ಹೊಣೆಗೇಡಿ ಶಾಸಕರಿಂದ ಏನನ್ನು ನಿರೀಕ್ಷಿಸಲು ಸಾಧ್ಯ?

Share on facebook
Share on twitter
Share on linkedin
Share on whatsapp
Share on telegram
Share on email
Share on print

ಹೊಣೆಗೇಡಿ ಶಾಸಕರಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಪ್ರಜಾತಂತ್ರ ವ್ಯವಸ್ಥೆಯಲ್ಲಿ ಐದು ವರ್ಷಕ್ಕೊಮ್ಮೆ ತಮ್ಮ ಅಮೂಲ್ಯ ಮತ ನೀಡಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಜೆಗಳಿಗೆ, ತಾವು ಚುನಾಯಿಸಿರುವ ಸರ್ಕಾರ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಅರಿವಾಗುವುದು ವಿಧಾನಮಂಡಲದ ಅಥವಾ ಸಂಸತ್ತಿನ ಅಧಿವೇಶನದ ಮೂಲಕ. ಈ ಅಧಿವೇಶನದಲ್ಲಿ ನಡೆಯುವ ಚರ್ಚೆಗಳು, ವಾಗ್ವಾದಗಳು, ಆರೋಪ ಪ್ರತ್ಯಾರೋಪಗಳು ಮತ್ತು ವಿವಿಧ ಇಲಾಖೆಗಳ ಸಚಿವರು ಸದನದಲ್ಲಿ ಮಂಡಿಸುವ ಅಂಕಿಅಂಶಗಳು, ರಾಜ್ಯ-ರಾಷ್ಟ್ರದ ಅಭಿವೃದ್ಧಿ ಎತ್ತ ಸಾಗುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಜನಸಾಮಾನ್ಯರು ತಮ್ಮ ದೈನಂದಿನ ಬದುಕಿನಲ್ಲಿ ಎದುರಿಸುವ ಜ್ವಲಂತ ಸಮಸ್ಯೆಗಳು ಮತ್ತು ರಾಜ್ಯ ಎದುರಿಸುತ್ತಿರುವ ಹಣಕಾಸು ಬಿಕ್ಕಟ್ಟು, ಹವಾಮಾನ ವೈಪರೀತ್ಯ, ಕೃಷಿ ಸಮಸ್ಯೆ ಇವೆಲ್ಲ ಒಂದು ಅಧಿವೇಶನದಲ್ಲಿ ಚರ್ಚೆಯಾಗಬೇಕಾದ ಗಂಭೀರ ವಿಚಾರಗಳು. ಈ ಬಾರಿಯ ಕರ್ನಾಟಕ ವಿಧಾನಮಂಡಲದ ಬಜೆಟ್ ಅಧಿವೇಶನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕರ್ನಾಟಕದ ಜನತೆಯ ಮುಂದೆ ಸಮಸ್ಯೆಗಳೇ ಇಲ್ಲವೇನೋ ಎನಿಸುತ್ತದೆ. ಯಾವುದೇ ಕಾರಣಗಳಿಲ್ಲದೆ ಅಧಿವೇಶನವನ್ನು ಒಂದು ವಾರ ಮೊಟಕುಗೊಳಿಸಲಾಗಿದೆ. ಅಂದರೆ ಇನ್ನು ಚರ್ಚೆ ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂದು ಅರ್ಥವೇ ಅಥವಾ ನಮ್ಮಿಚ್ಚೆಯಂತೆ ಅಧಿವೇಶನ ನಡೆಸುತ್ತೇವೆ ಎಂಬ ಪ್ರತಿನಿಧಿಗಳ ಅಹಮಿಕೆಯ ಸೂಚನೆಯೋ ? ಜನರ ಅಮೂಲ್ಯ ಮತಗಳನ್ನು ಗಳಿಸಿ ಚುನಾಯಿತರಾಗುವ ಶಾಸಕರಿಗೆ ಮೂಲತಃ ತಮ್ಮ ಸುತ್ತಲಿನ ಸಮಾಜದ ಪರಿವೆ ಇರಬೇಕು. ವಿಶೇಷವಾಗಿ ಬಜೆಟ್ ಅಧಿವೇಶನದಲ್ಲಿ ರಾಜ್ಯದ ಬೊಕ್ಕಸ ಹೇಗಿದೆ ಎಂದು ಜನರಿಗೆ ಪರಿಚಯವಾಗಬೇಕು. ಸಾಲದ ಹೊರೆಯಿಂದ ಜರ್ಝರಿತವಾಗಿರುವ ರಾಜ್ಯ ಸರ್ಕಾರಕ್ಕೆ ಖಾಲಿ ಇರುವ ಹುದ್ದೆಗಳನ್ನು ನೇರವಾಗಿ ಭರ್ತಿ ಮಾಡಲು ಹಣಕಾಸು ಕೊರತೆ ಇದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ನಾವು ಸಾಲ ಮಾಡಿ ತುಪ್ಪ ತಿಂದಿಲ್ಲ ಎಂದು ಸಮಜಾಯಿಷಿ ನೀಡುತ್ತಾರೆ. ಈ ಸರ್ಕಾರಕ್ಕೆ ಇಂತಿಷ್ಟೇ ಸಾಲ ಮಾಡಿ ಎಂದು ಜನತೆ ಏನಾದರೂ ದುಂಬಾಲು ಬಿದ್ದಿದ್ದರೇ ? ಸರ್ಕಾರದ ಸಾಲದ ಹೊರೆ ಏಕೆ ಹೆಚ್ಚಾಗಿದೆ ಎನ್ನುವುದು ಆಳುವವರಿಗೂ ತಿಳಿದಿದೆ, ಜನತೆಗೂ ತಿಳಿದಿದೆ. ಜನರು ಪಾವತಿಸಿದ ಜಿಎಸ್‍ಟಿ ತೆರಿಗೆಯ ರಾಜ್ಯದ ಪಾಲನ್ನು ನೀಡದ ಕೇಂದ್ರ ಸರ್ಕಾರ ರಾಜ್ಯದ ಮೇಲೆ ಸಾಲದ ಹೊರೆ ಹೊರಿಸಿದೆ. ಇದಕ್ಕೆ ಯಾರನ್ನು ದೂಷಿಸುವುದು ? ಒಂದು ಹೊಂಡ ಮುಚ್ಚಲು ಮತ್ತೊಂದು ಹೊಂಡ ತೋಡುವ ಬಜೆಟ್ ಎನ್ನುವ ವಾರ್ಷಿಕ ಪ್ರಹಸನ ಇತ್ತೀಚಿನ ದಿನಗಳಲ್ಲಿ ನಗೆಪಾಟಲಿಗೀಡಾಗಿದೆ. ಯಾವುದೇ ಉತ್ತರದಾಯಿತ್ವದ ಪ್ರಜ್ಞೆ ಇಲ್ಲದೆ ಮಂಡಿಸುವ ಈ ಬಜೆಟ್ ಎನ್ನುವ ಆರ್ಥಿಕ ಕಡತ ಅಂಕಿಅಂಶಗಳಲ್ಲೇ ಸ್ವರ್ಗ ನಿರ್ಮಿಸುವ ಒಂದು ಮನರಂಜನೆಯಾಗಿ ಮಾತ್ರ ಉಳಿದಿದೆ. ರಾಜ್ಯದಲ್ಲಿ ಎಷ್ಟು ಸಮಸ್ಯೆಗಳಿವೆ ಎಂದು ನಮ್ಮ ಶಾಸಕ ಮಹಾಶಯರಿಗೆ ತಿಳಿದಿದೆಯೇ ? ಕಳೆದ ವರ್ಷದ ಕೋವಿದ್ 19 ಮತ್ತು ಅವೈಜ್ಞಾನಿಕ ಲಾಕ್‍ಡೌನ್ ಪರಿಣಾಮ ಉಂಟಾಗಿರುವ ನಿರುದ್ಯೋಗ, ಕೈಗಾರಿಕಾ ಉತ್ಪಾದನೆಯಲ್ಲಿನ ಹಿನ್ನಡೆ, ಶೈಕ್ಷಣಿಕ ವಲಯದಲ್ಲಿನ ಗೊಂದಲಗಳು, ಗ್ರಾಮೀಣ ನಿರುದ್ಯೋಗ, ಕೃಷಿ ಬಿಕ್ಕಟ್ಟು, ನೀರಾವರಿ ಸೌಲಭ್ಯದ ಕೊರತೆ, ಕುಡಿಯುವ ನೀರಿನ ಸಮಸ್ಯೆ, ಬೆಲೆ ಏರಿಕೆ, ಭರ್ತಿಯಾಗದೆ ಉಳಿದಿರುವ ಸರ್ಕಾರಿ ಹುದ್ದೆಗಳು, ಮುಚ್ಚಿಹೋಗುತ್ತಿರುವ ಕೈಗಾರಿಕೆಗಳು, ಸಣ್ಣ ಮತ್ತು ಅತಿಸಣ್ಣ ವ್ಯಾಪಾರಿಗಳು ಎದುರಿಸುತ್ತಿರುವ ಮೂಲ ಬಂಡವಾಳದ ಸಮಸ್ಯೆ, ಜನರ ಮೇಲೆ ಹೆಚ್ಚಾಗುತ್ತಿರುವ ಸಾಲದ ಹೊರೆ , ಇದು ಮುಗಿಯದ ಪಟ್ಟಿ.  ದುಡಿಯುವ ವರ್ಗಗಳು ಅವಶ್ಯ ವಸ್ತುಗಳ ಬೆಲೆ ಏರಿಕೆಯಿಂದ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿ ಹೋಗುತ್ತಿದ್ದಾರೆ. ಮಾರುಕಟ್ಟೆಯ ವ್ಯತ್ಯಯಗಳು ಮತ್ತು ಉತ್ಪಾದನಾ ಕ್ಷೇತ್ರದ ಹಿನ್ನಡೆಯಿಂದ ಅಸಂಘಟಿತ ಕಾರ್ಮಿಕರ ನಿತ್ಯಜೀವನ ದುರ್ಭರವಾಗಿದೆ. ರಾಜ್ಯಾದ್ಯಂತ ಪೌರಕಾರ್ಮಿಕರ ಸಮಸ್ಯೆಗಳು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಇಂದಿಗೂ ಮಲಗುಂಡಿಯಲ್ಲಿ ಬಿದ್ದು ಸಾಯುವ ಪ್ರಕರಣಗಳು ಕೇಳಿಬರುತ್ತಿವೆ. ಈ ಸಮಸ್ಯೆಗಳನ್ನು ವಿರೋಧ ಪಕ್ಷದ ನಾಯಕರು ಪ್ರಸ್ತಾಪಿಸುವುದು, ಮುಖ್ಯಮಂತ್ರಿಯವರೋ ಅಥವಾ ಸಂಬಂಧಪಟ್ಟ ಸಚಿವರೋ ಸಮಜಾಯಿಷಿ ನೀಡುವುದೋ ನಡೆಯುತ್ತಿದೆ. ಇದು ವಿಧಾನಮಂಡಲದ ಕಡತಗಳನ್ನು ಸೇರಿ ಧೂಳು ತಿನ್ನುವುದರಲ್ಲಿ ಕೊನೆಗಾಣುವ ಪ್ರಹಸನಗಳಷ್ಟೆ. ಸಮಸ್ಯೆಗೆ ಪರಿಹಾರವೇನು ? ರೈತರ ಹೋರಾಟದ ಹಿನ್ನೆಲೆಯನ್ನಾಗಲೀ, ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಕೃಷಿ ಕಾಯ್ದೆಗಳ ದುಷ್ಪರಿಣಾಮಗಳನ್ನಾಗಲೀ ಚರ್ಚಿಸಲಾಗಿದೆಯೇ ? ಕರ್ನಾಟಕದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಲಾಗಿದೆಯೇ ? ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಮತ್ತು ಗೋ ಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಚರ್ಚೆ ನಡೆದಿದೆಯೇ ? ಇವೆಲ್ಲವೂ ರಾಜ್ಯದ ಸಮಸ್ತ ಜನತೆಯನ್ನು ಕಾಡುವ ಜ್ವಲಂತ ಸಮಸ್ಯೆಗಳಲ್ಲವೇ ? ಗೋ ಹತ್ಯೆ ನಿಷೇಧದಿಂದ ರೈತರು ತಮ್ಮ ನಿರುಪಯೋಗಿ ಜಾನುವಾರುಗಳನ್ನು ಮಾರಾಟ ಮಾಡಲಾಗದೆ ಪರಿತಪಿಸುತ್ತಿರುವುದು ಸಾಮಾಜಿಕ ತಾಣಗಳಲ್ಲಿ ಕಂಡುಬರುತ್ತಿದೆ.  ಈ ಗಂಭೀರ ಸಮಸ್ಯೆಗಳ ಆಳ ಮತ್ತು ವ್ಯಾಪ್ತಿಯನ್ನು ಗ್ರಹಿಸುವ ವ್ಯವಧಾನ ನಮ್ಮ ಜನಪ್ರತಿನಿಧಿಗಳಲ್ಲಿ ಇದ್ದಿದ್ದರೆ ಅಧಿವೇಶನವನ್ನು ಮತ್ತಷ್ಟು ದಿನ ವಿಸ್ತರಿಸಬೇಕಿತ್ತು. ರಾಜ್ಯದ ಜನತೆ ಈ 224 ಶಾಸಕರನ್ನು ಆಯ್ಕೆ ಮಾಡಿ ಕಳಿಸುವುದು ಪವಿತ್ರ ವಿಧಾನಮಂಡಲದಲ್ಲಿ ಸೀರೆ, ಪಂಚೆ, ಸಿ ಡಿ, ರೆಸಾರ್ಟ್, ಲಾಡ್ಜ್ ಗಳ ಬಗ್ಗೆ ಚರ್ಚೆ ಮಾಡುವುದಕ್ಕಲ್ಲ. ಒಂದು ಸಿ ಡಿ ಪ್ರಕರಣ, ಒಬ್ಬ ಸಚಿವರ ಅನೈತಿಕ ನಡತೆಯ ಪ್ರಸಂಗ ಇಡೀ ಕಲಾಪವನ್ನು ನುಂಗಿಹಾಕುತ್ತದೆ ಎಂದರೆ ನಮ್ಮ ಜನಪ್ರತಿನಿಧಿಗಳು ಎಷ್ಟು ಹೊಣೆಗೇಡಿಗಳಾಗಿರಬೇಕು. ತಾವು ನಿಂತು ಮಾತನಾಡುವ ವಿಧಾನಮಂಡಲದ ನೆಲದಲ್ಲಿ ಒಂದು ಸಾಂವಿಧಾನಿಕ ಪಾವಿತ್ರ್ಯತೆ ಇದೆ ಎನ್ನುವ ಪರಿಜ್ಞಾನವಾದರೂ ಶಾಸಕರ ಮಹೋದಯರಲ್ಲಿ ಇರಬೇಕಲ್ಲವೇ ? ಸಾರ್ವಜನಿಕ ಜೀವನದಲ್ಲಿ ಸಚ್ಚಾರಿತ್ರ್ಯದಿಂದ ಬದುಕುವುದು ವ್ಯಕ್ತಿಗತ ನೈತಿಕತೆಯ ಪ್ರಶ್ನೆ. ಊಳಿಗಮಾನ್ಯ ವ್ಯವಸ್ಥೆಯ ಸಂತತಿಯಿಂದಲೇ ಬೆಳೆದು ಬಂದ ಭಾರತದ ರಾಜಕಾರಣಿಗಳ ದಂಡು ಇನ್ನೂ ಸಹ ಅದೇ ಪಿತೃಪ್ರಧಾನ ಧೋರಣೆಯನ್ನೇ ಹೊದ್ದುಕೊಂಡು ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾರಾಜಿಸುತ್ತಿದೆ. ಹಾಗಾಗಿ ಆ ವ್ಯವಸ್ಥೆಯಲ್ಲಿದ್ದ ಮನೋವೃತ್ತಿ, ಮನೋಭಾವ ಮತ್ತು ಮನಸ್ಥಿತಿಗಳು ಇನ್ನೂ ಮುಂದುವರೆದಂತೆ ಕಾಣುತ್ತದೆ. ಸಂವಿಧಾನಕ್ಕೆ ಬದ್ಧರಾಗಿ, ಮತದಾರ ಪ್ರಭುಗಳಿಗೆ ಬದ್ಧರಾಗಿ, ಪ್ರಜಾತಂತ್ರ ಮೌಲ್ಯಗಳಿಗೆ ನಿಷ್ಠೆಯಿಂದ ಇರುವವರಾದರೆ ತಮ್ಮ ವಿರುದ್ಧ ಒಂದು ಕಳಂಕಪ್ರಾಯ ಆರೋಪ ಕೇಳಿಬಂದರೆ ರಾಜೀನಾಮೆ ನೀಡಬೇಕು. ಆದರೆ ಅಧಿಕಾರ ರಾಜಕಾರಣ ಮತ್ತು ಜಾತಿ ರಾಜಕಾರಣದ ಬಲದಿಂದ ಭ್ರಷ್ಟತೆಯೊಂದಿಗೇ ಭಂಡತನವನ್ನೂ ಬೆಳೆಸಿಕೊಂಡಿರುವ ನಮ್ಮ ಜನಪ್ರತಿನಿಧಿಗಳು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲೇ ಸಮಗ್ರವಾಗಿ ಬೆತ್ತಲಾಗುತ್ತಿದ್ದಾರೆ. ಆರೋಗ್ಯ (?) ಮತ್ತು ಕುಟುಂಬ ಕಲ್ಯಾಣ (!!!) ಸಚಿವ ಡಾ ಸುಧಾಕರ್‍ಗೆ ಧನ್ಯವಾದ ಹೇಳಬೇಕು. ಆದರೆ ಜನತೆಗೆ ಇದು ಮನರಂಜನೆಯಾಗಿ ಕಾಣುತ್ತದೆ. ನಮ್ಮ ರಾಜಕೀಯ ವ್ಯವಸ್ಥೆಯ ಬಗ್ಗೆ ಅಸಹ್ಯ ಮೂಡಿಸಲು ನೆರವಾಗುತ್ತದೆ. ವಿಧಾನಮಂಡಲದ ಅಧಿವೇಶನ ಈ ಮನರಂಜನೆಯ ಭೂಮಿಕೆ ಆಗಬಾರದು. ಇಲ್ಲಿ ರಾಜ್ಯದ ಏಳು ಕೋಟಿ ಜನತೆಯ ಭವಿಷ್ಯ ಚರ್ಚೆಯಾಗಬೇಕು. ಇದು ಸಾಧ್ಯವಾಗಬೇಕಾದರೆ ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು. ಇಲ್ಲವಾದರೆ ಲಜ್ಜೆಗೆಟ್ಟ ರಾಜಕಾರಣಕ್ಕೆ ಕರ್ನಾಟಕವೇ ಕರ್ಮಭೂಮಿಯಾಗಿಬಿಡುತ್ತದೆ.

ನಾ ದಿವಾಕರ್, ಹಿರಿಯ ಲೇಖಕರು

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಐದು ವರ್ಷಕ್ಕೊಮ್ಮೆ ತಮ್ಮ ಅಮೂಲ್ಯ ಮತ ನೀಡಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಜೆಗಳಿಗೆ, ತಾವು ಚುನಾಯಿಸಿರುವ ಸರ್ಕಾರ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಅರಿವಾಗುವುದು ವಿಧಾನಮಂಡಲದ ಅಥವಾ ಸಂಸತ್ತಿನ ಅಧಿವೇಶನದ ಮೂಲಕ. ಈ ಅಧಿವೇಶನದಲ್ಲಿ ನಡೆಯುವ ಚರ್ಚೆಗಳು, ವಾಗ್ವಾದಗಳು, ಆರೋಪ ಪ್ರತ್ಯಾರೋಪಗಳು ಮತ್ತು ವಿವಿಧ ಇಲಾಖೆಗಳ ಸಚಿವರು ಸದನದಲ್ಲಿ ಮಂಡಿಸುವ ಅಂಕಿಅಂಶಗಳು, ರಾಜ್ಯ-ರಾಷ್ಟ್ರದ ಅಭಿವೃದ್ಧಿ ಎತ್ತ ಸಾಗುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಜನಸಾಮಾನ್ಯರು ತಮ್ಮ ದೈನಂದಿನ ಬದುಕಿನಲ್ಲಿ ಎದುರಿಸುವ ಜ್ವಲಂತ ಸಮಸ್ಯೆಗಳು ಮತ್ತು ರಾಜ್ಯ ಎದುರಿಸುತ್ತಿರುವ ಹಣಕಾಸು ಬಿಕ್ಕಟ್ಟು, ಹವಾಮಾನ ವೈಪರೀತ್ಯ, ಕೃಷಿ ಸಮಸ್ಯೆ ಇವೆಲ್ಲ ಒಂದು ಅಧಿವೇಶನದಲ್ಲಿ ಚರ್ಚೆಯಾಗಬೇಕಾದ ಗಂಭೀರ ವಿಚಾರಗಳು.

ಈ ಬಾರಿಯ ಕರ್ನಾಟಕ ವಿಧಾನಮಂಡಲದ ಬಜೆಟ್ ಅಧಿವೇಶನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕರ್ನಾಟಕದ ಜನತೆಯ ಮುಂದೆ ಸಮಸ್ಯೆಗಳೇ ಇಲ್ಲವೇನೋ ಎನಿಸುತ್ತದೆ. ಯಾವುದೇ ಕಾರಣಗಳಿಲ್ಲದೆ ಅಧಿವೇಶನವನ್ನು ಒಂದು ವಾರ ಮೊಟಕುಗೊಳಿಸಲಾಗಿದೆ. ಅಂದರೆ ಇನ್ನು ಚರ್ಚೆ ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂದು ಅರ್ಥವೇ ಅಥವಾ ನಮ್ಮಿಚ್ಚೆಯಂತೆ ಅಧಿವೇಶನ ನಡೆಸುತ್ತೇವೆ ಎಂಬ ಪ್ರತಿನಿಧಿಗಳ ಅಹಮಿಕೆಯ ಸೂಚನೆಯೋ ? ಜನರ ಅಮೂಲ್ಯ ಮತಗಳನ್ನು ಗಳಿಸಿ ಚುನಾಯಿತರಾಗುವ ಶಾಸಕರಿಗೆ ಮೂಲತಃ ತಮ್ಮ ಸುತ್ತಲಿನ ಸಮಾಜದ ಪರಿವೆ ಇರಬೇಕು. ವಿಶೇಷವಾಗಿ ಬಜೆಟ್ ಅಧಿವೇಶನದಲ್ಲಿ ರಾಜ್ಯದ ಬೊಕ್ಕಸ ಹೇಗಿದೆ ಎಂದು ಜನರಿಗೆ ಪರಿಚಯವಾಗಬೇಕು.

ಸಾಲದ ಹೊರೆಯಿಂದ ಜರ್ಝರಿತವಾಗಿರುವ ರಾಜ್ಯ ಸರ್ಕಾರಕ್ಕೆ ಖಾಲಿ ಇರುವ ಹುದ್ದೆಗಳನ್ನು ನೇರವಾಗಿ ಭರ್ತಿ ಮಾಡಲು ಹಣಕಾಸು ಕೊರತೆ ಇದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ನಾವು ಸಾಲ ಮಾಡಿ ತುಪ್ಪ ತಿಂದಿಲ್ಲ ಎಂದು ಸಮಜಾಯಿಷಿ ನೀಡುತ್ತಾರೆ. ಈ ಸರ್ಕಾರಕ್ಕೆ ಇಂತಿಷ್ಟೇ ಸಾಲ ಮಾಡಿ ಎಂದು ಜನತೆ ಏನಾದರೂ ದುಂಬಾಲು ಬಿದ್ದಿದ್ದರೇ ? ಸರ್ಕಾರದ ಸಾಲದ ಹೊರೆ ಏಕೆ ಹೆಚ್ಚಾಗಿದೆ ಎನ್ನುವುದು ಆಳುವವರಿಗೂ ತಿಳಿದಿದೆ, ಜನತೆಗೂ ತಿಳಿದಿದೆ. ಜನರು ಪಾವತಿಸಿದ ಜಿಎಸ್‍ಟಿ ತೆರಿಗೆಯ ರಾಜ್ಯದ ಪಾಲನ್ನು ನೀಡದ ಕೇಂದ್ರ ಸರ್ಕಾರ ರಾಜ್ಯದ ಮೇಲೆ ಸಾಲದ ಹೊರೆ ಹೊರಿಸಿದೆ. ಇದಕ್ಕೆ ಯಾರನ್ನು ದೂಷಿಸುವುದು ? ಒಂದು ಹೊಂಡ ಮುಚ್ಚಲು ಮತ್ತೊಂದು ಹೊಂಡ ತೋಡುವ ಬಜೆಟ್ ಎನ್ನುವ ವಾರ್ಷಿಕ ಪ್ರಹಸನ ಇತ್ತೀಚಿನ ದಿನಗಳಲ್ಲಿ ನಗೆಪಾಟಲಿಗೀಡಾಗಿದೆ. ಯಾವುದೇ ಉತ್ತರದಾಯಿತ್ವದ ಪ್ರಜ್ಞೆ ಇಲ್ಲದೆ ಮಂಡಿಸುವ ಈ ಬಜೆಟ್ ಎನ್ನುವ ಆರ್ಥಿಕ ಕಡತ ಅಂಕಿಅಂಶಗಳಲ್ಲೇ ಸ್ವರ್ಗ ನಿರ್ಮಿಸುವ ಒಂದು ಮನರಂಜನೆಯಾಗಿ ಮಾತ್ರ ಉಳಿದಿದೆ.

ರಾಜ್ಯದಲ್ಲಿ ಎಷ್ಟು ಸಮಸ್ಯೆಗಳಿವೆ ಎಂದು ನಮ್ಮ ಶಾಸಕ ಮಹಾಶಯರಿಗೆ ತಿಳಿದಿದೆಯೇ ? ಕಳೆದ ವರ್ಷದ ಕೋವಿದ್ 19 ಮತ್ತು ಅವೈಜ್ಞಾನಿಕ ಲಾಕ್‍ಡೌನ್ ಪರಿಣಾಮ ಉಂಟಾಗಿರುವ ನಿರುದ್ಯೋಗ, ಕೈಗಾರಿಕಾ ಉತ್ಪಾದನೆಯಲ್ಲಿನ ಹಿನ್ನಡೆ, ಶೈಕ್ಷಣಿಕ ವಲಯದಲ್ಲಿನ ಗೊಂದಲಗಳು, ಗ್ರಾಮೀಣ ನಿರುದ್ಯೋಗ, ಕೃಷಿ ಬಿಕ್ಕಟ್ಟು, ನೀರಾವರಿ ಸೌಲಭ್ಯದ ಕೊರತೆ, ಕುಡಿಯುವ ನೀರಿನ ಸಮಸ್ಯೆ, ಬೆಲೆ ಏರಿಕೆ, ಭರ್ತಿಯಾಗದೆ ಉಳಿದಿರುವ ಸರ್ಕಾರಿ ಹುದ್ದೆಗಳು, ಮುಚ್ಚಿಹೋಗುತ್ತಿರುವ ಕೈಗಾರಿಕೆಗಳು, ಸಣ್ಣ ಮತ್ತು ಅತಿಸಣ್ಣ ವ್ಯಾಪಾರಿಗಳು ಎದುರಿಸುತ್ತಿರುವ ಮೂಲ ಬಂಡವಾಳದ ಸಮಸ್ಯೆ, ಜನರ ಮೇಲೆ ಹೆಚ್ಚಾಗುತ್ತಿರುವ ಸಾಲದ ಹೊರೆ , ಇದು ಮುಗಿಯದ ಪಟ್ಟಿ.

ದುಡಿಯುವ ವರ್ಗಗಳು ಅವಶ್ಯ ವಸ್ತುಗಳ ಬೆಲೆ ಏರಿಕೆಯಿಂದ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿ ಹೋಗುತ್ತಿದ್ದಾರೆ. ಮಾರುಕಟ್ಟೆಯ ವ್ಯತ್ಯಯಗಳು ಮತ್ತು ಉತ್ಪಾದನಾ ಕ್ಷೇತ್ರದ ಹಿನ್ನಡೆಯಿಂದ ಅಸಂಘಟಿತ ಕಾರ್ಮಿಕರ ನಿತ್ಯಜೀವನ ದುರ್ಭರವಾಗಿದೆ. ರಾಜ್ಯಾದ್ಯಂತ ಪೌರಕಾರ್ಮಿಕರ ಸಮಸ್ಯೆಗಳು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಇಂದಿಗೂ ಮಲಗುಂಡಿಯಲ್ಲಿ ಬಿದ್ದು ಸಾಯುವ ಪ್ರಕರಣಗಳು ಕೇಳಿಬರುತ್ತಿವೆ. ಈ ಸಮಸ್ಯೆಗಳನ್ನು ವಿರೋಧ ಪಕ್ಷದ ನಾಯಕರು ಪ್ರಸ್ತಾಪಿಸುವುದು, ಮುಖ್ಯಮಂತ್ರಿಯವರೋ ಅಥವಾ ಸಂಬಂಧಪಟ್ಟ ಸಚಿವರೋ ಸಮಜಾಯಿಷಿ ನೀಡುವುದೋ ನಡೆಯುತ್ತಿದೆ. ಇದು ವಿಧಾನಮಂಡಲದ ಕಡತಗಳನ್ನು ಸೇರಿ ಧೂಳು ತಿನ್ನುವುದರಲ್ಲಿ ಕೊನೆಗಾಣುವ ಪ್ರಹಸನಗಳಷ್ಟೆ.

ಸಮಸ್ಯೆಗೆ ಪರಿಹಾರವೇನು ? ರೈತರ ಹೋರಾಟದ ಹಿನ್ನೆಲೆಯನ್ನಾಗಲೀ, ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಕೃಷಿ ಕಾಯ್ದೆಗಳ ದುಷ್ಪರಿಣಾಮಗಳನ್ನಾಗಲೀ ಚರ್ಚಿಸಲಾಗಿದೆಯೇ ? ಕರ್ನಾಟಕದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಲಾಗಿದೆಯೇ ? ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಮತ್ತು ಗೋ ಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಚರ್ಚೆ ನಡೆದಿದೆಯೇ ? ಇವೆಲ್ಲವೂ ರಾಜ್ಯದ ಸಮಸ್ತ ಜನತೆಯನ್ನು ಕಾಡುವ ಜ್ವಲಂತ ಸಮಸ್ಯೆಗಳಲ್ಲವೇ ? ಗೋ ಹತ್ಯೆ ನಿಷೇಧದಿಂದ ರೈತರು ತಮ್ಮ ನಿರುಪಯೋಗಿ ಜಾನುವಾರುಗಳನ್ನು ಮಾರಾಟ ಮಾಡಲಾಗದೆ ಪರಿತಪಿಸುತ್ತಿರುವುದು ಸಾಮಾಜಿಕ ತಾಣಗಳಲ್ಲಿ ಕಂಡುಬರುತ್ತಿದೆ.

ಈ ಗಂಭೀರ ಸಮಸ್ಯೆಗಳ ಆಳ ಮತ್ತು ವ್ಯಾಪ್ತಿಯನ್ನು ಗ್ರಹಿಸುವ ವ್ಯವಧಾನ ನಮ್ಮ ಜನಪ್ರತಿನಿಧಿಗಳಲ್ಲಿ ಇದ್ದಿದ್ದರೆ ಅಧಿವೇಶನವನ್ನು ಮತ್ತಷ್ಟು ದಿನ ವಿಸ್ತರಿಸಬೇಕಿತ್ತು. ರಾಜ್ಯದ ಜನತೆ ಈ 224 ಶಾಸಕರನ್ನು ಆಯ್ಕೆ ಮಾಡಿ ಕಳಿಸುವುದು ಪವಿತ್ರ ವಿಧಾನಮಂಡಲದಲ್ಲಿ ಸೀರೆ, ಪಂಚೆ, ಸಿ ಡಿ, ರೆಸಾರ್ಟ್, ಲಾಡ್ಜ್ ಗಳ ಬಗ್ಗೆ ಚರ್ಚೆ ಮಾಡುವುದಕ್ಕಲ್ಲ. ಒಂದು ಸಿ ಡಿ ಪ್ರಕರಣ, ಒಬ್ಬ ಸಚಿವರ ಅನೈತಿಕ ನಡತೆಯ ಪ್ರಸಂಗ ಇಡೀ ಕಲಾಪವನ್ನು ನುಂಗಿಹಾಕುತ್ತದೆ ಎಂದರೆ ನಮ್ಮ ಜನಪ್ರತಿನಿಧಿಗಳು ಎಷ್ಟು ಹೊಣೆಗೇಡಿಗಳಾಗಿರಬೇಕು. ತಾವು ನಿಂತು ಮಾತನಾಡುವ ವಿಧಾನಮಂಡಲದ ನೆಲದಲ್ಲಿ ಒಂದು ಸಾಂವಿಧಾನಿಕ ಪಾವಿತ್ರ್ಯತೆ ಇದೆ ಎನ್ನುವ ಪರಿಜ್ಞಾನವಾದರೂ ಶಾಸಕರ ಮಹೋದಯರಲ್ಲಿ ಇರಬೇಕಲ್ಲವೇ ?

ಸಾರ್ವಜನಿಕ ಜೀವನದಲ್ಲಿ ಸಚ್ಚಾರಿತ್ರ್ಯದಿಂದ ಬದುಕುವುದು ವ್ಯಕ್ತಿಗತ ನೈತಿಕತೆಯ ಪ್ರಶ್ನೆ. ಊಳಿಗಮಾನ್ಯ ವ್ಯವಸ್ಥೆಯ ಸಂತತಿಯಿಂದಲೇ ಬೆಳೆದು ಬಂದ ಭಾರತದ ರಾಜಕಾರಣಿಗಳ ದಂಡು ಇನ್ನೂ ಸಹ ಅದೇ ಪಿತೃಪ್ರಧಾನ ಧೋರಣೆಯನ್ನೇ ಹೊದ್ದುಕೊಂಡು ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾರಾಜಿಸುತ್ತಿದೆ. ಹಾಗಾಗಿ ಆ ವ್ಯವಸ್ಥೆಯಲ್ಲಿದ್ದ ಮನೋವೃತ್ತಿ, ಮನೋಭಾವ ಮತ್ತು ಮನಸ್ಥಿತಿಗಳು ಇನ್ನೂ ಮುಂದುವರೆದಂತೆ ಕಾಣುತ್ತದೆ. ಸಂವಿಧಾನಕ್ಕೆ ಬದ್ಧರಾಗಿ, ಮತದಾರ ಪ್ರಭುಗಳಿಗೆ ಬದ್ಧರಾಗಿ, ಪ್ರಜಾತಂತ್ರ ಮೌಲ್ಯಗಳಿಗೆ ನಿಷ್ಠೆಯಿಂದ ಇರುವವರಾದರೆ ತಮ್ಮ ವಿರುದ್ಧ ಒಂದು ಕಳಂಕಪ್ರಾಯ ಆರೋಪ ಕೇಳಿಬಂದರೆ ರಾಜೀನಾಮೆ ನೀಡಬೇಕು. ಆದರೆ ಅಧಿಕಾರ ರಾಜಕಾರಣ ಮತ್ತು ಜಾತಿ ರಾಜಕಾರಣದ ಬಲದಿಂದ ಭ್ರಷ್ಟತೆಯೊಂದಿಗೇ ಭಂಡತನವನ್ನೂ ಬೆಳೆಸಿಕೊಂಡಿರುವ ನಮ್ಮ ಜನಪ್ರತಿನಿಧಿಗಳು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲೇ ಸಮಗ್ರವಾಗಿ ಬೆತ್ತಲಾಗುತ್ತಿದ್ದಾರೆ. ಆರೋಗ್ಯ (?) ಮತ್ತು ಕುಟುಂಬ ಕಲ್ಯಾಣ (!!!) ಸಚಿವ ಡಾ ಸುಧಾಕರ್‍ಗೆ ಧನ್ಯವಾದ ಹೇಳಬೇಕು.

ಆದರೆ ಜನತೆಗೆ ಇದು ಮನರಂಜನೆಯಾಗಿ ಕಾಣುತ್ತದೆ. ನಮ್ಮ ರಾಜಕೀಯ ವ್ಯವಸ್ಥೆಯ ಬಗ್ಗೆ ಅಸಹ್ಯ ಮೂಡಿಸಲು ನೆರವಾಗುತ್ತದೆ. ವಿಧಾನಮಂಡಲದ ಅಧಿವೇಶನ ಈ ಮನರಂಜನೆಯ ಭೂಮಿಕೆ ಆಗಬಾರದು. ಇಲ್ಲಿ ರಾಜ್ಯದ ಏಳು ಕೋಟಿ ಜನತೆಯ ಭವಿಷ್ಯ ಚರ್ಚೆಯಾಗಬೇಕು. ಇದು ಸಾಧ್ಯವಾಗಬೇಕಾದರೆ ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು. ಇಲ್ಲವಾದರೆ ಲಜ್ಜೆಗೆಟ್ಟ ರಾಜಕಾರಣಕ್ಕೆ ಕರ್ನಾಟಕವೇ ಕರ್ಮಭೂಮಿಯಾಗಿಬಿಡುತ್ತದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು