ಇಂದು ವಿಶ್ವ ಸೈಕಲ್ ದಿನ | ಸೈಕಲ್ ಸವಾರಿಯ ಪ್ರಯೋಜನಗಳೇನು?

Share on facebook
Share on twitter
Share on linkedin
Share on whatsapp
Share on telegram
Share on email
Share on print

ಹಲವು ವಿಶೇಷ ದಿನಗಳಿರುವಂತೆ ಸೈಕಲ್ ಸವಾರಿಗೂ ಒಂದು ದಿನವಿದೆ. ಸೈಕಲ್ ಬಳಸುವುದನ್ನು ಪ್ರೋತ್ಸಾಹಿಸುವ ಸಲುವಾಗಿ ವಿಶ್ವ ಸಂಸ್ಥೆಯು 2018 ಎಪ್ರಿಲ್ ತಿಂಗಳಿನಂದುಜೂನ್ ಮೂರುಅನ್ನು ವಿಶ್ವ ಸೈಕಲ್ ದಿನವನ್ನಾಗಿ ಘೋಷಿಸಿಕೊಂಡಿತು.

ಮೊದಲೆಲ್ಲಾ ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲು ದೂರದ ಊರುಗಳಿಗೆ ಸೈಕಲ್ ಬಳಸಿಯೇ ಹೋಗುತ್ತಿದ್ದರು. ವಾಹನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾದ ನಂತರ ಸೈಕಲ್ ಮೇಲಿನ ಅವಲಂಬನೆಯು ಕುಂಠಿತವಾಗುತ್ತಾ ಬಂತು. ಅದೇ ವೇಳೆ ವಿನೋದ ಸಂಚಾರಿಗಳು ಸೈಕಲ್ ಸವಾರಿಯನ್ನು ಸವಾಲಾಗಿ ತೆಗೆದು ದೂರದ ಊರುಗಳಿಗೆ ಪ್ರಯಾಣ ಬೆಳೆಸಿ, ವಿಶಿಷ್ಠ ಅನುಭವ ಪಡೆಯುತ್ತಾರೆ. ಕೆಲವು ಕಂಪೆನಿಗಳು ಹಾಗೆಯೇ ಸಂಘ ಸಂಸ್ಥೆಗಳೂ ತಮ್ಮ ಕಾರ್ಯಯೋಜನೆಗಳ ಪ್ರಚಾರಕ್ಕೂ ‘ಸೈಕಲ್ ಜಾಥಾ’ಗಳನ್ನು ಆಯೋಜಿಸುವುದುಂಟು. ಸೈಕ್ಲಿಂಗ್ ಒಂದು ಕ್ರೀಡೆಯೂ ಹೌದು.

ದಶಕಗಳ ಹಿಂದೆ ಅನುಕೂಲಸ್ಥ ಕುಟುಂಬದಿಂದ ಬಂದ ವಿದ್ಯಾರ್ಥಿಗಳು,ಅಧ್ಯಾಪಕರು, ಅದೇ ರೀತಿ ಉದ್ಯೋಗಿಗಳು ಸೈಕಲ್ ಬಳಸುತ್ತಿದ್ದರು. ಬಡ ಕಾರ್ಮಿಕರಿಗೂ ಸೈಕಲ್ ಉತ್ತಮ ಗೆಳೆಯನಾಗಿ ಬಿಟ್ಟಿತ್ತು. ಕೆಲವು ಹೆತ್ತವರಂತೂ ತಮ್ಮ ಮಕ್ಕಳು ಚೆನ್ನಾಗಿ ಕಲಿತು ಪಾಸಾದರೆ, ಸೈಕಲ್ ತೆಗೆದು ಕೊಡುತ್ತೇನೆ ಎನ್ನುವ ಮೂಲಕ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದರು. ಮಕ್ಕಳು ಸೈಕಲನ್ನು ಬಳಸುವುದು ಸರ್ವ ವ್ಯಾಪಕವಾಗಿ ಕಂಡು ಬರುತ್ತಿದ್ದರೂ, ಹಲವು ದೇಶಗಳಲ್ಲಿ ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ದೊಡ್ಡವರೂ ಬಳಸುವುದು ಸಾಮಾನ್ಯ ವಿಚಾರವಾಗಿದೆ. ಸೈಕಲ್ ಸವಾರಿಯ ಕೆಲವು ಲಾಭಗಳು ಇಲ್ಲಿವೆ

ಸೈಕಲ್ ಸವಾರಿಯನ್ನು ನಿಯಮಿತವಾಗಿ ಮಾಡುವವರಲ್ಲಿ ಹೃದಯ ರೋಗಗಳು ಕಂಡು ಬರುವ ಸಾಧ್ಯತೆ ಕಡಿಮೆಯಿರುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಹೃದಯಾಘಾತವು ಆಧುನಿಕ ಕಾಲದ ಅತಿದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಇಂತಹ ರೋಗಗಳಿಂದ ರಕ್ಷಣೆ ಪಡೆಯಲು ಸೈಕಲನ್ನು ಬಳಸುವುದು ಉತ್ತಮ ಎಂದು ಮೆಡಿಕಲ್ ನ್ಯೂಸ್ ಟುಡೆ ಹೇಳುತ್ತದೆ.

ಪ್ರತಿದಿನವೂ ಸೈಕಲ್ ತುಳಿಯುವವರಿಗೆ ಸಿಗುವ ಅತಿದೊಡ್ಡ ಲಾಭವೆಂದರೆ ಇದೊಂದು ಸಂಪೂರ್ಣ ವ್ಯಾಯಾಮವಾಗಿದ್ದು, ಕೈ, ಕಾಲು, ಬೆನ್ನು, ಹೊಟ್ಟೆ ಸೇರಿದಂತೆ ದೇಹದ ಪ್ರಮುಖ ಅಂಗಗಳಿಗೆ ಏಕಕಾಲದಲ್ಲಿ ವ್ಯಾಯಾಮ ದೊರಕುವುದು. ದಿನವೂ ಇಪ್ಪತ್ತು ನಿಮಿಷಗಳ ಕಾಲ ಸೈಕ್ಲಿಂಗ್ ಮಾಡಿದರೆ, ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಆರೋಗ್ಯಕರ ರೂಪದಲ್ಲಿ ಕರಗಿಸಲು ಸಹಕಾರಿಯಾಗುವುದು.

ಪ್ರತಿದಿನ ಒಂದು ಗಂಟೆ ಸೈಕಲ್ ತುಳಿಯುವವರ ಶರೀರದಿಂದ ಕ್ಯಾಲೋರಿಗಟ್ಟಲೆ ಶಕ್ತಿಯನ್ನು ದಹಿಸಲು ಸಾಧ್ಯವಾಗುವುದು. ಜೊತೆಗೆ ಹೃದಯ, ಶ್ವಾಸಕೋಶಗಳಿಗೆ ಚೆನ್ನಾಗಿ ರಕ್ತ ಸಂಚಾರವಾಗಲು ಕಾರಣವಾಗುವುದು. ಹೃದಯದ ಜೊತೆಗೆ ಶ್ವಾಸಕೋಶದ ಆರೋಗ್ಯಕ್ಕೂ ಇದು ಉತ್ತಮ.

ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವವರು ಮತ್ತು ಅದು ಬರದಂತೆ ಮುಂಜಾಗರೂಕತೆ ವಹಿಸಲು ಇಚ್ಛಿಸುವವರು ಸೈಕಲ್ ಬಳಕೆಗೆ ಆದ್ಯತೆ ನೀಡಬೇಕಿದೆ. ಅಲ್ಲದೇ ಸಕ್ಕರೆ ಖಾಯಿಲೆ, ಖಿನ್ನತೆ, ಬೊಜ್ಜು, ಜೀರ್ಣಕ್ರಿಯೆಯಲ್ಲಿನ ಸಮಸ್ಯೆ ಇತ್ಯಾದಿ ಎಲ್ಲಾ ಸಮಸ್ಯೆಗಳಿಗೂ ಸೈಕಲ್ ಸವಾರಿಯು ಪರಿಹಾರವಾಗಬಲ್ಲದು. ಬೆಳಗಿನ ಸೈಕ್ಲಿಂಗ್ ದಿನಪೂರ್ತಿ ಉಲ್ಲಾಸದಿಂದಿರಲು ಸಹಾಯಕ.

ಸೈಕಲ್ ಬಳಕೆಯ ಪ್ರಯೋಜನಗಳ ಬಗೆಗೆ ಹೇಳುವಾಗ, ಸೈಕಲ್ ಬಳಕೆಯಿಂದಾಗಿ ಇಂಧನ ಉಳಿತಾಯವಾಗುವ ಬಗೆಗೂ ಹೇಳಬೇಕಾಗುತ್ತದೆ.  ಹಣದ ಉಳಿತಾಯವೂ ಇದರ ಜೊತೆಗೇ ಹೇಳಬೇಕಾದ ಧನಾತ್ಮಕ ಅಂಶ. ಅಲ್ಲದೇ ಸೈಕಲ್ ಪರಿಸರ ಸ್ನೇಹಿಯಾಗಿದ್ದು, ವಾಯು ಮಾಲಿನ್ಯವನ್ನು ತಡೆಗಟ್ಟುವುದಕ್ಕಾಗಿ ಸೈಕಲ್ ಬಳಸುವುದನ್ನು ಪ್ರೋತ್ಸಾಹಿಸಬೇಕಿದೆ.

ಸೈಕಲ್ ಹಲವರಿಗೆ ಸ್ವಾವಲಂಬನೆಯ ಬದುಕನ್ನು ಕೊಟ್ಟಿರುವಂತೆ, ಬೃಹತ್ ಉದ್ದಿಮೆಗಳನ್ನೂ ಸೃಷ್ಠಿಸಿದೆ. ಕೆಲವರು ಸಣ್ಣ ಸಣ್ಣ ಸೈಕಲ್ ರಿಪೇರಿ ಅಂಗಡಿಗಳನ್ನಿಟ್ಟು ಕೊಂಡರೆ, ಇನ್ನು ಕೆಲವರು ಹಣ್ಣು, ತರಕಾರಿ, ಮೀನು, ಮಾಂಸ, ವಿವಿಧ ತಿಂಡಿ ತಿನಿಸುಗಳನ್ನು ಸೈಕಲ್ ಮೂಲಕವೇ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಒಂದು ಕಡೆಯಿಂದ ದೊಡ್ಡ ಮಟ್ಟದ ಸೈಕಲ್ ಮಾರಾಟದ ಶೋ ರೂಮುಗಳನ್ನು ತೆರೆದುಕೊಂಡವರಿದ್ದರೆ, ಇನ್ನೊಂದು ಕಡೆಯಿಂದ ಸೈಕಲ್ ತಯಾರಿಕಾ ಕಂಪೆನಿಗಳನ್ನು ಸ್ಥಾಪಿಸಿ, ಆರ್ಥಿಕತೆಯನ್ನು ಬಲಪಡಿಸಿದ್ದಾರೆ. ಸೈಕಲ್ ಬಳಸೋಣ, ಆರೋಗ್ಯವಂತರಾಗೋಣ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು