ಜನರ‌ ತೆರಿಗೆ ಹಣ ದುರ್ಬಳಕೆ‌ ಮಾಡಿ ಪತ್ರಿಕೆಗಳಲ್ಲಿ‌ ಸುಳ್ಳಿನ‌ ಕಂತೆಗಳ ಜಾಹೀರಾತು ನೀಡಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಬಿಜೆಪಿ ಸರ್ಕಾರದ ಸಾಧನೆ ಶೂನ್ಯವಾದರೂ ಪಕ್ಷದ ಶಾಸಕರು, ಸಂಸದರು, ಸಚಿವರು ಖಾಲಿ ಡಬ್ಬಿಯನ್ನೇ ತಲೆಮೇಲಿಟ್ಟುಕೊಂಡು ತಿರುಗುತ್ತಾ ತಾವೇನೋ ಸಾಧಿಸಿದ್ದೇವೆ ಎಂದು ಜನರಿಗೆ ಮೋಸ ಮಾಡಲು ಹೊರಟಿದ್ದಾರೆ. ತುಂಬಿದ ಕೊಡ ತುಳುಕುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನ ವಿರೋಧಿ ಆರ್ಥಿಕ ನೀತಿಗಳು, ದುರುದ್ದೇಶಿತ ಕಾನೂನುಗಳು ಹಾಗೂ ದುರಾಡಳಿತದಿಂದಾಗಿ ದೇಶದಲ್ಲಿ ಪ್ರಧಾನಿ ಮೋದಿ ವರ್ಚಸ್ಸು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಹತಾಶ ಪ್ರಧಾನಿಗಳು ಜನರ‌ ತೆರಿಗೆ ಹಣ ದುರ್ಬಳಕೆ‌ ಮಾಡಿ ಪತ್ರಿಕೆಗಳಲ್ಲಿ‌ ಸುಳ್ಳಿನ‌ ಕಂತೆಗಳ ಜಾಹೀರಾತು ನೀಡಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಏಳು ವರ್ಷಗಳ ಆಡಳಿತದಲ್ಲಿ ಹಲವು ಸರ್ಕಾರಿ ಕಾರ್ಖಾನೆಗಳು, ಸಂಸ್ಥೆಗಳು, ಸೇವಾ ವಲಯಗಳು ಖಾಸಗಿಯವರ ಪಾಲಾಗಿದೆ. ಅಭಿವೃದ್ಧಿಯ ಹಾದಿಯಲ್ಲಿ ಹಿಮ್ಮುಖವಾಗಿ ಸಾಗುತ್ತಿರುವುದರಿಂದ ಆರ್ಥಿಕವಾಗಿ, ಔದ್ಯೋಗಿಕವಾಗಿ, ಸಾಮಾಜಿಕವಾಗಿ ದೇಶ ಹಿಂದೆಂದಿಗಿಂತಲೂ ಕನಿಷ್ಠ ಮಟ್ಟ ತಲುಪಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೋಟು ರದ್ದತಿಯಿಂದ ಕಪ್ಪು ಹಣ ಹೊರಬಂದಿಲ್ಲ, ಭ್ರಷ್ಟಾಚಾರ ಕಡಿಮೆಯಾಗಿಲ್ಲ, ನಕಲಿ ನೋಟಿನ ಚಲಾವಣೆ ನಿಂತಿಲ್ಲ, ಬದಲಾಗಿ ಇದರಿಂದ ದೇಶ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವಂತಾಯಿತು, ಜನರ ಕೈ ಖಾಲಿಯಾಯಿತು.
ಯುಪಿಎ ಸರ್ಕಾರ ಇದ್ದಾಗ ಜಿ.ಎಸ್.ಟಿ ಜಾರಿಗೆ ವಿರೋಧ ಮಾಡಿದ್ದ ನರೇಂದ್ರ ಮೋದಿ ಅವರು, ತಾವು ಪ್ರಧಾನಿ ಆದ ಮೇಲೆ ಜಾರಿಗೆ ತಂದರು. ಅಸಮರ್ಪಕ ಜಿ.ಎಸ್.ಟಿ ಜಾರಿಯ ಫಲವಾಗಿ ಕೈಗಾರಿಕೆಗಳು, ಉದ್ದಿಮೆಗಳು ನಷ್ಟದ ಹಾದಿಯಲ್ಲಿ ಸಾಗಿದವು. ಇಂದಿಗೂ ಜಿ.ಎಸ್.ಟಿ ಇಂದಾದ ನಷ್ಟವನ್ನು ದೇಶದ ಜನ ಭರಿಸುತ್ತಿದ್ದಾರೆ ಎಂದಿದ್ದಾರೆ.

ನಾವು ಕೊರೊನಾ ವಿರುದ್ಧ ಗೆದ್ದಿದ್ದೇವೆ ಎಂಬ ನರೇಂದ್ರ ಮೋದಿ ಅವರ ಹೇಳಿಕೆ ದೇಶದ ಇಂದಿನ ದುಸ್ಥಿತಿಗೆ ಕಾರಣ. ಪ್ರಧಾನಿಯವರ ಮಾತಿನಿಂದ ಜನ ಕೊರೊನಾ ಕಥೆ ಮುಗಿಯಿತು ಎಂದು ಭಾವಿಸಿ ಮೈಮರೆತರು. ಮೋದಿ ಅವರು ಜವಾಬ್ದಾರಿಯುತ ಪ್ರಧಾನಿಯಾಗಿ ನಡೆದುಕೊಂಡು ಎರಡನೇ ಅಲೆಯ ಬಗ್ಗೆ ಎಚ್ಚರಿಕೆ ನೀಡಿದ್ದರೆ ಇಂದು ಲಕ್ಷಾಂತರ ಜನ ಸಾಯುತ್ತಿರಲಿಲ್ಲ.

ರೈತ ವಿರೋಧಿ, ಜನ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿ, ರೈತರ ಬದುಕು ಕಸಿದುಕೊಂಡಿದ್ದು ಕೂಡ ಪ್ರಧಾನಿ ಮೋದಿಯವರ ಸಾಧನೆ. ಕಳೆದ ಆರು ತಿಂಗಳಿಂದ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ, ಪ್ರಧಾನಿ ಅವರು ಒಮ್ಮೆಯಾದರೂ ಪ್ರತಿಭಟನಾ ಸ್ಥಳಕ್ಕೆ ಭೇಟಿನೀಡಿ ರೈತರ ಬೇಡಿಕೆಗಳನ್ನು ಆಲಿಸಿದ್ದಾರೆಯೇ? ಕೊರೊನಾ ಎರಡನೇ ಅಲೆಯಿಂದ ಜನ ಸಾಯಲು ಅಗತ್ಯ ಪ್ರಮಾಣದ ಆಕ್ಸಿಜನ್, ವೆಂಟಿಲೇಟರ್, ಆಂಬುಲೆನ್ಸ್, ಆಸ್ಪತ್ರೆ, ಔಷಧಗಳನ್ನು ಪೂರೈಸಲು‌ ಕೇಂದ್ರದ ಬಿಜೆಪಿ‌ಸರ್ಕಾರ ವಿಫಲವಾಗಿದ್ದೇ ಕಾರಣ. ಪ್ರಧಾನಿ ನರೇಂದ್ರ ಮೋದಿ‌ಸ್ವಂತ‌‌ ಕ್ಷೇತ್ರದಲ್ಲಿಯೇ‌ ಗಂಗಾ ನದಿಯಲ್ಲಿ ರಾಶಿ ರಾಶಿ ಹೆಣಗಳು ತೇಲಿಬಂದವು. ಇದನ್ನು‌ ಕೊಲೆಗಡುಕ ಸರ್ಕಾರ ಎನ್ನದೆ ಬೇರೇನು ಹೇಳಲು‌ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

2014ರಲ್ಲಿ ದೇಶದ ನಿರುದ್ಯೋಗ ಪ್ರಮಾಣ 4.9 ಇತ್ತು, ಪ್ರಧಾನಿ ಮೋದಿಯವರ ಏಳು ವರ್ಷಗಳ ದುರಾಡಳಿತದ ಪರಿಣಾಮವಾಗಿ ದೇಶದ ನಿರುದ್ಯೋಗ ಪ್ರಮಾಣ ಇಂದು 11.8 ಕ್ಕೆ ತಲುಪಿದೆ.
ಬಿಜೆಪಿ ಸರ್ಕಾರ ಕಾರ್ಖಾನೆಗಳನ್ನು ತೆರೆದು ಜನರಿಗೆ ಉದ್ಯೋಗ ನೀಡುವ ಬದಲು ಸುಳ್ಳಿನ ಕಾರ್ಖಾನೆ ನಡೆಸುತ್ತಾ ಜನರನ್ನು ಮೂರ್ಖರನ್ನಾಗಿಸಲು ಹೊರಟಿದೆ. ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ, ಬುಲೆಟ್ ಟ್ರೈನ್ ಬಿಡುತ್ತೇವೆ, ಸ್ಮಾರ್ಟ್ ಸಿಟಿ ನಿರ್ಮಾಣ ಮಾಡುತ್ತೇವೆ ಎಂದು ಹೇಳಿ ಪ್ರಧಾನಿ ಮೋದಿ ಅವರು ಜನರ ಬಳಿ ಇದ್ದ ಉದ್ಯೋಗವನ್ನು ಕಸಿದುಕೊಂಡಿದ್ದಲ್ಲದೇ, ಸರ್ಕಾರಿ ಸಂಸ್ಥೆಗಳನ್ನು ತಮ್ಮ ಗೆಳೆಯರಿಗೆ ಮಾರಾಟ ಮಾಡಿ, ದೇಶವನ್ನು ವಿನಾಶದ ಅಂಚಿನಲ್ಲಿ ನಿಲ್ಲಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ನರೇಂದ್ರ ಮೋದಿ ಅವರು 2014 ರಲ್ಲಿ ಪ್ರಧಾನಿಯಾದ ವೇಳೆ ದೇಶದ 8 ರಾಜ್ಯಗಳು ಮಾತ್ರ ವಿತ್ತೀಯ ಕೊರತೆ ಎದುರಿಸುತ್ತಿದ್ದವು, ಇಂದು ದೇಶದ ಪ್ರತಿ ರಾಜ್ಯವು ಗಂಭೀರ ಸ್ವರೂಪದ ವಿತ್ತೀಯ ಕೊರತೆಗೆ ಒಳಗಾಗಿವೆ. ಬಿಜೆಪಿಯ ಡಬ್ಬಲ್ ಎಂಜಿನ್ ಸರ್ಕಾರದ ಸಾಧನೆಯೆಂದರೆ ಕರ್ನಾಟಕ ಮೊದಲ ಬಾರಿಗೆ ವಿತ್ತೀಯ ಕೊರತೆ ಎದುರಿಸುವಂತೆ ಮಾಡಿದ್ದು.
ನನ್ನ 5 ವರ್ಷಗಳ ಆಡಳಿತದಲ್ಲಿ ಮಾಡಿದ ಒಟ್ಟು ಸಾಲ ರೂ.1.25 ಲಕ್ಷ ಕೋಟಿ. ಬಿ.ಎಸ್.ವೈ ಅವರು ಮುಖ್ಯಮಂತ್ರಿಯಾಗಿ ಕೇವಲ ಎರಡೇ ವರ್ಷದಲ್ಲಿ ರೂ.1.41 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ನಮ್ಮ ಸರ್ಕಾರ ಸಾಲ ಮಾಡಿ ಅಭಿವೃದ್ಧಿ ಕಾರ್ಯ ಮಾಡಿದ್ದರೆ, ಬಿಜೆಪಿ ಸರ್ಕಾರ ಸಾಲ ಮಾಡಿ ನೌಕರರ ಸಂಬಳ ಕೊಡುವ ದುಸ್ಥಿತಿಗೆ ತಲುಪಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಲೆಯೇರಿಕೆ ದೇಶದ ಗಂಭೀರ ಸಮಸ್ಯೆಗಳಲ್ಲಿ ಒಂದು. 2014 ರಲ್ಲಿ ಸಾಮಾನ್ಯವಾಗಿ 4 ಜನರ ಕುಟುಂಬವೊಂದು ಜೀವನ ನಿರ್ವಹಣೆಗೆ ತಿಂಗಳಿಗೆ ರೂ.5,000 ಖರ್ಚು ಮಾಡುತ್ತಿದ್ದರೆ, ಇಂದು ಅದೇ ಕುಟುಂಬದ ಜೀವನ ನಿರ್ವಹಣೆಗೆ ಕನಿಷ್ಟ ರೂ.11,000 ಬೇಕಿದೆ. ಅಗತ್ಯ ವಸ್ತುಗಳು, ಪೆಟ್ರೋಲ್, ಗ್ಯಾಸ್ ಬೆಲೆ ಗಗನಕ್ಕೇರಿರುವುದು ಇದಕ್ಕೆ ಕಾರಣ.
2014 ರಲ್ಲಿ ದೇಶದ ಒಟ್ಟು ಸಾಲ ರೂ.53.1 ಲಕ್ಷ ಕೋಟಿ, ಮೋದಿ ಅವರ ಏಳು ವರ್ಷಗಳ ದುರಾಡಳಿತದ ಫಲದಿಂದಾಗಿ ದೇಶದ ಇಂದಿನ ಸಾಲ ರೂ. 135.8 ಲಕ್ಷ ಕೋಟಿ ತಲುಪಿದೆ. ಒಂದೆಡೆ ದೇಶದ ಸಾಲ ಹೆಚ್ಚುತ್ತಿದೆ, ಇನ್ನೊಂದೆಡೆ ದೇಶ ಅಭಿವೃದ್ಧಿಯಲ್ಲಿ ಹಿಮ್ಮುಖವಾಗಿ ಸಾಗುತ್ತಿದೆ. ಹಾಗಾದರೆ ಈ ಸಾಲದ ಹಣ ಯಾರ ಪಾಲಾಗುತ್ತಿದೆ? ಎಂದಿದ್ದಾರೆ.

ಭಾರತೀಯರ ತಲಾ ಆದಾಯ ಬಾಂಗ್ಲಾದೇಶಕ್ಕಿಂತ ಕಡಿಮೆಯಾಗಿದೆ. ಆದರೆ ಅದಾನಿ ಆಸ್ತಿ 2014 ರಲ್ಲಿ 7.1 ಬಿಲಿಯನ್ ಡಾಲರ್ ಇದ್ದದ್ದು ಈಗ 67.6 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಇಡೀ ದೇಶದ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವಾಗ ಅದಾನಿ, ಅಂಬಾನಿಯಂತವರ ಆಸ್ತಿ ನೂರಾರು ಪಟ್ಟು ಹೆಚ್ಚಾಗಲು ಹೇಗೆ ಸಾಧ್ಯ? ತಜ್ಞರ ವರದಿ ಆಧರಿಸಿ ಲಾಕ್ ಡೌನ್ ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಒಂದು ವೇಳೆ ಲಾಕ್ ಡೌನ್ ವಿಸ್ತರಣೆ ಮಾಡುವ ಸನ್ನಿವೇಶ ಎದುರಾದರೆ ಅದಕ್ಕೂ ಮೊದಲು ರಾಜ್ಯದ ಎಲ್ಲಾ ಬಿ.ಪಿ.ಎಲ್ ಕುಟುಂಬಗಳಿಗೂ ಕನಿಷ್ಠ ರೂ.10,000 ಪರಿಹಾರ ನೀಡಬೇಕು ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅವರಿಗೆ ಒತ್ತಾಯಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು