತ ಸರ್ಕಾರ ಗಮನ ಹರಿಸಬೇಕಾಗಿದೆ. ಈಗ ಇರುವಂತೆ, ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳ ಶಿಕ್ಷಣ SSLC ನಂತರ ಬಂದ್ ಆಗುತ್ತದೆ. ಆ ನಂತರ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣದಲ್ಲಿ ಯಾವ ಜ್ಞಾನ ಶಾಖೆಗಳಲ್ಲಿಯೂ ಕನ್ನಡ ಮಾಧ್ಯಮವನ್ನು ಕಾಣಲಾರೆವು.

ಈ ಮೂಲಕ ಕಳೆದ ನಾಲ್ಕುದಶಕಗಳಿಗೂ ಹಿಂದಿನಿಂದಲೂ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಎಂಜಿನಿಯರಿಂಗ್ , ಮೂಲವಿಜ್ನಾನ, ವಾಣಿಜ್ಯ ಮ್ಯಾನೇಜ್ ಮೆಂಟ್….. ಇತ್ಯಾದಿ ಉನ್ನತ ಶಿಕ್ಷಣವನ್ನು ನಿರಾಕರಿಸುವ ಮೂಲಕ ವ್ಯವಸ್ಥಿತವಾಗಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಶಿಕ್ಷಣ ಕ್ಷೇತ್ರದಿಂದಲೇ eliminate ಮಾಡಲಾಗುತ್ತಿದೆ. SSLC ವರೆಗೆ 10 ವರ್ಷಗಳ ಕಾಲ ಕನ್ನಡ ಮಾಧ್ಯಮದಲ್ಲಿ ಓದಿದ ಈ ವಿದ್ಯಾರ್ಥಿಗಳಿಗಾಗಿ ಎಲ್ಲ ಜ್ಞಾನ ಶಾಖೆಗಳಲ್ಲಿಯೂ ಕನ್ನಡ ಮಾಧ್ಯಮದಲ್ಲಿಯೇ ಉನ್ನತ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಈ ಕ್ರಮದಿಂದ ಮಾತ್ರವೇ ಕನ್ನಡ ಭಾಷೆ, ಕನ್ನಡಶಾಲೆಗಳು ಮತ್ತು ಕನ್ನಡ ಶಿಕ್ಷಣ ಮಾಧ್ಯಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ವಿಜ್ಙಾನ ಮತ್ತು ಮಾನವಿಕ ಪಠ್ಯಗಳ ಕನ್ನಡೀಕರಣ

ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ಇದುವರೆಗೆ ರೂಪಿಸಲಾಗಿರುವ ಪಠ್ಯಗಳು ಸಂಸ್ಕೃತ ಪಾರಿಭಾಷಿಕಗಳಿಂದ ತುಂಬಿಹೋಗಿ ಅಧ್ವಾನ್ನವಾಗಿವೆ. ಕನ್ನಡ ಜನ ಸಮುದಾಯವನ್ನು ನಾಶಮಾಡಲೆಂದೇ ರೂಪಿಸಲಾಗಿರುವ ಈ ಪಠ್ಯಗಳು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿ ಮನೆಗೆ ಹೋಗುವಂತೆ ಮಾಡುವಂತಿವೆ.

ಸಂಸ್ಕೃತ ಲಾಬಿ ರೂಪಿಸಿರುವ ಈ ಸಂಸ್ಕೃತ ಪಾರಿಬಾಷಿಕಗಳಿಂದ ಕಿಕ್ಕಿರಿದು (technical terms) ವಿದ್ಯಾರ್ಥಿಗಳನ್ನು ಉನ್ನತ ಹಂತಗಳಿಗೆ ಹೋಗದಂತೆ ತಡೆಯುವ ಈ ಪಠ್ಯಕ್ರಮ ಕುವೆಂಪು ಅವರ ಅನುವಾದ ಕ್ರಮವನ್ನೂ ಕನ್ನಡದಲ್ಲಿ ಜ್ಙಾನ ನಿರ್ಮಿಸುವ ವಿಧಾನವನ್ನೂ ಸಂಪೂರ್ಣವಾಗಿ ತಿರಸ್ಕರಿಸಿದೆ. ಇದರಿಂದಾಗಿ ಕನ್ನಡದಲ್ಲಿ ಆಧುನಿಕ ಜ್ಙಾನವು ಒಳಬರಲಾಗಿಲ್ಲ.‌ಇದರ ವಿರುದ್ದ ಕನ್ನಡಿಗರು ರೊಚ್ಚಿಗೇಳುವುದಿರಲಿ, ಯೋಚನೆ ಕೂಡಾ ಮಾಡಿಲ್ಲ.

ಕನ್ನಡ ಅಕ್ಷರ ಮಾಲೆಯ ಪರಿಷ್ಕರಣೆ

ಇತ್ತೀಚೆಗೆ ನನ್ನ ಕೆಲವರು ಸ್ನೇಹಿತರ ನಡುವೆ “ವೈಯಕ್ತಿಕ” ಎಂಬ ಶಬ್ದವನ್ನು ಹೇಗೆ ಬರೆಯಬೇಕೆಂಬ ಚರ್ಚೆ ನಡೆಯಿತು. ಅದರಲ್ಲಿ ಅನೇಕರು ಮುಂದೆ ಬಂದು ತಮ್ಮ ಅಭಿಪ್ರಾಯ ಗಳನ್ನು ಬರೆದರು. ನಾನೂ ಕೂಡಾ ಆ ಚರ್ಚೆಯಲ್ಲಿ ಭಾಗವಹಿಸಿ ನನ್ನ ಅಭಿಪ್ರಾಯ ಹೇಳಿದೆ.

ವೈಯಕ್ತಿಕ ಅನ್ನುವುದು ಸಂಸ್ಕೃತ ಪದವಾದ್ದರಿಂದ ಅದನ್ನು ಮೇಲಿನಂತೆ ಬರೆಯುವುದು ವಾಡಿಕೆಯಲ್ಲಿರುವಂತೆ ಅಂದರೆ ಹೀಗೆ (ವ್+ಐ) =ವೈ+ಯಕ್ತಿಕ ಎಂದು ಬರೆಯಬಹುದು ಅಂದೆ. ಸರಿ, ಆದರೆ ಈ ಪದ ಕನ್ನಡೀಕರಣಕ್ಕೆ ಒಳಗಾಗಿ ಬದಲಾದರೆ ಅದು (ವ್+ಅ+ ಯ್)+ಕ್+ತ್+ಇ+ಕ ಅಂದರೆ “ವಯಕ್ತಿಕ ” ಎಂದು ಬರೆದರೆ ಸೂಕ್ತ ಎಂದೆ. ಆದರೆ ಅಲ್ಲಿದ್ದ “ವಿದ್ವಾಂಸರಿಗೆ” ಅದು ಹಿಡಿಯಲಿಲ್ಲ. ವೈಯಕ್ತಿಕವೆ ಸರಿ ಎಂದು ವಾದಿಸಿದರು. ನಾನು ಕನ್ನಡ ಜಾಯಮಾನಕ್ಕೆ ಹೊಂದದ ಸಂಸ್ಕೃತ ಪದ ಎಂದೆ. ಆದರೆ ಅಲ್ಲಿದ್ದ ಕೆಲವರು ಪ್ರತಿಭಟಿಸಿದರು.

ನಾವು ಬರೆಯುವ ಬರೆಹ ಶುದ್ದವಾಗಿರಬೇಕೆಂದು ಸಾಮಾನ್ಯವಾಗಿ ನಿರಿಕ್ಷಿಸಲಾಗುತ್ತದೆ. ಪ್ರಾಥಮಿಕ ಶಾಲೆಯ ಹಂತದಲ್ಲಿರುವಾಗಲೇ ಬರೆಹ ಶುದ್ದಿಯ ಪಾಠಗಳು ನಮ್ಮ ತಲೆಗೆ ಬೀಳುತ್ತಿರುತ್ತವೆ. ಬರಹ ಶುದ್ದಿ ಅಂದರೆ ಪದ ಶುದ್ಧಿ. ಪದ ಶುದ್ದಿಗೆ ಬೇಕಾಗುವ ಅಕ್ಷರಗಳು ಅಂದರೆ ಇದು ಅಂತಿಮವಾಗಿ ಅಕ್ಷರ ಶುದ್ಧಿ . ಅಕ್ಷರ ಶುದ್ಧಿಯ ಹಿಂದೆ ಇರುವುದೇ ಪದವೊಂದನ್ನು ರಚಿಸಲು ಸೂಕ್ತ ಅಕ್ಷರಗಳನ್ನು ಆಯುವ ತಾರತಮ್ಯ ಜ್ಙಾನ . ಇದನ್ನು ಮೂಡಿಸುವಲ್ಲಿಯೇ ನಮ್ಮ ಬಹುಪಾಲು ಮೇಷ್ಟ್ರು ಗಳು ಶ್ರಮ ವ್ಯಯವಾಗುತ್ತದೆ. ಈ ತರಹದ, ಪದ ರಚನೆಗಾಗಿ ಸೂಕ್ತ ಅಕ್ಷರಗಳನ್ನು ಆಯುವ ಸಮಸ್ಯೆಯ ಮೂಲ ಯಾವುದು ಎಂಬುದನ್ನು ಹುಡುಕುತ್ತ ಹೊರಟರೆ ನಾವು ನಮ್ಮ ಕನ್ನಡ ವರ್ಣ ಮಾಲೆ ಅಥವಾ ಅಕ್ಷರ‌ಮಾಲೆಗೆ ಬಂದು ನಿಲ್ಲುತ್ತೇವೆ.

ಈ ವಿಚಾರದಲ್ಲಿ ಕನ್ನಡ ಬರೆಹ ಎದುರಿಸುತ್ತಿರುವುದು ವಿಲಕ್ಷಣ ಸನ್ನಿವೇಶ. ಪ್ರತಿಯೊಂದು ಬಾಷೆಯೂ ತಾನು ಬರೆಹದ ಭಾಷೆಯಾಗುವ ಪೂರ್ವದಲ್ಲಿ ಅಲಿಖಿತ , ಮೌಖಿಕ ಸ್ವರೂಪದಲ್ಲಿ ತನ್ನ ವ್ಯಕ್ತಿತ್ವ ಅಥವಾ ಜಾಯಮಾನವನ್ನು ರೂಪಿಸಿಕೊಂಡಿರುತ್ತದೆ. ನುಡಿಯ ವ್ಯಕ್ತಿತ್ವವು ಆ ಬಾಷೆಯನ್ನಾಡುವ ಜನರ ಜಾಯಮಾನವೂ ಆಗಿರುತ್ತದೆ. ನಂತರ ಅದು ಬರೆಹ ರೂಪಕ್ಕೆ ಬರುವಾಗ ತನ್ನ ಜಾಯಮಾನಕ್ಕೆ ತಕ್ಕ ಬರೆಹದ ಭಾಷೆಯನ್ನು ಹೊತ್ತು ಬರಬೇಕಾಗುತ್ತದೆ.

ಆದರೆ ಕನ್ನಡದ ಬರೆಹಕ್ಕೂ ಮತ್ತು ಆಡುಬಾಷೆಗೂ ನಡುವೆ ಆಳವೂ ಅಗಲವೂ ಆದ ಕಂದಕ ಉಂಟಾಗಿದೆ. ಕಳೆದ ಸಾವಿರಾರು ವರ್ಷಗಳಷ್ಟು ಆಳದ ಅಗಲದ ಕಂದಕ ಅದು. ಶಾಲಾ ಕಾಲೇಜುಗಳಲ್ಲಿ ನಾವು ಕನ್ನಡ ಬೋಧಿಸುವ ಶಿಕ್ಷಕರು ಎದುರಿಸುವ ಸಮಸ್ಯೆಯೆಂದರೆ ವಿದ್ಯಾರ್ಥಿಗಳ ಬರೆಹದ ಶುದ್ಧಿಯದು.

ಉಚ್ಚಾರ ಸಮಾನವಾಗಿದ್ದರೂ ‘ಋಷಿ’ ಎಂದು ಬರೆದ ವಿದ್ಯಾರ್ಥಿಯನ್ನು ಜಾಣನೆಂದು ಪರಿಗಣಿಸಿ ‘ ರುಶಿ ‘ ಎಂದು ಬರೆದವನನ್ನು ದಡ್ಡ ಎಂದು ಇಲ್ಲಿ ಶಿಕ್ಷಿಸಲಾಗುತ್ತಿದೆ ಮತ್ತು ಅವನಿಗೆ ಮಾರ್ಕ್ಸ್ ಕಡಿತ ಮಾಡಲಾಗುತ್ತಿದೆ. ಅಂದರೆ ಪಂಡಿತ-ಪಾಮರ ಭೇದಕ್ಕೆ ಈ ವರ್ಣಮಾಲೆ ಎಡೆಮಾಡುತ್ತಿದೆ. ಇದಕ್ಕೆ ಕಾರಣವಾದ ಕನ್ನಡ ವರ್ಣಮಾಲೆಯನ್ನು ನಾವು ವಿಶ್ಲೇಷಿಸಿ ನೋಡಬಹುದು .ಅಂತರ ರಾಷ್ಟ್ರೀಯ ಖ್ಯಾತಿಯ ಭಾಷಾವಿಜ್ಙಾನಿಗಳಾದ ಕನ್ನಡಿಗ ಡಾ ಡಿ ಎನ್ ಶಂಕರಭಟ್ ಅವರು ಈ ಕುರಿತ ಆಳವಾದ ಅಧ್ಯಯನ ನಡೆಸಿದ್ದಾರೆ

ಕ್ರಿ ಶ. ಮೂರನೆಯ ಶತಮಾನದ ಸುಮಾರಿನಲ್ಲಿ ಬ್ರಾಹ್ಮಿಯಿಂದ ಲಿಪಿಯನ್ನು ಸ್ವೀಕರಿಸುವಾಗ ನಡೆದ ಲಿಪಿ ಸ್ವೀಕರಣ ವಿದ್ಯಮಾನವು ಕನ್ನಡ ಜಾಯಮಾನಕ್ಕೆ ಒಗ್ಗದ ಸಂಸ್ಕೃತ ಅಕ್ಷರಗಳನ್ನೂ ಒಳಸೇರಿಸಿಕೊಂಡು ಕನ್ನಡ ಬಾಷೆಗೆ ಘಾತುಕವಾಗಿ ಪರಿಣಮಿಸಿತು. ತಮಿಳಿನಂತಹ ಭಾಷೆ ತನ್ನ ಜಾಯಮಾನಕ್ಕನುಗುಣವಾಗಿ 30 ಅಕ್ಷರಗಳನ್ನು ಸ್ವೀಕರಿಸಿದರೆ , ಕನ್ನಡವು 52 ಅಕ್ಷರಗಳನ್ನು ಸ್ವೀಕರಿಸುತ್ತದೆ. ಇಲ್ಲಿಂದ ಕನ್ನಡ ಬರೆಹದ ಆತ್ಮಹತ್ಯಾತ್ಮಕ ಆಂತರಿಕ ಸಂಘರ್ಷ ಆರಂಭಗೊಳ್ಳುತ್ತದೆ..

ಈಗ ಕನ್ನಡ ವರ್ಣಮಾಲೆಯಲ್ಲಿ 49 ಅಕ್ಷರಗಳಿವೆ . ಈ ವರ್ಣಮಾಲೆಯಲ್ಲಿ ಸ್ವರಾಕ್ಷರಗಳಾಗಿರುವ “ಋ” ಕನ್ನಡಕ್ಕೆ ಅಗತ್ಯವಿಲ್ಲ ಅದೇ ಧ್ವನಿ ಯನ್ನು ಹೋಲುವ “ರ” ವರ್ಣಮಾಲೆಯಲ್ಲಿ ಇದೆ.
“ಐ” ಮತ್ತು “ಔ” ಗಳನ್ನು ಅಯ್ ಮತ್ತು ಅವ್ ಗಳಿಂದ ರಚಿಸಿಕೊಳ್ಳಬಹುದಾಗಿದೆ. ಇನ್ನು ಯೋಗವಾಹಗಳಾದ ‘ಅಂ’ , ‘ಅಮ್’ ಎಂದೂ ‘ಅಃ’ ಎನ್ನುವುದನ್ನು ‘ಅಹ’ ಎಂದು ಬರೆಯಬಹುದಾಗಿದೆ.

ಇನ್ನು ಕನ್ನಡಕ್ಕೆ ಮಹಾಪ್ರಾಣಗಳ ಅವಶ್ಯಕತೆ ಇಲ್ಲ ಹಾಗೂ ಮೊದಲೆರಡು ಅನುನಾಸಿಕಗಳನ್ನು ಬಿಟ್ಟುಬಿಡಬಹುದು. ಮತ್ತು ಕೊನೆಯದಾಗಿ ಅವರ್ಗೀಯ ವ್ಯಂಜನ ಗಳಲ್ಲಿ ಶ ಮತ್ತು ಷ ಗಳೆರಡೂ ಒಂದೇ ಬಗೆಯ ಉಚ್ಚಾರಣೆ ಹೊಂದಿರುವುದರಿಂದ ಸಂಸ್ಕೃತ ಪದಗಳಲ್ಲಿ ಬಳಕೆಯಾಗುವ ಷ ವನ್ನು ಬಿಟ್ಟುಬಿಡಬಹುದಾಗಿದೆ.

ಹೀಗೆ ಕನ್ನಡಕ್ಕೆ ಅನವಶ್ಯಕವಾದ ಸುಮಾರು 18 ಅಕ್ಷರಗಳನ್ನು ಕನ್ನಡ ವರ್ಣಮಾಲೆಯಿಂದ ಹೊರಹಾಕಿದರೆ ಕನ್ನಡ ತನ್ನ ಬರೆಹ ಪೂರ್ವದ ಆಡು ಮಾತಿನ ತನ್ನ ವ್ಯಕ್ತಿ ವಿಶಿಷ್ಟತೆಯನ್ನು ಅಥವಾ ಜಾಯಮಾನವನ್ನು ಮರಳಿ ಪಡೆದಂತಾಗುತ್ತದೆ.

ಇದರಿಂದಾಗಿ ಕನ್ನಡ ಬರೆಹವು ಪಂಡಿತ ಮತ್ತು-ಪಾಮರ ಎಂಬ ಭೇದವನ್ನು ಕಳೆದುಕೊಂಡು ಎಲ್ಲರ ಕನ್ನಡವಾಗುತ್ತದೆ. ಆಗ ಯಾರೂ “ಷುಭಾಷಯ” ಎಂದು ಬರೆದು ಗೊಂದಲಗೊಳ್ಳುವುದಿಲ್ಲ . ಇರುವುದೊಂದೇ ‘ ಶ ‘ ಆದ ಕಾರಣ ಪಂಡಿತ ಪಾಮರ ರಿಬ್ಬರೂ “ಶುಬಾಶಯ” ಎಂದು ಬರೆಯುತ್ತಾರೆ..ಯಾರೂ ದಡ್ಡರೆಂಬ ಹೀಗಳೆತಕ್ಕೆ ಈಡಾಗುವುದಿಲ್ಲ ಅಥವಾ ಜಾಣನೆಂಬ ಹೆಮ್ಮೆ ಪಡಲು ಅವಕಾಶವಾಗುವುದಿಲ್ಲ.

ಆಗ ಸಂಸ್ಕೃತ ದಿಂದ ಕನ್ನಡದ ಒಳಬರುವ ಪದಗಳು (ಶುಭಾಶಯ) ಕನ್ನಡೀಕರಣಕ್ಕೊಳಗಾಗಿ (ಶುಬಾಶಯ)ವಾಗಿ ಒಳಬರುತ್ತವೆ ಕನ್ನಡ ಬಾಷೆ ಸಾರ್ವಭೌಮ ಪದವಿಗೇರುತ್ತದೆ ಸಂಸ್ಕೃತದ ದಬ್ಬಾಳಿಕೆ ಅ ಕ್ಷಣದಿಂದಲೇ ನಿವಾರಿಸಲ್ಪಡುತ್ತದೆ.

ವರ್ಣಮಾಲೆಯ ಪರಿಷ್ಕರಣದಿಂದಾಗುವ ಪ್ರಯೋಜನಗಳು:

೧. ವರ್ಣಮಾಲೆಯ ಗಾತ್ರ ಗಣನೀಯವಾಗಿ ಕುಗ್ಗಿ 31 ರಿಂದ 33 ಕ್ಕೆ ಕೆಳಕ್ಕಿಳಿಯುತ್ತದೆ.

೨. ಇದರಿಂದ ಮಕ್ಕಳಿಗೆ ಅಕ್ಷರ ಕಲಿಕೆಯ ಭಾರ ಇಳಿಯುತ್ತದೆ ಮಣ ಗಾತ್ರದ ಅಕ್ಷರ ಮಾಲೆ ಗಾಳಿಯಂತೆ ಹಗುರಾಗುತ್ತದೆ.

೩. ಪಂಡಿತ – ಪಾಮರ ಭೇದ ಅಳಿಯುತ್ತದೆ.

೪. ಕನ್ನಡ ,ಎಲ್ಲರ ಕನ್ನಡವಾಗುತ್ತದೆ

೫. ಕನ್ನಡವು ತನ್ನ ಮೂಲ ವ್ಯಕ್ತಿತ್ವವನ್ನು ಮರಳಿಪಡೆಯುತ್ತದೆ

೬. ಬರೆಹದ ದೋಷಗಳು ಗಣನೀಯವಾಗಿ ತಗ್ಗುತ್ತವೆ

೭. ಕನ್ನಡವು ಸದೃಢವಾಗುತ್ತದೆ , ಜ್ಙಾನ ಧಾರಣಕ್ಕೆ ಭಾಷೆಯನ್ನು ಅಣಿಗೊಳಿಸಿದಂತಾಗುತ್ತದೆ.

ಆದರೆ ಕನ್ನಡ ಅಕ್ಷರ ಮಾಲೆಯನ್ನು ಸುಧಾರಿಸುವ ಧೀರ ಕಾರ್ಯಕ್ಕೆ ಕೈಹಾಕದ ಕನ್ನಡಿಗರು ಸಂಸ್ಕೃತದ ಅಡಿಯಾಳಾಗಿ ಗುಲಾಮಗಿರಿಯಲ್ಲಿ ಸುಖ ಕಾಣುತ್ತಿದ್ದಾರೆ. ಕನ್ನಡೋದ್ಧಾರದ ಹಲವು ಕೆಲಸಗಳಲ್ಲಿ ಕನ್ನಡ ಅಕ್ಷರ ಮಾಲೆಯ ಪರಿಷ್ಕರಣೆಯೂ ಬಹಳ ಮುಖ್ಯವಾದದ್ದಾಗಿದೆ.

ಇವೆಲ್ಲಾ ಗಂಡಾಂತರಗಳನ್ನು ನಿವಾರಿಸಿ ಪರಿಹರಿಸಿಕೊಳ್ಳುವ ವಿವೇಕವನ್ನಾಗಲಿ ಅಥವಾ ದಿಟ್ಟತನವನ್ನಾಗಲಿ ನಾವು ಕನ್ನಡಿಗರು ತೋರದಿದ್ದರೆ ಕನ್ನಡದ ಅಸ್ತಿತ್ವ ಅಥವಾ ನೆಲಗಟ್ಟಿಗೆ ಸರಿಪಡಿಸಲಾಗದ ಹಾನಿಯಾಗಲಿದೆ.. ಈಗಾಗಲೇ ಆಗಿಬಿಟ್ಟಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು