ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ ನಿಧನ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕಲ್ಬುರ್ಗಿ : ನಾಡಿನ ಹಿರಿಯ ಸಾಹಿತಿ, ಚಿಂತಕ
ಪ್ರೊ. ವಸಂತ ಕುಷ್ಟಗಿ (85) ಅವರು ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.

ರಕ್ತದೊತ್ತಡ ಕಡಿಮೆಯಾಗಿದ್ದ ಕಾರಣದಿಂದ ವಾರದ ಹಿಂದಷ್ಟೆ ಗುಲಬರ್ಗಾದ ಹಾರ್ಟ್‌ ಫೌಂಡೇಷನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದರು.

ಪ್ರೊ.ವಸಂತ ಕುಷ್ಟಗಿ ಅವರು 60ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಅವರು, ದಾಸ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಕೃಷಿ ಅನನ್ಯ . ಪ್ರಾಧ್ಯಾಪಕ, ಸಾಹಿತಿ, ಲೇಖಕ, ಪತ್ರಕರ್ತ, ವಿದ್ವಾಂಸ, ವಿಮರ್ಶಕ, ಭಾಷಾಜ್ಞಾನಿ, ಹೋರಾಟಗಾರ ಹೀಗೆ ಬಹುಮುಖ ಪ್ರತಿಭೆ ಹೊಂದಿದ್ದ ಅವರದ್ದು ವಿಶಿಷ್ಟ ವ್ಯಕ್ತಿತ್ವ, ಕತೆ, ಕವನ, ದಾಸ ಸಾಹಿತ್ಯ, ನಾಟಕ, ಲೇಖನ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಅವರು ಕಲ್ಯಾಣ ಕರ್ನಾಟಕ ಭಾಗದ ಭಾಷೆಗೆ ಗಟ್ಟಿ ನೆಲೆ ತಂದುಕೊಟ್ಟಿದ್ದಾರೆ. ಬೀದರ್ ಸೇರಿದಂತೆ ಹಲವು ಕಡೆ ಕಾಲೇಜುಗಳಲ್ಲಿ ಅವರು ತಮ್ಮ ವೃತ್ತಿ ಜೀವನ ನಡೆಸಿದ್ದರು.

ದಿವಂಗತ ಎನ್‌.ಧರ್ಮಸಿಂಗ್‌ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು. ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕಲಬುರ್ಗಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಳ್ಳಲು ಪ್ರೊ.ವಸಂತ ಕುಷ್ಟಗಿ ಅವರ ಹೆಸರೂ ಮುಂಚೂಣಿಯಲ್ಲಿತ್ತು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮರಾಠಿ, ತೆಲಗು, ಉರ್ದು ಭಾಷೆಗಳ ಒತ್ತಡದ ನಡುವೆಯೂ ಕನ್ನಡ ಅಸ್ಮಿತೆಯನ್ನು ಉಳಿಸಿ, ಬೆಳೆಸುವಲ್ಲಿ ಅವರ ಕೊಡುಗೆ ದೊಡ್ಡದು. ಸಾಹಿತ್ಯ, ಐತಿಹಾಸಿಕ ಚಟುವಟಿಕೆ, ಹೋರಾಟಗಳು, ಚಾರಿತ್ರಿಕ ಘಟನೆಗಳಲ್ಲಿ ಅವರ ಹೆಸರು ಯಾವಾಗಲೂ ಮುಂದಿರುತ್ತಿತ್ತು. ಕನ್ನಡ ನಾಡು ನುಡಿ ಸಂಸ್ಕೃತಿ ಉಳಿವಿಗಾಗಿ ಹಗಲಿರುಳು ಶ್ರಮಿಸಿದ ಶ್ರೇಯಸ್ಸು ಅವರದ್ದಾಗಿತ್ತು.

ನಾಡಿನ ಉದ್ದಗಲಕ್ಕೂ ಅಪಾರ ಶಿಷ್ಯ ಬಳಗ ಹಾಗೂ ಸಾಹಿತ್ಯಾಭಿಮಾನಿಗಳನ್ನು ಅವರು ಹೊಂದಿದ್ದಾರೆ. ಹಿರಿಯ ಸಾಹಿತಿಗಳ ನಿಧನದಿಂದ ಕನ್ನಡ ಸಾಹಿತ್ಯ ಬಡವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು