ನವದೆಹಲಿ(30-10-2020): ಭಾರತದ ಬಾಹ್ಯ ಪ್ರಾದೇಶಿಕ ಗಡಿಗಳನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಇತ್ತೀಚೆಗೆ ಬಿಡುಗಡೆ ಮಾಡಿದ ಮ್ಯಾಪ್ ಬಗ್ಗೆ ಭಾರತವು ಸೌದಿ ಅರೇಬಿಯಾಕ್ಕೆ ತಿಳಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಮ್ಯಾಪ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ನ್ನು ಭಾರತದಿಂದ ಹೊರಗಿಡುವಂತೆ ಕಾಣಿಸಿಕೊಂಡಿತ್ತು.
ಸೌದಿ ಅರೇಬಿಯಾದ ಅಧಿಕೃತ ಮತ್ತು ಕಾನೂನುಬದ್ಧ ನೋಟಿನಲ್ಲಿ ಭಾರತದ ಬಾಹ್ಯ ಪ್ರಾದೇಶಿಕ ಗಡಿಗಳನ್ನು ಸಂಪೂರ್ಣವಾಗಿ ತಪ್ಪಾಗಿ ನಿರೂಪಿಸಿದ್ದಕ್ಕಾಗಿ ನಾವು ಸೌದಿ ಅರೇಬಿಯಾಕ್ಕೆ ನವದೆಹಲಿಯಲ್ಲಿ ಮತ್ತು ರಿಯಾದ್ ನಲ್ಲಿರುವ ಅವರ ರಾಯಭಾರಿಯ ಮೂಲಕ ತಿಳಿಸಿದ್ದೇವೆ. ಸೌದಿ ಕಡೆಯಿಂದ ತುರ್ತು ಕ್ರಮ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದೇವೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗಗಳಾಗಿವೆ ಎಂದು ನಾವು ಪುನರುಚ್ಚರಿಸಲು ಬಯಸುತ್ತೇವೆ ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.