ನವದೆಹಲಿ: ಈಗಾಗಲೇ ಹಲವು ಕಾರ್ಡುಗಳನ್ನು ಹೊಂದಿರುವ ಜನರು ಈಗ ಮತ್ತೊಂದು ಕಾರ್ಡನ್ನೂ ತಮ್ಮ ಬಳಿ ಇರಿಸಿಕೊಳ್ಳಬೇಕಾಗಬಹುದು.
ಜಮೀನು, ಫ್ಲಾಟ್, ಇತ್ಯಾದಿಗಳಿಗೂ ಆಧಾರ್ ಕಾರ್ಡ್ ಮಾದರಿಯ ಐಡಿ ಕಾರ್ಡ್ ಇರಲಿದೆ. ಈ ಕಾರ್ಡುಗಳಿಗೆ ಹದಿನಾಲ್ಕು ಡಿಜಿಟುಗಳನ್ನು ಹೊಂದಿರುವ ಸಂಖ್ಯೆ ಇರುವುದು.
ಯೂನಿಕ್ ಲ್ಯಾಂಡ್ ಪಾರ್ಸಲ್ ಐಡೆಂಟಿಫಿಕೇಶನ್ ನಂಬರ್ (ULPIN) ಎಂದು ಕರೆಯಲಾಗುವ ಇದು 2021-22 ಹಣಕಾಸು ವರ್ಷದಲ್ಲಿ ದೇಶಾದ್ಯಂತ ಜಾರಿಗೆ ಬರಲಿದೆ. ಬ್ಯಾಂಕ್ ದಾಖಲೆಗಳು, ಕಂದಾಯ ಕೋರ್ಟ್ ದಾಖಲೆಗಳು ಮತ್ತು ಆಧಾರ್ಕಾರ್ಡುಗಳ ಜೊತೆಗೆ ಸಂಯೋಜಿನೆಗೊಳ್ಳುವುದು.
ಸಾಮಾನ್ಯವಾಗಿ ಭೂ ದಾಖಲೆಗಳು ವಿವಾದಾಸ್ಪದವಾಗಿದ್ದು, ವಂಚನೆಗಳು ಸರ್ವೇಸಾಮಾನ್ಯವಾಗಿದೆ. ಇದನ್ನು ತಡೆಯಲು ಸರ್ವೇ ಮಾಡಲಾದ ಪ್ರತಿಯೊಂದು ಭೂಮಿಯನ್ನು ಸುಲಭವಾಗಿ ಗುರುತಿಸುವಂತೆ ಮಾಡಲು ಈ ವಿಶಿಷ್ಟ ‘ಯೂನಿಕ್ ಲ್ಯಾಂಡ್ ಪಾರ್ಸಲ್ ಐಡೆಂಟಿಫಿಕೇಶನ್ ನಂಬರ್‘ (ULPIN) ಜಾರಿಗೆ ಬರುವುದು ಎಂದು ಭೂ ಸಂಪನ್ಮೂಲ ಇಲಾಖೆ ತಿಳಿಸಿದೆ.
ಸಂಸದೀಯ ಸ್ಥಾಯೀ ಸಮಿತಿಯು ಕಳೆದ ವಾರವಷ್ಟೇ ಲೋಕ ಸಭೆಗೆ ಭೂ ಗುರುತಿನ ಕಾರ್ಡ್ ಬಗೆಗೆ ವಿಸ್ತೃತ ವರದಿ ನೀಡಿದೆ. ಇದು 2008 ರಲ್ಲಿ ಆರಂಭವಾದ ಡಿಜಿಟಲ್ ಇಂಡಿಯಾ ಭೂ ದಾಖಲೆಗಳ ಆಧುನೀಕರಣ ಕಾರ್ಯಕ್ರಮ (DILRMP) ದ ಮುಂದುವರಿದ ಭಾಗವಾಗಿದೆ.