ಲಕ್ನೋ(22-10-2020): ರಾಮ್ ಮಂದಿರ ವಿಚಾರದಲ್ಲಿ ಆಕ್ಷೇಪಾರ್ಹ ಸಾಮಾಜಿಕ ಮಾಧ್ಯಮ ಪೋಸ್ಟ್ ಹಂಚಿಕೊಂಡಿದ್ದಾರೆ ಎಂಬ ಆರೋಪದ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ನ ಲಕ್ನೋ ನ್ಯಾಯಪೀಠ ಬುಧವಾರ ಬಂಧಿತ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರಿಗೆ ಜಾಮೀನು ನೀಡಿದೆ.
ನ್ಯಾಯಮೂರ್ತಿ ಎ ಆರ್ ಮಸೂಡಿ ಅವರ ನ್ಯಾಯಪೀಠವು ಕನೋಜಿಯಾ ಅವರ ಜಾಮೀನು ಅರ್ಜಿಯ ಆದೇಶವನ್ನು ಹೊರಡಿಸಿದೆ. ಅರ್ಜಿದಾರರು ತಾನು ನಿರಪರಾಧಿ ಎಂದು ಮನವಿ ಮಾಡಿಕೊಂಡಿದ್ದರು.
ಕನೋಜಿಯಾ ಅವರನ್ನು ಉತ್ತರ ಪ್ರದೇಶ ಪೊಲೀಸರು ಆಗಸ್ಟ್ 18 ರಂದು ದೆಹಲಿಯಿಂದ ಬಂಧಿಸಿದ್ದರು. ಆಗಸ್ಟ್ 17 ರಂದು ಹಜರತ್ಗಂಜ್ ಪೊಲೀಸ್ ಠಾಣೆಯಲ್ಲಿ ಅವರ ಟ್ವಿಟರ್ ಹ್ಯಾಂಡಲ್ನಲ್ಲಿ “ಅಸಭ್ಯ” ಪೋಸ್ಟ್ ಹಂಚಿಕೊಂಡಿದ್ದಾರೆ ಮತ್ತು ಪೋಸ್ಟನ್ನು ಹಿಂದೂ ಸೇನಾ ಮುಖ್ಯಸ್ಥ ಸುಶೀಲ್ ತಿವಾರಿ ಅವರ ನಿರ್ದೇಶನದ ಮೇರೆಗೆ ಮಾಡಿದ್ದಾನೆಂದು ಆರೋಪಿಸಲಾಗಿತ್ತು. ಆದರೆ ಸುಶೀಲ್ ತಿವಾರಿ ಈ ಆರೋಪವನ್ನು ನಿರಾಕರಿಸಿದ್ದಾನೆ.
ಕಳೆದ ವರ್ಷ ಜೂನ್ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಕನೋಜಿಯಾ ಅವರನ್ನು ಬಂಧಿಸಲಾಗಿತ್ತು. ಸುಪ್ರೀಂ ಕೋರ್ಟ್ನ ಆದೇಶದ ಮೇರೆಗೆ ಅವರಿಗೆ ಜಾಮೀನು ನೀಡಲಾಗಿತ್ತು.