ಹುಲಿಯ ಹಾಲು ಕುಡಿದ ಗಜಗರ್ಭ ಅಂಬೇಡ್ಕರ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಾಲಾಜಿ ಕುಂಬಾರ, ಚಟ್ನಾಳ

ಜಗತ್ತಿನ ಇತಿಹಾಸವನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿದಾಗ ಬುದ್ಧನಿಂದ ಅಶೋಕನವರೆಗೆ ನಮಗೆ ನೂರಾರು ಮಹಾನ್ ವ್ಯಕ್ತಿಗಳ ಹೋರಾಟದ ಬದುಕು ಹಾಗೂ ಚಿಂತನೆ ಕಾಣಿಸುತ್ತದೆ. ಅವರು ತಮ್ಮದೇ ಆದ ಒಂದೊಂದು ಕ್ಷೇತ್ರದಲ್ಲಿ ಅವರು ಪಾಂಡಿತ್ಯವನ್ನು ಗಳಿಸಿರುತ್ತಾರೆ. ಆದರೆ ಭಾರತದ ಸಂವಿಧಾನ ಶಿಲ್ಪಿಗಳಾದ ಡಾ. ಅಂಬೇಡ್ಕರ್ ಅವರು ರಾಜಕೀಯ,ಸಾಮಾಜಿಕ,ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮ ವಿಶೇಷವಾದ ಛಾಪು ಮೂಡಿಸಿ ಸಮಾಜದ ಮೇಲೆ ಬೆಳಕು ಚೆಲ್ಲಿದರು.

ಇತಿಹಾಸ, ತತ್ವಶಾಸ್ತ್ರ, ರಾಜಕೀಯ, ಸಂವಿಧಾನ ಕಾನೂನು, ಪತ್ರಿಕೋದ್ಯಮ ಸೇರಿದಂತೆ ಮುಂತಾದ ವಿಷಯಗಳಲ್ಲಿ ಅಪಾರವಾದ ಪಾಂಡಿತ್ಯವನ್ನು ಪಡೆದಿದ್ದರು. ಅಂಬೇಡ್ಕರ್ ಅವರಿಗೆ ಇಷ್ಟೊಂದು ವಿಷಯಗಳಲ್ಲಿ ಅಪಾರವಾದ ವಿದ್ವತ್ತು ಗಳಿಸಿದ್ದು ಹೇಗೆ ಎಂದು ಪ್ರಶ್ನೆ ಮೂಡುವುದು ಸಹಜ. ಆದರೆ ಅವರ ಎಲ್ಲಾ ಸಾಧನೆಗೆ ಮೂಲ ಕಾರಣ ಅವರ ಬಿಡುವಿಲ್ಲದ ವ್ಯಾಪಕ ಅಧ್ಯಯನ ಹಾಗೂ ಶ್ರೇಷ್ಠ ಚಿಂತನೆ ಎಂದು ಹೇಳಬಹುದು. ಓದು – ಬರಹದ ಹವ್ಯಾಸ ಹಲವರಿಗೆ ಮಾತ್ರ ದಕ್ಕುತ್ತದೆ, ಅದರಲ್ಲಿ ಕೆಲವರು ಮಾತ್ರ ಅಗಾಧ ಪಾಂಡಿತ್ಯ ಸಂಪಾದಿಸುತ್ತಾರೆ. ಇಂಥ ಪುಸ್ತಕ ಓದಿನ ಹವ್ಯಾಸಿ ವ್ಯಕ್ತಿಗಳಲ್ಲಿ ಭೀಮರಾಯರು ಮೊದಲಿಗರು ಎನ್ನಬಹುದು.

ಡಾ.ಅಂಬೇಡ್ಕರ್ ಅವರಿಗೆ ಪುಸ್ತಕ ಓದು – ಬರಹವೇ ಅವರಿಗೆ ಹೆಚ್ಚಿನ ಹವ್ಯಾಸವಾಗಿತ್ತು. ಪುಸ್ತಕಗಳನ್ನು ತಮ್ಮ ಆಪ್ತಮಿತ್ರಗಳಂತೆ ಪ್ರೀತಿಸುತ್ತಿದ್ದರು, ಎಲ್ಲಾ ರೀತಿಯ ಪುಸ್ತಕ ಓದುವುದರಲ್ಲಿ ಹೆಚ್ಚಿನ ಆಸಕ್ತರಾಗಿದ್ದರು. ಅಂಬೇಡ್ಕರವರಿಗಿದ್ದ ಪುಸ್ತಕ ಪ್ರೀತಿ, ಅಧ್ಯಯನಶೀಲತೆ, ಶ್ರದ್ಧೆ ಮತ್ತು ಏಕಾಗ್ರತೆ ಜಗತ್ತಿನಲ್ಲಿ ಬಹುಶಃ ಬೇರೆ ಯಾರಿಗೂ ಇರಲಿಲ್ಲ ಎಂದು ಹೇಳಿದರೂ ತಪ್ಪಾಗಲಾರದು. ಅವರ ಜ್ಞಾನ ಸಂಪಾದನೆ ಮತ್ತು ಪುಸ್ತಕ ಓದು ಹರಿಯುವ ನೀರಿನಂತೆ ನಿರಂತರವಾಗಿ ಹೆಚ್ಚುತ್ತಲೇ ಹೋಗಿತ್ತು. “ನನ್ನ ಗ್ರಂಥಗಳು ನನ್ನ ಸಂಗಾತಿಗಳಾಗಿವೆ. ನನ್ನ ಹೆಂಡತಿ ಮಕ್ಕಳಿಗಿಂತ ಅವು ನನಗೆ ಹೆಚ್ಚು ಪ್ರಿಯವಾದವು” ಎಂದು ಅಂಬೇಡ್ಕರ್ ಒಮ್ಮೊಮ್ಮೆ ಹೇಳುತ್ತಿದ್ದರು.

ಕೆಲವರಿಗೆ ಹಣ, ಆಸ್ತಿ ಗಳಿಕೆ, ಐಶ್ವರ್ಯ ಸಂಪಾದನೆ ಮುಖ್ಯವಾದರೆ ಇನ್ನೂ ಹಲವರಿಗೆ ಅಧಿಕಾರ, ಪ್ರತಿಷ್ಠೆ ಶ್ರೇಷ್ಠ ಎನ್ನುತ್ತಾರೆ. ಆದರೆ ಅಂಬೇಡ್ಕರ್ ಅವರಿಗೆ ಇದಾವುದೂ ಮುಖ್ಯ ಆಗಿರಲಿಲ್ಲ. ಪ್ರತಿಕ್ಷಣವೂ ವ್ಯರ್ಥ ಮಾಡದೆ ಪುಸ್ತಕಗಳನ್ನು ಓದುವುದು, ಹೆಚ್ಚು ಹೆಚ್ಚು ಪಾಂಡಿತ್ಯ ಗಳಿಸಬೇಕೆಂಬ ಜ್ಞಾನದ ಹಸಿವು ಅವರಿಗಿತ್ತು.
ಶಿಕ್ಷಣದಿಂದ ವಂಚಿತರಾದವರ ಬದುಕ ಅಕ್ಷರಶಃ ಶೂನ್ಯ ಎಂದು ಅವರು ಮನಗಂಡು ಅಪಾರವಾದ ಓದಿಗಾಗಿ ಹಂಬಲಿಸುತ್ತಿದ್ದರು, ಬದುಕಿನ ಅಂತಿಮ ಕ್ಷಣದವರೆಗೂ ಅವರಿಗೆ ಓದಿನ ಹಸಿವು ಕಿಂಚಿತ್ತೂ ಕಮ್ಮಿ ಆಗಿರಲಿಲ್ಲ.

1913ರಲ್ಲಿ ಅಮೇರಿಕಾದಲ್ಲಿ ವಿದ್ಯಾರ್ಥಿಯಾಗಿದ್ದ 22 ವರ್ಷದ ಅಂಬೇಡ್ಕರ್ ತಮ್ಮ ಪತ್ನಿ ರಮಾಬಾಯಿಗೆ ಬರೆದ ಪತ್ರದಲ್ಲಿ ಈ ರೀತಿ ಹೇಳುತ್ತಾರೆ;
“ರಮಾ, ನಮ್ಮ ದೇಶದಲ್ಲಿರುವ ಬಡ ಅನಕ್ಷರಸ್ಥ ಮುಗ್ಧ ಜೀವಿಗಳನ್ನು ಮನುಷ್ಯರನ್ನಾಗಿ ಮಾಡಬೇಕಿದೆ . ಅವರಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿದೆ, ಅದಕ್ಕಾಗಿಯೇ ನನ್ನ ಬೌದ್ಧಿಕ, ಮಾನಸಿಕ ಹಾಗೂ ವಾಚನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ .ಅಲ್ಲಿ ದೀನ, ದುರ್ಬಲರ ಮೇಲೆ ಆಗುವ ಶೋಷಣೆಯನ್ನು ಕಂಡು ನನ್ನ ಜೀವ ಉರಿದು ಹೋಗುತ್ತದೆ. ಈ ಕಾರಣದಿಂದಲೇ ಇಲ್ಲಿ ಅನ್ನ, ನೀರು, ಮೋಜು-ಮಸ್ತಿ ಎಲ್ಲದಕ್ಕೂ ಬೆನ್ನು ತಿರುಗಿಸಿ ಜ್ಞಾನದ ಅಗ್ನಿಕುಂಡದಲ್ಲಿ ನನ್ನನ್ನೇ ನಾನು ತಳ್ಳಿಕೊಂಡು ಬೇಯುತ್ತಿದ್ದೇನೆ” ಎಂದು ಅಂಬೇಡ್ಕರ್ ಪತ್ರದಲ್ಲಿ ಬರೆದು ಕಳುಹಿಸಿದರು. ಬಾಬಾಸಾಹೇಬ್ ಅವರ ಎಂಥ ದೂರದೃಷ್ಟಿಯ ಚಿಂತಕರು ಎಂದು ಹೇಳಲು ಇದೊಂದು ಸಾಕ್ಷಿ.

ಅಂಬೇಡ್ಕರ್ ಅವರು ಅತ್ಯುನ್ನತ ಸ್ಥಾನಕ್ಕೆ ಏರಿದಂತೆಲ್ಲಾ ,ದೊಡ್ಡ ನಾಯಕರಾಗಿ ಬೆಳೆದಂತೆ ಪುಸ್ತಕ ಖರೀದಿಸುವ, ಅಧ್ಯಯನ ನಡೆಸುವ ಹಾಗೂ ಜ್ಞಾನ ಸಂಪಾದನೆ ಮಾಡಿಕೊಳ್ಳುವ ಅವರ ಹವ್ಯಾಸ ಹೆಚ್ಚಾಗತೊಡಗಿತ್ತು. ‘ಪುಸ್ತಕಗಳಿಲ್ಲದೆ, ಓದು ಬರಹಗಳಿಲ್ಲದೆ ನಾನು ಬದುಕಿರುವುದು ವ್ಯರ್ಥ’ ಎನ್ನುವ ಮಾತುಗಳು ಅಂಬೇಡ್ಕರ್ ಹೇಳುತ್ತಿದ್ದರು. ಅವರಿಗೆ ಜ್ಞಾನ ಸಂಪಾದನೆಗಿಂತ ಮುಖ್ಯವಾದದ್ದು ಬೇರೆ ಮತ್ತೊಂದು ಇರಲಿಲ್ಲ. ಹೀಗಾಗಿ ಅಂಬೇಡ್ಕರರು ದೊಡ್ಡ ಪುಸ್ತಕ ಭಂಡಾರ ನಿರ್ಮಿಸಿ ಅಪಾರ ಪಾಂಡಿತ್ಯ ಗಳಿಸಲು ಸಾಧ್ಯವಾಗಿದೆ.

ಓದಲು ಕುಳಿತರೆ ಹಸಿವು, ಬಾಯಾರಿಕೆ, ನಿದ್ರೆ ಎಲ್ಲವೂ ಮರೆಯುತ್ತಿದ್ದವು, ಒಮ್ಮೊಮ್ಮೆ ಇಡೀ ರಾತ್ರಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಹಲವಾರು ಪುಸ್ತಕಗಳನ್ನು ಓದುವ ಜೊತೆಗೆ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ದೇಶ – ವಿದೇಶಗಳಲ್ಲಿ ಉಪನ್ಯಾಸಗಳನ್ನು ಮಂಡಿಸಿರುವ ಅಂಬೇಡ್ಕರ್ ಅಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾದ ಮೇರು ವ್ಯಕ್ತಿತ್ವ ಅವರದ್ದು.
“ರಾಮೂ ನಾನು ಬರೆದ ಪ್ರತಿಯೊಂದು ಗ್ರಂಥ ಬಿಡುಗಡೆಯಾದಾಗಲೂ ನಮಗೆ ಒಂದು ಮಗು ಹುಟ್ಟಿದಾಗ ಆಗುವ ಸಂತೋಷಕ್ಕಿಂತಲೂ ಹೆಚ್ಚು ಸಂತೋಷವಾಗುತ್ತದೆ” ಎಂದು ಬಾಬಾ ಸಾಹೇಬ್ರು ತಮ್ಮ ಪತ್ನಿ ರಮಾಬಾಯಿಗೆ ಹೇಳುತ್ತಿದ್ದರು.

ಬಡವರ,ದೀನರ, ದಲಿತರ, ದಮನಿತರ ಏಳಿಗೆಗಾಗಿ ಇಡೀ ಜೀವನವನ್ನು ಮುಡುಪಾಗಿಟ್ಟು ಸತತ ಹೋರಾಟ, ಚಳವಳಿ, ಬರಹ, ಚಿಂತನೆಗಳ ಜೊತೆಗೆ ಮಹಾತ್ಯಾಗಗಳನ್ನು ಮಾಡಿರುವ ಅಂಬೇಡ್ಕರ್ ಅತ್ಯಂತ ಕ್ರಿಯಾಶೀಲ ವ್ಯಕ್ತಿ ಕೂಡ ಆಗಿದ್ದರು. ಅವರ ಗ್ರಂಥಾಲಯದಲ್ಲಿ 50 ಸಾವಿರಕ್ಕೂ ಅಧಿಕ ಪುಸ್ತಕಗಳಿದ್ದವು, ತಮ್ಮ ಆದಾಯದ ಶೇ.50% ಭಾಗದ ಹಣವನ್ನು ಪುಸ್ತಕಗಳಿಗಾಗಿಯೇ ವ್ಯಯ ಮಾಡುತ್ತಿದ್ದರು. ಒಮ್ಮೆ ‘ಮದನ ಮೋಹನ ಮಾಳವೀಯ, ಬಿರ್ಲಾ, ಜೆ.ಕೆ ಮತ್ತಿತರರು ಅವರ ಪುಸ್ತಕ ಭಂಡಾರಕ್ಕೆ ಭೇಟಿಯಾಗಿ ಭಾರಿ ಬೆಲೆ ಕೊಡಲು ಬಂದರೂ ಅದನ್ನೆಲ್ಲಾ ಅಂಬೇಡ್ಕರ್ ತಿರಸ್ಕರಿಸಿದರು.
“ಯಾರಿಗೂ ಅವರ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಮುಟ್ಟುವ ಅವಕಾಶ ಇರಲಿಲ್ಲ.
ಬೆದರಿಸಿ ಗ್ರಂಥಾಲಯವನ್ನು ವಶಪಡಿಸಿಕೊಳ್ಳಲು ಪ್ರಯತ್ನಪಟ್ಟರೆ, ಪುಸ್ತಕದ ಮೇಲೆ ಕೈ ಇಡುವ ಮುನ್ನವೇ ಅವನನ್ನು ಕೊಂದು ಹಾಕುತ್ತೇನೆ” ಎನ್ನುವ ಮಾತುಗಳು ಅಂಬೇಡ್ಕರ್ ಹೇಳಿದರು ಎಂದು ನಾನಕ್ ರತ್ತು ಅವರು ಬರೆದಿದ್ದಾರೆ. ಆಕ್ರೋಶದ ಮಾತುಗಳಾದರು ಅವು ಪುಸ್ತಕಗಳ ಮೇಲಿನ ಅನನ್ಯವಾದ ಪ್ರೀತಿಯ ನುಡಿಗಳೇ ಆಗಿದ್ದವು.

“ನಾನು ಒಂದು ಬಡಕುಟುಂಬದಲ್ಲಿ ಹುಟ್ಟಿದೆ. ಬೇರೆಯವರಿಗಿಂತಲೂ ಉತ್ತಮವಾದ ಸೌಕರ್ಯಗಳಾಗಲಿ ಅಥವಾ ಆರೋಗ್ಯಕರ ಪರಿಸರವಾಗಲಿ ನನಗಿರಲಿಲ್ಲ. ನಾನು, ನನ್ನ ತಂದೆ ತಾಯಿ, ಸೋದರ, ಸೋದರಿಯರು, ಅವರ ಮಕ್ಕಳುಗಳು ಎಲ್ಲರೂ ಜೊತೆಯಲ್ಲಿ 10×10 ಚದರ ಅಡಿ ಅಳತೆಯ ಒಂದೇ ಕೋಣೆಯಲ್ಲಿ ವಾಸವಾಗಿದ್ದವು. ನಮ್ಮಲ್ಲಿದ್ದುದು ಒಂದೇ ಒಂದು ಮಿಣುಕು ಸೀಮೆಎಣ್ಣೆ ದೀಪ. ಎಲ್ಲ ಅಡ್ಡಿ ಆತಂಕಗಳನ್ನೂ ದಾಟಿ, ಕಡುಕಷ್ಟಗಳ ವಿರುದ್ಧ ಹೋರಾಡಿ ಇಷ್ಟೆಲ್ಲಾ ಸಾಧಿಸಿದ್ದೇನೆಂದ ಮೇಲೆ, ವಿಪುಲ ಆಧುನಿಕ ಸೌಕರ್ಯಗಳು ದೊರೆಯುತ್ತಿರುವ ಈಗ ನೀವೂ ಸಹ ಅಷ್ಟನ್ನು ಸಾಧಿಸಲು ಏಕೆ ಕಷ್ಟವಾಗಬೇಕು? ” ಎಂದು ಅಂಬೇಡ್ಕರ್ ಹೇಳುತ್ತಾರೆ.
ಅಂಬೇಡ್ಕರ್ ಅವರಿಗೆ ಪುಸ್ತಕಗಳ ಬಗ್ಗೆ ಇದ್ದ ವ್ಯಾಮೋಹ, ಪುಸ್ತಕಗಳನ್ನು ಓದುವ ಗೀಳು ಅಧ್ಯಯನ ಸಾಮರ್ಥ್ಯ, ಅಧ್ಯಯನಶೀಲತೆ ಪ್ರಸ್ತುತ ಸಮಾಜಕ್ಕೆ ತೀರ ಸ್ಪೂರ್ತಿ ಆಗಬೇಕಾಗಿದೆ. ಬದುಕಿನಲ್ಲಿ ಅವಿರತ ಪರಿಶ್ರಮ ಹಾಗೂ ಬದ್ಧತೆ ಮೈಗೂಡಿಸಿಕೊಂಡರೆ ಎಲ್ಲವೂ ಸಾಧಿಸಬಹುದು ಎನ್ನುವುದಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ಸಾಕ್ಷಿಯಾಗಿದ್ದಾರೆ.

‘ಶಿಕ್ಷಣ ಒಂದು ಖಡ್ಗವಿದ್ದಂತೆ’ ಎಂದು ಹೇಳಿದ ಅಂಬೇಡ್ಕರ್’ ಪುಸ್ತಕಗಳನ್ನು ಕೇವಲ ಓದುವುದರಿಂದ ಪ್ರಯೋಜನವಿಲ್ಲ. ಅವುಗಳನ್ನು ಓದಿ ಅರ್ಥೈಸಿಕೊಂಡು ಅಮೂಲಾಗ್ರವಾಗಿ ಜೀರ್ಣಿಸಿಕೊಳ್ಳಬೇಕು, ತಾನು ಓದಿದ್ದನ್ನು ಸಂಕ್ಷಿಪ್ತ ರೂಪದಲ್ಲಿ ಬೇರೆಯವರಿಗೆ ಹೇಳಲಾಗದಿದ್ದರೆ, ಅದರಿಂದ ಉಪಯೋಗವಿಲ್ಲ’ ಎಂದು ಅಂಬೇಡ್ಕರ್ ಹೇಳುತ್ತಾರೆ. ಇಂಥ ಪಾಂಡಿತ್ಯದ ಮೂಲಕವೇ ಜ್ಞಾನದ ಸೂರ್ಯ ಎನಿಸಿಕೊಂಡಿರುವ ಬಾಬಾ ಸಾಹೇಬ್ ರನ್ನು ನಾವೆಲ್ಲರೂ ಮತ್ತೆ ಮತ್ತೆ ಓದಿಕೊಂಡು, ಅವರನ್ನು ಅರ್ಥೈಸಿಕೊಳ್ಳುವುದು ಎಂದಿಗಿಂತಲೂ ಇಂದು ಮುಖ್ಯವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು