ಕಲ್ಲಿದ್ದಲು ಹಾಗೂ ವಿದ್ಯುತ್ ಕೊರತೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬೇಜವಾಬ್ದಾರಿತನವೇ ಕಾರಣ: ಕಾಂಗ್ರೆಸ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಬೇಜವಾಬ್ದಾರಿ ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ಕತ್ತಲೆ ಆವರಿಸಿದೆ. ರಾಜ್ಯ ಬಿಜೆಪಿ ಸರ್ಕಾರದ ನಾಯಕರು ಹೇಳುವ ‘ಡಬಲ್ ಇಂಜಿನ್ ಗ್ರೋಥ್’ ಎಂಬ ಮಾತುಗಳ ಡೋಂಗಿತನಕ್ಕೆ ಮತ್ತೊಂದು ಉದಾಹರಣೆ ಇದು ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.

ಈ ಬಗ್ಗೆ #ಕತ್ತಲಲ್ಲಿಕರ್ನಾಟಕ ಎನ್ನುವ ಹ್ಯಾಶ್ ಟ್ಯಾಗ್ ಮೂಲಕ ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರು ರಾಜ್ಯದವರೇ ಆಗಿದ್ದರೂ ರಾಜ್ಯಕ್ಕೆ ಕಲ್ಲಿದ್ದಲು ಕೊರತೆ ಉಂಟಾಗಿದ್ದ ವಿಪರ್ಯಾಸ. ಇಂಧನ ತೈಲಗಳ ಬೆಲೆ ಏರಿಕೆಗೆ ಎಲೆಕ್ಟ್ರಿಕ್ ವಾಹನ ಬಳಸಿ ಎಂದು ಬಿಟ್ಟಿ ಸಲಹೆ ನೀಡುತ್ತಿದ್ದರು ರಾಜ್ಯ ಬಿಜೆಪಿ ನಾಯಕರು. ಆದರೆ ರಾಜ್ಯ ಬಿಜೆಪಿ ನಾಯಕರಿಗೆ ವಿದ್ಯುತ್ ಪುಕ್ಕಟೆಯಾಗಿ ದೊರಕುತ್ತದೆ ಎಂಬ ಕಲ್ಪನೆ ಇರಬಹುದೇನೋ! ಎಂದು ಪ್ರಶ್ನಿಸಿದೆ.

ಇಂದು ಅದೇ ಮೂರ್ಖ ಸಲಹೆಗಾರರು ರಾಜ್ಯವನ್ನು ಕತ್ತಲೆಯಲ್ಲಿ ಮುಳುಗಿಸಿದ್ದಾರೆ. ರಾಜ್ಯದಲ್ಲಿ ಸೃಷ್ಟಿಯಾದ ಕಲ್ಲಿದ್ದಲು ಹಾಗೂ ವಿದ್ಯುತ್ ಬಿಕ್ಕಟ್ಟಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಬೇಜವಾಬ್ದಾರಿತನವೇ ಕಾರಣ. ಕಲ್ಲಿದ್ದಲು ಕೊರತೆ ತೀವ್ರಗೊಳ್ಳುವವರೆಗೂ ಕಣ್ಮುಚ್ಚಿ ಕುಳಿತಿದ್ದೇಕೆ? ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹೊಂದಾಣಿಕೆ ಇಲ್ಲವೇ? ಬಿಕ್ಕಟ್ಟು ಎದುರಿಸಲು ಸರ್ಕಾರದ ಕಾರ್ಯಸೂಚಿ ಏನು? ವಾಸ್ತವವನ್ನು ಮರೆಮಾಚಿ ದೇಶಕ್ಕೆ ಸುಳ್ಳು ಹೇಳುವುದು ಬಿಜೆಪಿಗೆ ಅಭ್ಯಾಸವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಹಿಂದೆ ಆಕ್ಸಿಜನ್ ಕೊರತೆ ಇದ್ದಾಗಲೂ “ಆಕ್ಸಿಜನ್ ಕೊರತೆಯೇ ಇಲ್ಲ” ಎಂದು ಸುಳ್ಳುಗಳ ಮೂಲಕ ದುರಂತಗಳಿಗೆ ಕಾರಣರಾದರು. ಈಗ “ಕಲ್ಲಿದ್ದಲು ಕೊರತೆಯೇ ಇಲ್ಲ” ಎಂದು ಸುಳ್ಳು ಹೇಳುತ್ತಲೇ ಬಿಜೆಪಿ ರಾಜ್ಯ ಸರ್ಕಾರ ರಾಜ್ಯವನ್ನ ಕತ್ತಲೆಗೆ ತಳ್ಳುತ್ತಿದೆ.

ಲಾಕ್‌ಡೌನ್ ನಂತರ ದೇಶದ ಆರ್ಥಿಕ ಪುನಶ್ಚೇತನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ, ಯಾವ ಯೋಜನೆಯನ್ನೂ ರೂಪಿಸಲಿಲ್ಲ. ಇಂಧನ ತೈಲಗಳ ಬೆಲೆ ಏರಿಕೆ, ಕಲ್ಲಿದ್ದಲು ಕೊರತೆಯಿಂದ ರಾಜ್ಯದ ಆರ್ಥಿಕತೆಯ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ. ರಾಜ್ಯ ಬಿಜೆಪಿ ಸರ್ಕಾರ ಅಸಾಮರ್ಥ್ಯಕ್ಕೆ ಜನತೆ ಬೆಲೆ ತೆರಬೇಕಾಗಿರುವುದು ದುರಂತ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ರಾಜ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು