” ಕನ್ನಡಿಗನಾಗುವ ಬಗೆ ಇದಲ್ಲ…. “

Share on facebook
Share on twitter
Share on linkedin
Share on whatsapp
Share on telegram
Share on email
Share on print

-ಡಾ ಕೆ ಪಿ ನಟರಾಜ

ನನಗೆ ವೈಯಕ್ತಿಕವಾಗಿ ಬೆಳಗೆರೆ ಇಷ್ಟವಿರಲಿಲ್ಲ.‌ ಅವರ ಬರೆಹಗಳು ಓದುಗರನ್ನು ಹಾಳುಗೆಡವುತ್ತಿದ್ದವು. ಲಂಕೇಶ್ ಜೊತೆಗೆ ಅವರ ಜಗಳದ ಸಂದರ್ಭದಲ್ಲಿ ಅವರ ಉದ್ದಟತನ ಸಹಿಸದಾಗಿತ್ತು. ಲಂಕೇಶ್ ಅವರನ್ನು ‘ನೀವೊಂದು ವೃದ್ಧ ಹಸು ‘ ಅಂತ ಎರಡೂ ಪತ್ರಿಕೆಗಳ ವೇದಿಕೆಗಳಲ್ಲಿ ನಡೆಯುತ್ತಿದ್ದ ಜಗಳದಲ್ಲಿ ಹಂಗಿಸಿ ಕರೆದಿದ್ದು ( ಲಂಕೇಶ್ ಅಂತಹ ಲಂಕೇಶರನ್ನೇ ಕಟುವಾಗಿ ಟೀಕಿಸಬಲ್ಲೆ ಎಂದು ತನ್ನ ಓದುಗರನ್ನು ಇಂಪ್ರೆಸ್ ಮಾಡಲು ) ಅಸಹನೀಯವಾಗಿತ್ತು. ನಾನಂತೂ ಅಲ್ಲಿಂದಾಚೆಗೆ ಅವರ ಬಗ್ಗೆ ಬೇಸರಗೊಂಡೆ. ಆ ಅಹಂಕಾರದ ಹಿಂದೆ ನನಗೆ ಅವರ ಜಾತಿಜನ್ಯ ಮದ ಕಾಣುತ್ತಿತ್ತು.

ಅವರ ಜರ್ನಲಿಸಂ ವೇಶ್ಯೆಯರನ್ನು ಹಿಂಸಿಸಿದ, ಭೂಗತ ರೌಡಿ ಗಳನ್ನು ವೈಭವೀಕರಿಸಿದ, ಉದ್ಧಟತನದ ರಾಜಕೀಯ ವಿಮರ್ಶೆಗಳಿಂದ, ಮೀಡಿಯೋಕರ್ ಸಾಹಿತ್ಯ ಬರೆಹಗಳಿಂದ, ಜ್ಞಾನ ಶಿಸ್ತುಗಳ ಬಗೆಗಿನ ಅರೆಬರೆ ತಿಳುವಳಿಕೆಯಿಂದ ಕಟ್ಟಿದ್ದಾಗಿತ್ತು. ಅವರ ಪತ್ರಿಕೆ ಲಂಕೇಶ್ ಪತ್ರಿಕೆಗೆ ಸೆಡ್ಡುಹೊಡೆಯಲು ನಡೆಸುತ್ತಿದ್ದ ಪ್ರಯತ್ನ, ನವಿಲಿನ ಎದುರು ಕೆಂಬೂತದ ಕುಣಿತದ ರೂಪಕವನ್ನು ಹೋಲುತ್ತಿತ್ತು.

ಹುಡುಗ ಹುಡುಗಿಯರ ಕಾಮನೆಗಳನ್ನು ಕೆರಳಿಸಿ ಅವರನ್ನು ಮಾನವೀಯ ಪ್ರೇಮಕ್ಕಲ್ಲ, ಹಾದರಕ್ಕೆಳೆಯುತ್ತಿತ್ತು. ಅವರ ಬರೆವಣಿಗೆ, ಕ್ರೈಮ್‌ಗಳ ವೈಭವೀಕರಣವೂ ಯುವಕರನ್ನು ಹಾಳುಗೆಡವುತ್ತಿತ್ತು‌. ಆದ್ದರಿಂದ ಹರೆಯದವರು ‘ಹಾಯ್ ಹಾಯ್’ ಅನ್ನುತ್ತ ಆ black and white ಪೇಪರ್ಗ ಗೆ ಮುಗಿಬೀಳುತ್ತಿದ್ದರು. ನಾನು ನನ್ನ ಜೀವಮಾನವಿಡೀ ಆ ಪೇಪರ್ ಓದಲಿಲ್ಲ. ಅವರು ಕಟ್ಟಿದ ‘ಬಾವನಾ’ ಪ್ರಕಾಶನದಿಂದ ತಂದ ಪುಸ್ತಕಗಳಲ್ಲಿ ಹಲವು ಕೆಟ್ಟ ಅಭಿರುಚಿಯ ಪುಸ್ತಕಗಳಾಗಿದ್ದವು.

“ಇಂದಿರೆಯ ಮಗ ಸಂಜಯ” ಅನ್ನುವ ಶೀರ್ಷಿಕೆ ನೋಡಿದರೆ ಅಲ್ಲಿನ ಅಗೌರವಕ್ಕೆ, ದುರಹಂಕಾರಕ್ಕೆ ಉರಿದುಬೀಳುತ್ತಿದ್ದೆ. ಗೋಡ್ಸೆಯನ್ನು ಜನಮನ ಒಪ್ಪುವಂತಹ ಪುಸ್ತಕವೊಂದನ್ನು ಅನುವಾದ ಮಾಡಿದ್ದನ್ನು ಮತ್ತು ಅಂತಹ ಸರಣಿ‌ ಪ್ರಕಟಣೆಗಳನ್ನು ನೋಡಿದರೆ ಇವತ್ತಿನ ಹಿಂದುತ್ವಕ್ಕೆ ಕರ್ನಾಟಕದಲ್ಲಿ ತಾತ್ತ್ವಿಕ ತಳಹದಿ ಹಾಕಿದ್ದು ರವಿ ಬೆಳಗೆರೆ ಎನ್ನುವುದು ಗೊತ್ತಾಗುತ್ತದೆ. ಕರ್ನಾಟಕದ ಒಟ್ಟೂ ಬದುಕಿಗೆ ‘ಹಾಯ್ ಬೆಂಗಳೂರು’ ಕೊಡುಗೆ ಏನು ಎನ್ನುವುದನ್ನು ಯಾರಾದರೂ ಹೇಳಿದರೆ ಒಳ್ಳೆಯದು.

ಬೆಳಗೆರೆ ಹಲವರ ಜೊತೆ ಸ್ನೇಹದಿಂದ ಇದ್ದಿದ್ದನ್ನು ನೋಡುತ್ತಿದ್ದರೆ ಅವರ ವ್ಯಕ್ತಿತ್ವದ ವಿಲಕ್ಷಣ ಗುಣದ ಬಗ್ಗೆ ಯೋಚಿಸುವಂತಾಗುತ್ತದೆ. ಹಾಯ್ ಬೆಂಗಳೂರು ಒಂದು ಬಗೆಯಲ್ಲಿ ಕರ್ನಾಟಕದ ಯುವ ಜಗತ್ತನ್ನು ಸಜ್ಜನಿಕೆ ಮತ್ತು ಸೆನ್ಸಿಬಿಲಿಟಿ ಎದುರು ಉದ್ದಟವಾಗಿ ಕಡೆದು ನಿಲ್ಲಿಸಿತು ಅಂತ ನಾನು ಯೋಚಿಸುತ್ತೇನೆ. ಯಾಕೆಂದರೆ ಇವರ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಬರೆಹ ನೋಡಿ ಇದರ ಓದುಗರು ಲಂಕೇಶ್ ಅವರನ್ನು ಬಾಯಿಗೆ ಬಂದಂತೆ ಲೇವಡಿ ಮಾಡುತ್ತಿದ್ದರು. ಕರ್ನಾಟಕದ ಒಂದು ತಲೆಮಾರಿನ ಅಭಿರುಚಿ ನಾಶದಲ್ಲಿ ಇವರ ಬರವಣಿಗೆಯ ಪ್ರಭಾವವಿತ್ತು. ಲಂಕೇಶ್ ಅವರು ತಮ್ಮ‌ ಪತ್ರಿಕೆಯ ಮೂಲಕ ಕಟ್ಟುತ್ತಿದ್ದುದ್ದನ್ನು ಈ ಮನುಷ್ಯ ತನ್ನ ಪತ್ರಿಕೆಯಲ್ಲಿ ಕೆಡವಿ ನೆಲಸಮ‌ಮಾಡಲು ಉದ್ದೇಶಿಸಿದ್ದಂತಿತ್ತು‌. ಅದಕ್ಕೆಂದೇ, ತನ್ನ ಪತ್ರಿಕೆಯನ್ನು ವರ್ಣದ ಸೌಂದರ್ಯದಲ್ಲಿ ಮಿಂದೇಳುತ್ತಿದ್ದ ಲಂಕೇಶ್ ಗೆ ವಿರುದ್ಧವಾಗಿ ಸುಡುಗಾಡು ಸಮ ಕಪ್ಪು ಬಿಳುಪಿನಲ್ಲಿ ತರುತ್ತಿದ್ದಂತೆ ಇತ್ತು. ಆದರೆ ಬೆಳಗೆರೆಯವರು ಅದನ್ನು ”ಕಪ್ಪು ಸುಂದರಿ” ಎಂದು ಕರೆಯುತ್ತಿದ್ದರು.

ಏನಾದರಾಗಲಿ ಕನ್ನಡದ ಪತ್ರಿಕಾರಂಗದಲ್ಲಿ, ಕನ್ನಡದ ಸರಸ್ವತಿ ಮಂದಿರದಲ್ಲಿ ತನ್ನದೇ ಬಗೆಯಲ್ಲಿ ನುಡಿ ಕಾಣಿಕೆ ಇಡಲು ಯತ್ನಿಸಿದ ಈ ಕನ್ನಡಿಗನಿಗೆ ಸಂತಾಪಗಳು. ಆದರೆ ಇವರು ನಮಗೆಲ್ಲರಿಗೂ ಪ್ರಿಯವಾಗುವಂತಿದ್ದಿದ್ದರೆ ಚೆನ್ನಾಗಿತ್ತು ಅನ್ನಿಸದೆ ಇರದು. ನನಗೆ ಇವರ ಪ್ರತಿಮಾ ಬೇಡಿ ಯವರ ಆತ್ಮ ಚರಿತ್ರೆಯ ಅನುವಾದ (ಟೈಂ ಪಾಸ್) ಮಾತ್ರ ಮನಸ್ಸಿಗೆ ಹಿಡಿಸಿದ ಪುಸ್ತಕ. ಅಷ್ಟೊತ್ತಿಗೆ ಇವರ ಬಗ್ಗೆ ನಾನು ಕಟ್ಟಿಕೊಂಡ ಆಧಾರ ಸಹಿತ ಪೂರ್ವಾಗ್ರಹ ಗಳಿಂದಲೋ ಏನೋ ಕೆಲವೊಂದು ಒಳ್ಳೆಯ ಪುಸ್ತಕಗಳಿದ್ದರೂ ಓದಲಾಗಿಲ್ಲ ಅನ್ನಿಸುತ್ತದೆ.

ರವಿ ಬೆಳಗೆರೆಯವರ ಆಟಾಟೋಪ, ಬಿಲ್ಡಪ್, ಲಂಕೇಶ್ ಅವರಲ್ಲಾದಂತೆ ಲಿರಿಕಲ್ ಆಗದೆ ವಲ್ಗರ್ ಆಗಿಬಿಡುತ್ತಿದ್ದ ಹೆಣ್ಣು ಗಂಡಿನ ಸಂಬಂಧಗಳ ಬಗ್ಗೆ ಬರೆಯುತ್ತಿದ್ದ ಬರೆಹಗಳು ಲಂಕೇಶ್ ಕಟ್ಟುತ್ತಿದ್ದ ಪ್ರಜಾಪ್ರಭುತ್ವದ ಸೌಧಗಳನ್ನು ಕೆಡವಲೆಂದೇ ಬರೆಯುತ್ತಿದ್ದುದು.

ಬೆಳಗೆರೆಯವರೆ ಹೀಗಿರಬಾರದಿತ್ತು ನೀವು. ಇದು ಕನ್ನಡಿಗನಾಗುವ ಬಗೆಯಾಗಿರಲಿಲ್ಲ….

ಇರಲಿ
ನಿಮಗೆ ಸಂತಾಪಗಳು , ಹೋಗಿ ಬನ್ನಿ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು