ಇಸ್ಲಾಮಿಕ್ ಸ್ಟೇಟ್ ಕುರಿತ ಅನ್ವೇಷಣಾ ವರದಿಯಲ್ಲಿ ಲೋಪ | ಪೀಬೋಡಿ ಅವಾರ್ಡನ್ನು ಹಿಂದಿರುಗಿಸಲಿರುವ ನ್ಯೂಯಾರ್ಕ್ ಟೈಮ್ಸ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ವಾಷಿಂಗ್ಟನ್, ಡಿ.ಸಿ(19-12-2020): ಇಸ್ಲಾಮಿಕ್ ಸ್ಟೇಟ್ ಕುರಿತ ಅನ್ವೇಷಣಾ ವರದಿಯಲ್ಲಿ ಲೋಪಗಳು ಕಂಡು ಬಂದ ಹಿನ್ನೆಲೆಯಲ್ಲಿ, ವರದಿಗಾಗಿ ತನಗೆ ಲಭಿಸಿದ ಪಿಬೋಡಿ ಅವಾರ್ಡನ್ನು ನ್ಯೂಯಾರ್ಕ್ ಟೈಮ್ಸ್ ಹಿಂದಿರುಗಿಸಲಿದೆ.

ಇಸ್ಲಾಮಿಕ್ ಸ್ಟೇಟ್ ಕುರಿತಾದ “ಕಾಲಿಫಾತ್” ಎಂಬ ಪೋಡ್ ಕ್ಯಾಸ್ಟನ್ನು ನ್ಯೂಯಾರ್ಕ್ ಟೈಮ್ಸ್ ವರದಿಗಾರ್ತಿ ರುಕ್ಮಿಣಿ ಕಲ್ಲಿಮಾಚಿ ಸಿದ್ಧಗೊಳಿಸಿದ್ದರು. 2018 ರಲ್ಲಿ ಬಿಡುಗಡೆಯಾದ ಈ ವರದಿಯು ಅತ್ಯಲ್ಪ ಸಮಯದಲ್ಲೇ ದೊಡ್ಡ ಮಟ್ಟದಲ್ಲಿ ಪ್ರಚಾರಗಳಿಸಿತ್ತು.

ರುಕ್ಮಿಣಿಯು ಸಂಘರ್ಷ ಪೀಡಿತ ಪ್ರದೇಶಗಳ ಬಗೆಗಿನ ವರದಿಗಳನ್ನು ಸಿದ್ಧಪಡಿಸುವ ವರದಿಗಾರ್ತಿಯಾಗಿದ್ದು, ಆಕೆ ಸಿದ್ಧಪಡಿಸಿದ “ಕಾಲಿಫಾತ್” ಹನ್ನೆರಡು ಭಾಗಗಳಿರುವ ಧ್ವನಿಸುರುಳಿ ಡಾಕ್ಯಮೆಂಟರಿಯಾಗಿದೆ. ಅದರಲ್ಲಿ ಐಎಸ್ ಮತ್ತು ಅದರ ಉಗ್ರವಾದಿ ಚಟುವಟಿಕೆಗಳ ಕುರಿತ ವಿವರಣೆಗಳಿವೆ.

ಈ ವರದಿಯಲ್ಲಿ ಬಹುಮುಖ್ಯವಾಗಿ ಕೆನಡ ಪ್ರಜೆ ಶೆಹ್ರಾಝ್ ಚೌಧರಿಯು ನೀಡುವ ಮಾಹಿತಿಯಿದ್ದು, ಆತ ಸಿರಿಯಾದ ಐಎಸ್ಸಿಗಾಗಿ ಕೆಲಸ ಮಾಡಿದ್ದಲ್ಲದೇ, ಹಲವು ಮಂದಿಯನ್ನು ಕೊಂದಿದ್ದಾನೆಂದು ಹೇಳಲಾಗಿದೆ. ಆದರೆ ನ್ಯೂಯಾರ್ಕ್ ಟೈಮ್ಸ್ ನಡೆಸಿದ ತನಿಖೆಯಲ್ಲಿ ಈ ಶೆಹ್ರಾಝ್ ಎಂಬ ವ್ಯಕ್ತಿಯು ಐಎಸ್ ಕಾರ್ಯಕರ್ತನಲ್ಲವೆಂದೂ, ಆತ ಸಿರಿಯಾಗೆ ಹೋಗಿಲ್ಲವೆಂದೂ, ಆತ ಹೇಳಿದ ವಿಚಾರಗಳು ಆಧಾರ ರಹಿತವಾಗಿದೆಯೆಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ಟೈಮ್ಸಿನ ಪ್ರಭಾವೀ ಪತ್ರಕರ್ತೆಯಾದ ರುಕ್ಮಿಣಿಯು, ಪತ್ರಿಕೆಯ ಇನ್ನೊಂದು ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ. ಆಕೆಯು ಕ್ಷಮೆಯನ್ನೂ ಕೋರಿದ್ದಾಳೆ. ಆಕೆಯು ಇನ್ನು ಮುಂದೆ ಉಗ್ರವಾದದ ವರದಿಗಳಿಗೆ ಸಂಬಂಧಿಸಿದವುಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲವೆಂದು ನ್ಯೂಯಾರ್ಕ್ ಟೈಮ್ಸ್ ತಿಳಿಸಿದೆ.

ಪತ್ರಿಕಾ ಧರ್ಮವನ್ನು ಕಾಪಾಡಿಕೊಳ್ಳುವುದಕ್ಕಾಗಿ, ನ್ಯೂಯಾರ್ಕ್ ಟೈಮ್ಸ್ ಹಿಂದಿರುಗಿಸುವ ಪ್ರಶಸ್ತಿಯನ್ನು ಸ್ವೀಕರಿಸಲು ಸಿದ್ಧವಾಗಿರುವುದಾಗಿ “ಪೀಬೋಡಿ” ಕಾರ್ಯನಿರ್ವಾಹಕ ನಿರ್ದೇಶಕರು ಹೇಳಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು