ರಾಜಸ್ಥಾನ(27-11-2020): ಪತ್ನಿ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡುವಾಗ ಮುಂದೆ ನಿಂತು ವಿಡಿಯೋ ಮಾಡುತ್ತಿದ್ದ ಪತಿಯ ವಿರುದ್ಧ ಇದೀಗ ವರದಕ್ಷಿಣೆ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ.
ಸ್ವತಃ ಬೆಂಕಿ ಹಚ್ಚಿದ ಮಹಿಳೆಯ ಸಾವಿಗೆ ಸಂಬಂಧಿಸಿದಂತೆ ರಾಜಸ್ಥಾನದ ಝುನುಝುನು ಜಿಲ್ಲೆಯ ಪೊಲೀಸರು ಮೃತ ಮಹಿಳೆಯ ಪತಿ ಮತ್ತು ಅವರ ಐವರು ಕುಟುಂಬದ ಸದಸ್ಯರನ್ನು ವಶಕ್ಕೆ ಪಡೆದಿದ್ದಾರೆ. ಪತಿ ಈ ಘಟನೆಯನ್ನು ವಿಡಿಯೋದಲ್ಲಿ ಚಿತ್ರೀಕರಿಸಿದ್ದು, ಕ್ಲಿಪ್ ನ್ನು ಮಹಿಳೆಯ ಪೋಷಕರಿಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆ ನವೆಂಬರ್ 20ಕ್ಕೆ ನಡೆದಿದೆ. ಮಹಿಳೆ ತನ್ನನ್ನು ತಾನೇ ಬೆಂಕಿ ಹಚ್ಚಿಕೊಂಡಿದ್ದಾಳೆ. ತೀವ್ರ ಸುಟ್ಟಗಾಯಗಳೊಂದಿಗೆ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಂತರ ಅಲ್ಲಿಂದ ಅವರನ್ನು ಜೈಪುರ ನಗರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರು ನವೆಂಬರ್ 22 ರಂದು ಸಾವನ್ನಪ್ಪಿದ್ದಾರೆ.
ಮಹಿಳೆಯ ಸಾವಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498 ಎ ಮತ್ತು 306 ರ ಅಡಿಯಲ್ಲಿ 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ, ಇದು ಕ್ರಮವಾಗಿ ವರದಕ್ಷಿಣೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪಗಳಿಗೆ ಸಂಬಂಧಿಸಿದೆ.
ಮರಣೋತ್ತರ ಪರೀಕ್ಷೆಯ ನಂತರ ಮಹಿಳೆಯ ಮೃತದೇಹವನ್ನು ಕೊನೆಯ ವಿಧಿಗಳಿಗಾಗಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.