ಮಧ್ಯಪ್ರದೇಶ (12-10-2020):ಮಧ್ಯಪ್ರದೇಶದ ಜಬಲ್ಪುರದ ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಕಾಲೇಜಿನಲ್ಲಿ 28 ವರ್ಷದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಭಗವತ್ ದೇವಂಗನ್ ಹಾಸ್ಟೆಲ್ ಕೋಣೆಯ ಚಾವಣಿಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ಇಂದಿಗೆ 10 ದಿನಗಳು ಕಳೆದಿವೆ.
ಕೋಟಾ ವಿದ್ಯಾರ್ಥಿ ಎಂಬ ಕಾರಣಕ್ಕಾಗಿ ದೇವಂಗನ್ ಅವರನ್ನು ಅವರ ಸೀನಿಯರ್ ಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿದ್ದಾರೆ ಎಂದು ಆರೋಪಿಸಲಾಗಿದೆ, ಇದು ಮೀಸಲಾತಿ ನೀತಿಗಳನ್ನು ಪಡೆಯುವ ಹಿಂದುಳಿದ ವಿದ್ಯಾರ್ಥಿಗಳ ವಿರುದ್ಧ ಮೇಲ್ಜಾತಿಯವರು ಮಾಡುವ ದಬ್ಬಾಳಿಕೆಯಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಹಿಂದುಳಿದ ವರ್ಗಕ್ಕೆ ಸೇರಿದ ದೇವಂಗನ್, ಛತ್ತೀಸ್ಗಢದ ಜಂಜಗೀರ್-ಚಂಪಾ ಜಿಲ್ಲೆಯ ರಹೌದ್ ಗ್ರಾಮದವರಾಗಿದ್ದು, ಕೆಲವೇ ತಿಂಗಳ ಹಿಂದೆ ಮೊದಲ ವರ್ಷದ ಪಿಜಿ ಆರ್ಥೋಪೆಡಿಕ್ ಕೋರ್ಸ್ನಲ್ಲಿ ವೈದ್ಯಕೀಯ ಶಾಲೆಗೆ ಸೇರಿಕೊಂಡಿದ್ದರು.
ದೇವಂಗನ್ ತಮ್ಮ ಜೀವನವನ್ನು ಕೊನೆಗೊಳಿಸಿ 10 ದಿನಗಳು ಕಳೆದಿವೆ. ಆದಾಗ್ಯೂ, ಪೊಲೀಸರು ಈ ಪ್ರಕರಣದಲ್ಲಿ “ಪ್ರಾಥಮಿಕ ವಿಚಾರಣೆ” ಮಾತ್ರ ನಡೆಸಿದ್ದಾರೆ ಮತ್ತು ಇಲ್ಲಿಯವರೆಗೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ಪ್ರಾಥಮಿಕ ವಿಚಾರಣೆಯು ಜಾತಿ ತಾರತಮ್ಯದ ಸಾಧ್ಯತೆಗಳನ್ನು “ತಳ್ಳಿಹಾಕಿದೆ” ಎಂದು ಜಬಲ್ಪುರದ ಗರ್ಹಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಹೇಳಿದ್ದಾರೆ.
ನಾನು ಮಾತ್ರವಲ್ಲ, ಹಲವಾರು ಹಿರಿಯ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ನಾವು ಯಾವುದೇ ಜಾತಿ ಕೋನವನ್ನು ತನಿಖೆ ವೇಳೆ ಕಂಡುಕೊಂಡಿಲ್ಲ. ಆದರೆ ನಾವು ರ್ಯಾಗಿಂಗ್ ಆರೋಪವನ್ನು ಪರಿಶೀಲಿಸುತ್ತಿದ್ದೇವೆ. ಅಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ ಸೇರಿದಂತೆ ಹಲವಾರ ಹೇಳಿಕೆಗಳನ್ನು ದಾಖಲಿಸಿದ್ದೇವೆ. ನಾವು ಶೀಘ್ರದಲ್ಲೇ ಒಂದು ತೀರ್ಮಾನಕ್ಕೆ ಬರುತ್ತೇವೆ, ಎಂದು ತಿವಾರಿ ಹೇಳಿದರು. ದೇವಂಗನ್ ಯಾವುದೇ ಆತ್ಮಹತ್ಯೆ ಪತ್ರವನ್ನು ಬಿಟ್ಟು ಹೋಗಿಲ್ಲವಾದ್ದರಿಂದ, ಎಫ್ಐಆರ್ ದಾಖಲಿಸುವ ಮೊದಲು ಪೊಲೀಸರು ಆತನ ಸಾವಿಗೆ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ತಿವಾರಿ ಹೇಳಿದ್ದಾರೆ.