ಇಂತಹ ಕಠಿಣ ಪರಿಸ್ಥಿತಿಯಲ್ಲಿ ಪಕ್ಷಾತೀತವಾಗಿ ಸಹಕರಿಸಿ: ವಿಪಕ್ಷ ನಾಯಕರಿಗೆ ಡಾ.ಸುಧಾಕರ್ ಮನವಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಪಕ್ಷಾತೀತವಾಗಿ ಎಲ್ಲ ನಾಯಕರು, ಜನಪ್ರತಿನಿಧಿಗಳು ಒಗ್ಗಟ್ಟಾಗಿ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಲಸಿಕೆ ಅಭಿಯಾನಕ್ಕೆ ವೇಗ ನೀಡಲು ಪ್ರಯತ್ನಿಸಿದರೆ, ಜನರಲ್ಲಿ ಎರಡನೇ ಅಲೆ ಬಗ್ಗೆ ಜಾಗೃತಿ ಮೂಡಿಸಿದರೆ, ರಾಜ್ಯವನ್ನು ಆದಷ್ಟು ಬೇಗ ಕೊರೊನಾ ಮುಕ್ತವನ್ನಾಗಿ ಮಾಡಿ, ಜನರ ಜೀವ ಮತ್ತು ಜೀವನೋಪಾಯ ಎರಡನ್ನೂ ಉಳಿಸಬಹುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ವಿನಂತಿಸಿದ್ದಾರೆ.

ದೇಶದಲ್ಲಿ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಪರೀಕ್ಷೆ ಹೆಚ್ಚಳ, ಸಮರ್ಪಕ ಸಂಪರ್ಕ ಪತ್ತೆ, ಸೋಂಕಿತರ ಚಿಕಿತ್ಸೆಗೆ ಆಂಬ್ಯುಲೆನ್ಸ್, ಹಾಸಿಗೆಗಳ ವ್ಯವಸ್ಥೆ ಹೀಗೆ ಹಲವು ರೀತಿಯ ಸಿದ್ಧತೆಗಳಲ್ಲಿ ಅಧಿಕಾರಿಗಳು, ಕೊರೊನಾ ಯೋಧರು ನಿರಂತರ ಶ್ರಮಿಸುತ್ತಿದ್ದಾರೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಪಕ್ಷಾತೀತವಾಗಿ ಸಹಕರಿಸಿದರೆ ಬೇಗನೆ ಕೊರೊನಾದಿಂದ ಮುಕ್ತಿ ಹೊಂದಬಹುದು ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸೋಂಕು ಹರಡುವಿಕೆಯನ್ನು ತಡೆಯಲು ಕೊರೊನಾ ಕರ್ಫ್ಯು ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಜಾರಿ ಮಾಡಲಾಗಿದೆ. ಈ ಕುರಿತು ಕೆಲವರು ಅಪಹಾಸ್ಯ, ಟೀಕೆ-ಟಿಪ್ಪಣಿಗಳು ಮಾಡುತ್ತಿರುವುದನ್ನು ಗಮನಿಸಿದ್ದೇನೆ. ಮೊದಲನೇ ಅಲೆ ಕಡಿಮೆಯಾದ ನಂತರ ಕೊಂಚ ನಿರ್ಲಕ್ಷ್ಯ ತೋರುತ್ತಿರುವ ಜನರಲ್ಲಿ ಮತ್ತೊಮ್ಮೆ ಜಾಗೃತಿ ಮೂಡಿಸಬೇಕಿದೆ.

ಈ ಬಾರಿ ಲಸಿಕೆ ಕೂಡ ಲಭ್ಯವಿರುವುದರಿಂದ ಹೆಚ್ಚು ಹೆಚ್ಚು ಜನರಿಗೆ ಲಸಿಕೆ ವಿತರಿಸುವುದು, ಲಸಿಕೆ ಬಗ್ಗೆ ಇರುವ ಅಂಜಿಕೆ, ತಪ್ಪು ತಿಳುವಳಿಕೆಗಳ ನಿವಾರಣೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ವಿಪಕ್ಷಗಳಿಗೆ ಮೊಸರಿನಲ್ಲಿ ಕಲ್ಲು ಹುಡುಕುವುದು, ಕಂಡೋರ ಮಕ್ಕಳನ್ನ ಬಾವಿಗೆ ತಳ್ಳಿ ಆಳ ನೋಡುವುದೇ ಕೆಲಸವಾಗಿದೆ ಎಂದು ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದ್ದಾರೆ.

‘ಅನ್ಯ ಪಕ್ಷಗಳ ನಾಯಕರೂ ಜನರಿಂದ ಆರಿಸಿ ಬಂದಂತಹ ಜನಪ್ರತಿನಿಧಿಗಳೇ. ಸರ್ಕಾರಕ್ಕೆ ರಚನಾತ್ಮಕ ಸಲಹೆ ಸೂಚನೆ ನೀಡುವುದಕ್ಕೆ ಅವರಿಗೆ ಅವಕಾಶವೂ ಇದೆ, ಅದು ಅವರ ಕರ್ತವ್ಯವೂ ಹೌದು. ಅದು ಬಿಟ್ಟು ‘ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ’ ಎಂಬಂತೆ ಕೇವಲ ಅನಗತ್ಯ ಟೀಕೆ ಮಾಡುವುದು ಸರಿಯಲ್ಲ, ಅದು ಅವರಿಗೆ ಶೋಭೆ ತರುವುದೂ ಇಲ್ಲ’ ಎಂದು ಡಾ.ಸುಧಾಕರ್ ವಿಪಕ್ಷ ನಾಯಕರ ವಿರುದ್ಧ ಆರೋಪಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು