ಹೌದು, ನಾನು ಜಾತಿವಾದಿ.. ಏನೀಗ? : ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ‘ಬಾಯಲ್ಲಿ ನಾವೆಲ್ಲ ಒಂದು, ನಾವೆಲ್ಲ ಹಿಂದೂ’ ಎನ್ನುವ ಮಂತ್ರ.‌ ಅಂತರಂಗದಲ್ಲಿ‌ ಜಾತಿಗಳನ್ನು ಒಡೆದು ಆಳುವ ಕುತಂತ್ರ. ಮಂಡಲ ವಿರುದ್ಧ ಕಮಂಡಲ‌ ಹಿಡಿದ ಬಿಜೆಪಿ ನಾಯಕರ ಜಾತಿ‌ ಹಿಪಾಕ್ರಸಿಯನ್ನು ಬಿಚ್ಚಿಟ್ಟರೆ ಅದೊಂದು‌ ಕೊನೆಯಿಲ್ಲದ ಧಾರವಾಹಿ ಆದೀತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕುರುಬ ಸಮಾವೇಶ ನಡೆಸಿದ್ದ ಈಶ್ವರಪ್ಪ, ಪಂಚಮಸಾಲಿ ಲಿಂಗಾಯತರ ಸಮಾವೇಶ ನಡೆಸಿದ ಯತ್ನಾಳ್, ಬ್ರಾಹ್ಮಣ ಸಮಾವೇಶದಲ್ಲಿ‌ ಪಾಲ್ಗೊಂಡ ಜೋಷಿ, ಕಾಗೇರಿ, ಸುರೇಶ್ ಕುಮಾರ್, ಒಕ್ಕಲಿಗನೆಂಬ ಕಾರಣಕ್ಕೆ ಸಚಿವನಾದೆ ಎನ್ನುವ ಆರ್.‌ಅಶೋಕ್ ಜಾತಿವಾದಿಗಳಾ? ಜಾತ್ಯತೀತರಾ? ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಲಿಂಗಾಯತ ಸ್ವಾಮಿಗಳನ್ನು ಮನೆಗೆ ಕರೆಸಿ ದುಡ್ಡು ಹಂಚಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜಾತಿವಾದಿಯೇ? ಜಾತ್ಯತೀತವಾದಿಯೇ? ಎಂದು ಪ್ರಶ್ನಿಸಿದ್ದಾರೆ.

ಶೋಷಿತ ಜಾತಿಗಳ ಸಮಾವೇಶದಲ್ಲಿ ನಾನು ಭಾಗವಹಿಸಿದರೆ ಜಾತಿವಾದಿ, ನೀವು ಭಾಗವಹಿಸಿದರೆ‌ ಜಾತ್ಯತೀತರಾ? ಜಾತಿ ಸಮಾವೇಶದಲ್ಲಿ‌ ಭಾಗವಹಿಸುವುದಿಲ್ಲ ಎಂದು ಬಿಜೆಪಿ ನಾಯಕರು ಪ್ರಮಾಣ ಮಾಡಲಿ, ನಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆ. ಆತ್ಮವಂಚನೆ ಬಿಟ್ಟು ಪ್ರಾಮಾಣಿಕ ರಾಜಕೀಯ ಮಾಡಿ. ಟಿಪ್ಪು ಸುಲ್ತಾನ್ ಜಯಂತಿ‌ಯಲ್ಲಿ ನಾನು ಭಾಗವಹಿಸಿದರೆ ಹಿಂದೂ ವಿರೋಧಿ. ಟಿಪ್ಪು ಬಗ್ಗೆ ಸರ್ಕಾರದಿಂದಲೇ ಪುಸ್ತಕ‌ ಪ್ರಕಟಿಸಿ ಹಾಡಿ ಹೊಗಳಿದ ಮಾಜಿ‌ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮುಸ್ಲಿಂ ಗಣವೇಷ ಹಾಕಿ‌ ಖಡ್ಗ ಹಿಡಿದು ಕುಣಿದ ಬಿ.ಎಸ್ ಯಡಿಯೂರಪ್ಪ, ಆರ್. ಅಶೋಕ್ ಹಿಂದೂಕುಲ ತಿಲಕರೇ? ಎಂದು ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಜಾತಿ ನಾಶವಾಗುವ ವರೆಗೆ ಮೀಸಲಾತಿ ಇರಬೇಕೆಂಬ ನನ್ನ ಮಾತಿಗೆ ನಾನೀಗಲೂ ಬದ್ಧ. ಮಂಡಲ್ ವರದಿ ವಿರೋಧಿಸಿ ಮೈಗೆ ಬೆಂಕಿ ಹಚ್ಚಿಕೊಂಡಿದ್ದ ಬಿಜೆಪಿ ನಾಯಕರೇ ಈಗ ನಿಮಗೆ ಮೀಸಲಾತಿ ವಿರೋಧಿಸುವ ತಾಕತ್ ಇದೆಯೇ? ಅಂದ ಹಾಗೆ ಬಿಜೆಪಿ ನಾಯಕರೇ,
ನಿಮ್ಮ‌ ಮಾತೃ ಸಂಸ್ಥೆಯಾದ ಆರ್ ಎಸ್ ಎಸ್ ಗೆ ಚುನಾವಣೆ ಇಲ್ಲದೆ ನೇಮಕವಾಗುವ ಪದಾಧಿಕಾರಿಗಳೆಲ್ಲ ಒಂದು ಜಾತಿಯವರೇ ಯಾಕೆ?

 

ಚುನಾವಣೆಯಲ್ಲಿ ಆಯ್ಕೆಯಾಗುವ ಬಿಜೆಪಿ ಅಭ್ಯರ್ಥಿಗಳಲ್ಲಿ ಎಲ್ಲ ಜಾತಿಗಳಿಗೆ ಸೇರಿದವರು ಇರುವುದು ಯಾಕೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಗುಡುಗಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು