ಹಿರಿಯ ಸಾಹಿತಿ ಮಮ್ತಾಜ್ ಬೇಗಂ ನಿಧನ | ‘ಸೂರ್ಯಾಸ್ತ’ ಎನ್ನುವ ಕೊನೆಯ ಕೃತಿ ಇತ್ತೀಚೆಗಷ್ಟೇ ಬಿಡುಗಡೆಗೊಂಡಿತ್ತು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಉಡುಪಿ: ಹಿರಿಯ ಸಾಹಿತಿ ಮಮ್ತಾಜ್ ಬೇಗಮ್ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕೊರೋನಾ ಸೋಂಕು ತಗುಲಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ‘ಸೂರ್ಯಾಸ್ತಎನ್ನುವ ತಮ್ಮ ಕೃತಿ ಬಿಡುಗಡೆಗೊಳಿಸಲು ಉಡುಪಿಗೆ ಬಂದಿದ್ದಾಗ ಕೊರೋನಾ ಸೋಂಕು ತಗುಲಿತ್ತು ಎಂದು ಹೇಳಲಾಗಿದೆ.

ಕಳೆದ ಐದು ದಶಕಗಳಿಂದ ಸಾಹಿತ್ಯ ಮತ್ತು ಬರಹ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದ ಬೇಗಂ, ಅತ್ತಿಮಬ್ಬೆ, ಚೆನ್ನಶ್ರೀ, ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಗ್ರಂಥ ಬಹುಮಾನ ಸೇರಿದಂತೆ ಹತ್ತು ಹಲವು ಗೌರವವನ್ನು ತಮ್ಮ ಮುಡಿಗೇರಿಸಿದ್ದರು.

1948 ಡಿಸೆಂಬರ್‌ 21ರಂದು ಹುಟ್ಟಿದ ಇವರು ತಮ್ಮ ಇಳಿವಯಸ್ಸಿನಲ್ಲಿ ಕಂಪ್ಯೂಟರ್ ಕಲಿಯುವ ಸಾಧನೆ ಮಾಡಿದ್ದರು. ಜೊತೆಗೆ ಅನಿಮೇಷನ್‌ ಕೋರ್ಸನ್ನೂ ಮುಗಿಸಿದ್ದರು. ಇವರಿಗೆ ಕನ್ನಡ, ಉರ್ದು, ಹಿಂದಿ, ಇಂಗ್ಲಿಷ್‌ ಭಾಷಾ ಸಾಹಿತ್ಯದ ಅಪಾರವಾದ ಓದಿನ ಹಿನ್ನೆಲೆಯಿದ್ದು, ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಬರೆಯುತ್ತಿದ್ದರು.

ಮಮ್ತಾಜ್ ಅವರ ತಂದೆ ಮಹಮ್ಮದ್‌ ಇಸ್ಹಾಖ್‌ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು. ಕಾಲದಲ್ಲಿ ಅವರ ಊರಿನಲ್ಲಿ ಹತ್ತನೆಯ ತರಗತಿ ಮುಗಿಸಿದ ಪ್ರಥಮ ಮುಸ್ಲಿಂ ಹೆಣ್ಣು ಮಗಳು ಇವರೇ ಆಗಿದ್ದರು. ಇವರ ತಾಯಿಗಿದ್ದ ಸಾಹಿತ್ಯದ ಕಡೆಗಿನ ಒಲವು ಇವರಗೂ ಪ್ರೇರಣೆಯಾಗಿ, ವಿದ್ಯಾರ್ಥಿ ಜೀವನದಲ್ಲೇ ಸಾಹಿತ್ಯಿಕ ಗೀಳನ್ನು ಅಂಟಿಸಿಕೊಂಡಿದ್ದರು ಮತ್ತು ಹಲವು ಪತ್ರಿಕೆಗಳಿಗೂ ಬರೆಯುತ್ತಿದ್ದರು.

ಮದುವೆಯಾದ ಹೊಸತರಲ್ಲಿ ಕತರ್ ದೇಶಕ್ಕೂ ಹೋಗಿ, ಬ್ಯಾಂಕೊಂದರಲ್ಲಿ ಸೇವೆ ಸಲ್ಲಿಸಿದ್ದಾರೆ. 2017 ರಿಂದ 2019 ರ ವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ವಿದೇಶದಿಂದ ಮರಳಿ ಮತ್ತೆ ಕಾನೂನು ಕ್ಷೇತ್ರದಲ್ಲಿ ಅಧ್ಯಯನ ನಡೆಸಿ, ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಯಲ್ಲಿ ಐದು ವರ್ಷ ಸೇವೆ ಸಲ್ಲಿಸಿದ್ದರು.

ಅವ್ಯಕ್ತ, ಪರದೇಶಿ, ವರ್ತುಲ, ಬಂದಳಿಕೆ, ಚಿಂಪಿ, ಸರ್ವ ಋತುಗಳೂ ನಿನಗಾಗಿ, ಅಂಕುರ ಹೀಗೆ ಸಾಕಷ್ಟು ಕೃತಿಗಳನ್ನು ರಚಿಸಿರುವ ಇವರ ನಿಧನಕ್ಕೆ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ ಮತ್ತು ಅಪಾರ ಸಂಖ್ಯೆಯ ಪ್ರೀತಿ ಪಾತ್ರರನ್ನು ಅಗಲಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು