ನವದೆಹಲಿ(22-12-2020): ಕೊರೋನಾ ಸಾಂಕ್ರಾಮಿಕ ರೋಗ, ಇತ್ಯಾದಿ ಕಾರಣಗಳಿಂದಾಗಿ ದೇಶಾದ್ಯಂತ ಎಲ್ಲಾ ಸಂಸ್ಥೆಗಳ ಕಛೇರಿ ಕೆಲಸಗಳಿಗೆ ತೊಡಕುಂಟಾಗಿತ್ತು. ಇದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮತ್ತು ಅದರ ಅಧೀನದಲ್ಲಿ ದೇಶಾದ್ಯಂತ ಕಾರ್ಯನಿರ್ವಹಿಸುವ ಕಛೇರಿಗಳಿಗೂ ತಟ್ಟಿತ್ತು.
ಹೀಗಾಗಿ ವಾಹನದ ದಾಖಲೆ, ಡ್ರೈವಿಂಗ್ ಲೈಸನ್ಸ್, ರಿಜಿಸ್ಟ್ರೇಷನ್, ಫಿಟ್ನೆಸ್ ಸರ್ಟಿಫಿಕೇಟ್ ಮುಂತಾದವುಗಳು ನವೀಕರಣ ಮಾಡದಿದ್ದರೂ ವಾಹನಗಳನ್ನು ರಸ್ತೆಗಿಳಿಸಲು ಅನುಮತಿಯಿತ್ತು. ಈ ಅನುಮತಿಯು ಕಳೆದ ಒಂಭತ್ತು ತಿಂಗಳಿನಿಂದಲೂ ಚಾಲ್ತಿಯಲ್ಲಿತ್ತು.
ಆದರೆ ಇದೀಗ ಲಾಕ್ಡೌನ್ ಸಡಿಲವಾಗಿ ಕಛೇರಿಗಳು ಕೆಲಸ ನಿರ್ವಹಿಸಲು ತೊಡಗಿದೆ. ಇನ್ನು ಮುಂದೆ ಕೇಂದ್ರ ಸರಕಾರವು ಇಂತಹಾ ರಿಯಾಯಿತಿ ನೀಡುವುದಿಲ್ಲವೆಂದು ವರದಿಯಾಗಿದೆ. ಈ ತಿಂಗಳು 31 ರಂದು ಈ ಎಲ್ಲಾ ರಿಯಾಯಿತಿಗಳು ಕೊನೆಗೊಳ್ಳುವುದು.
ಹಾಗಾಗಿ ಅವಧಿ ಮುಗಿದ ಡ್ರೈವಿಂಗ್ ಲೈಸನ್ಸ್, ವಾಹನದ ಆರ್ ಸಿ ಪುಸ್ತಕ, ಫಿಟ್ನೆಸ್ ಪ್ರಮಾಣ ಪತ್ರ ಇತ್ಯಾದಿಗಳು ಡಿಸೆಂಬರ್ ಮೂವತ್ತೊಂದರ ತನಕ ಮಾತ್ರವೇ ಉಪಯೋಗಿಸಲು ಸಾಧ್ಯ.
ರಿಯಾಯಿತಿಯ ಅವಧಿಯನ್ನು ವಿಸ್ತರಿಸಿ, ಕೇಂದ್ರ ಸರಕಾರವು ಹೊಸ ಆದೇಶ ನೀಡದೇ ಇದ್ದರೆ, ಜನವರಿ ಒಂದನೇಯ ತಾರೀಖಿನಿಂದ ಅವಧಿ ಮುಗಿದ ವಾಹನ ಸಂಬಂಧಿತ ದಾಖಲೆಗಳನ್ನಿಟ್ಟು ಚಾಲನೆ ಮಾಡಿದರೆ, ದೊಡ್ಡ ಮೊತ್ತದ ದಂಡ ಕಟ್ಟಬೇಕಾಗಿ ಬರಬಹುದು.