ನವದೆಹಲಿ(15-12-2020) ಎರಡು ದಶಕಗಳೊಳಗೆ ಭಾರತವು ಜಗತ್ತಿನ ಅತಿದೊಡ್ಡ ಮೂರು ಆರ್ಥಿಕ ಶಕ್ತಿಗಳಲ್ಲೊಂದಾಗಿ ರೂಪುಗೊಳ್ಳಲಿದೆ ಎಂದು ರಿಲಯನ್ಸಿನ ಮುಖೇಶ್ ಅಂಬಾನಿ ವಾದಿಸಿದ್ದಾರೆ. ತಲಾ ಆದಾಯವು ದುಪ್ಪಟ್ಟಿಗೂ ಅಧಿಕವಾಗಲಿದೆ ಎಂದೂ ಹೇಳಿದ್ದಾರೆ.
ದೇಶದಲ್ಲಿ ಐವತ್ತು ಶೇಕಡಾ ಮಧ್ಯಮವರ್ಗವಿದ್ದು, ಇದು ಪ್ರತಿವರ್ಷವೂ ಮೂರರಿಂದ ನಾಲ್ಕು ಶೇಕಡಾದಷ್ಟು ಏರಿಕೆಯಾಗುತ್ತಿದೆಯೆಂಬುದು ಅಂಬಾನಿಯ ಲೆಕ್ಕಾಚಾರ. ಮುಂದಿನ ಎರಡು ದಶಕಗಳೊಳಗೆ ಭಾರತವು ಜಗತ್ತಿನ ಮೂರು ಆರ್ಥಿಕ ಶಕ್ತಿಗಳಲ್ಲೊಂದಾಗಿ ರೂಪುಗೊಳ್ಳುವುದೆಂಬುದು ನನ್ನ ಧೃಢ ನಂಬಿಕೆಯಾಗಿದೆ ಎಂದೂ ಹೇಳಿದ್ದಾರೆ.
ಫೇಸ್ಬುಕ್ ಮಾಲಕ ಮಾರ್ಕ್ ಝಕರ್ಬರ್ಗ್ ಜೊತೆಗಿನ ಫೈರ್ ಸೈಡ್ ಸಂವಾದದಲ್ಲಿ ಮಾತನಾಡುತ್ತಿದ್ದ ಅಂಬಾನಿ, ಯುವಕರು ಮುಂದಾಳತ್ವ ವಹಿಸುವ ಪ್ರೀಮಿಯರ್ ಡಿಜಿಟಲ್ ಸಮಾಜವಾಗಿ ಭಾರತ ಬದಲಾಗಲಿದೆ. ಭಾರತೀಯರ ತಲಾ ಆದಾಯವು 5000 ಅಮೇರಿಕನ್ ಡಾಲರಿಗೆ ಏರಿಕೆಯಾಗಲಿದೆಯೆಂದು ಅಂಬಾನಿ ಭವಿಷ್ಯ ನುಡಿದರು.
ದೇಶಾದ್ಯಂತ ಕೃಷಿ ಮಸೂದೆಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ಜೊತೆಜೊತೆಗೆ, ಅಂಬಾನಿ ಸೇರಿ ಕಾರ್ಪರೇಟುಗಳ ವಿರುದ್ಧವೂ ಅಸಮಧಾನ ಹೊಗೆಯಾಡುತ್ತಿದೆ. ಅಂಬಾನಿಯ ರಿಲಯನ್ಸ್ ಮತ್ತು ಜಿಯೋ ಬಹಿಷ್ಕರಿಸುವ ಅಭಿಯಾನಗಳೂ ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ.