ನವದೆಹಲಿ(18-10-2020): ದಿವಾಳಿಯಾಗಿ ಹಾರಾಟ ನಿಲ್ಲಿಸಿದ್ದ ಜೆಟ್ ಏರ್ವೇಸ್ ಮತ್ತೆ ಆಕಾಶಕ್ಕೆ ನೆಗೆಯಲು ಸಿದ್ಧವಾಗುತ್ತಿದೆಯೆಂದು ವರದಿಯಾಗಿದೆ. ಕಾಲ್ರೋಕ್ ಕ್ಯಾಪಿಟಲ್ ಮತ್ತು ಮುರಾರಿ ಲಾಲ್ ಜಲನ್ ಸಂಯುಕ್ತವಾಗಿ ಜೆಟ್ ಏರ್ವೇಸನ್ನು ಖರೀದಿಸಲಿವೆ.
“ಸಾಲಗಾರರ ಮಂಡಳಿ”ಯ ಇ-ವೋಟಿಂಗ್ ನಲ್ಲಿ ಜೆಟ್ ಏರ್ವೇಸನ್ನು ಮೇಲೆ ತಿಳಿಸಿದ ಎರಡು ಕಂಪೆನಿಗಳಿಗೆ ವಹಿಸಿಕೊಡಲು ತೊಂಬತ್ತೇಳು ಶೇಕಡಾಕ್ಕಿಂತಲೂ ಹೆಚ್ಚಿನ ಬಹುಮತದಿಂದ ಅಂಗೀಕರಿಸಲಾಯಿತು. ಇನ್ನು ಇದಕ್ಕೆ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್(NCLT), ನಾಗರಿಕ ವಿಮಾನಯಾನ ಸಚಿವಾಲಯ, ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ ಇತ್ಯಾದಿಗಳ ಅನುಮತಿಯೂ ಅಗತ್ಯವಿದೆ.
ಈಗಾಗಲೇ STOT ಮತ್ತಿತರ ವಿಮಾನ ಸಂಚಾರಕ್ಕೆ ಸಂಬಂಧಿಸಿದ ಹಕ್ಕುಗಳನ್ನು ತಾತ್ಕಾಲಿಕವಾಗಿ ಇತರ ಕಂಪೆನಿಗಳಿಗೆ ನೀಡಲಾಗಿದೆ. ಅಲ್ಲದೇ ಪೈಲಟ್ ಮತ್ತು ಇಂಜಿನಿಯರರ ಪರವಾನಿಗೆಗಳನ್ನೂ, ವಿಮಾನದ ಆಪರೇಟಿಂಗ್ ಪರ್ಮಿಟುಗಳನ್ನೂ ನವೀಕರಿಸಬೇಕಾಗಿದೆ. ಎಲ್ಲವೂ ಸರಿಯಾಗಲು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು.
ಕೊರೋನಾ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಿದೆ. ಎಲ್ಲಾ ವಿಮಾನ ಕಂಪೆನಿಗಳು ಆರ್ಥಿಕ ಅಡಚಣೆ ಎದುರಿಸುತ್ತಿದೆ. ಈ ಸಮಯದಲ್ಲಿ ಹದಿನೆಂಟು ತಿಂಗಳ ಹಿಂದೆ ದಿವಾಳಿಯಾಗಿದ್ದ ಕಂಪೆನಿಯನ್ನು ಹೊಸ ಮಾಲೀಕರು ಹೇಗೆ ಕೊಂಡೊಯ್ಯುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.