ಚೆನ್ನೈ (02-12-2020): ಜಸ್ಟಿಸ್ ಸಿ ಎಸ್ ಕರ್ಣನ್ ಅವರನ್ನು ಸೈಬರ್ ಕ್ರೈಮ್ ಪೊಲೀಸರು ಚೆನ್ನೈನ ಉಪನಗರ ಆವಡಿಯಲ್ಲಿ ಬಂಧಿಸಿದ್ದಾರೆ.
ಮದ್ರಾಸ್ ಹೈಕೋರ್ಟ್ ಮತ್ತು ಕಲ್ಕತ್ತಾ ಹೈಕೋರ್ಟ್ ನ ಮಾಜಿ ನ್ಯಾಯಮೂರ್ತಿಗಳಾಗಿ ಜಸ್ಟಿಸ್ ಸಿ ಎಸ್ ಕರ್ಣನ್ ಅತ್ಯುತ್ತಮ ಹುದ್ದೆಯನ್ನು ಅಲಂಕರಿಸಿದ್ದರು. ನಿವೃತ್ತಿ ನಂತರ ನ್ಯಾಯಾಧೀಶರು ಮತ್ತು ನ್ಯಾಯಾಲಯದ ಅಧಿಕಾರಿಗಳನ್ನು ನಿಂದಿಸುವ ವೀಡಿಯೊ ಬಿಡುಗಡೆ ಮಾಡಿದ್ದರು ಎಂಬ ಆರೋಪ ಇವರ ಮೇಲಿದೆ.
ನ್ಯಾಯಮೂರ್ತಿಗಳಾದ ಎಂ.ಸತ್ಯನಾರಾಯಣನ್ ಮತ್ತು ಆರ್.ಹೇಮಲತಾ ಅವರನ್ನೊಳಗೊಂಡ ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠವು ತಮಿಳುನಾಡು ಮತ್ತು ಪುದುಚೇರಿಯ ಬಾರ್ ಕೌನ್ಸಿಲ್ ಸಲ್ಲಿಸಿದ ಪ್ರಕರಣದ ಕುರಿತು ಕರ್ಣನ್ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬವಾದ ಕಾರಣ ಪೊಲೀಸರನ್ನು ಪ್ರಶ್ನಿಸಿದ್ದರಿಂದ ಅವರ ಬಂಧನ ನಡೆದಿದೆ ಎನ್ನಲಾಗಿದೆ.
ಅಕ್ಟೋಬರ್ 27 ರಂದು ಮದ್ರಾಸ್ ಹೈಕೋರ್ಟ್ನ ವಕೀಲರ ದೂರಿನ ಹಿನ್ನೆಲೆಯಲ್ಲಿ ಚೆನ್ನೈ ಪೊಲೀಸ್ ಸೈಬರ್ ಸೆಲ್ ಕರ್ಣನ್ ವಿರುದ್ಧ ಪ್ರಕರಣ ದಾಖಲಿಸಿತ್ತು.
ಈ ಮೊದಲು ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಸ್ಟಿಸ್ ಕರ್ಣನ್ ಅವರನ್ನು ಬಂಧಿಸಲಾಗಿತ್ತು. ಪ್ರಕರಣ ಇಡೀ ದೇಶದಲ್ಲೇ ಚರ್ಚೆಗೆ ಗ್ರಾಸವಾಗಿತ್ತು. ದಲಿತ ಜಸ್ಟಿಸ್ ಮೇಲಿನ ಕ್ರಮ ಆಘಾತಕಾರಿಯಾಗಿ ಎನ್ನಲಾಗುತ್ತು. ಕರ್ಣನ್ ಅವರು ನಾನು ದಲಿತನಾದ ಕಾರಣ ನನಗೆ ಕಿರುಕುಳ ನೀಡಲಾಗುತ್ತದೆ ಎಂದು ಸಾರ್ವಜನಿಕವಾಗಿ ಹೇಳಿದ್ದರು.