ನವದೆಹಲಿ(09-10-2020): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಹಾಯಕ ಶ್ಯೋರಾಜ್ ಜೀವನ್ ವಿರುದ್ಧ ದೇಶದ್ರೋಹ ಆರೋಪದಡಿ ಹತ್ರಾಸ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಾಮೂಹಿಕ ಅತ್ಯಾಚಾರಕ್ಕೊಳಗಾದ 19 ವರ್ಷದ ದಲಿತ ಮಹಿಳೆ ಸಾವನ್ನಪ್ಪಿದ ಪ್ರಕರಣದಲ್ಲಿ ಜೀವನ್ ಹತ್ರಾಸ್ನಲ್ಲಿ ಗಲಭೆಗೆ ಪ್ರಚೋದಿಸಿದ್ದಾರೆಂದು ಯೋಗಿ ಪೊಲೀಸರು ಈ ಪ್ರಕರಣವನ್ನು ದಾಖಲಿಸಿದ್ದಾರೆ.
ಬಂಧನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜೀವನ್, ನಾನು ದಂಗೆಕೋರನಲ್ಲ. ಕೋಮು ಸೌಹಾರ್ದತೆಗೆ ಒತ್ತು ಕೊಟ್ಟು ನಾನು ಸಂಪೂರ್ಣ ಜೀವನ ನಡೆಸಿದ್ದೇನೆ. ಕಳೆದ 40 ವರ್ಷಗಳಿಂದ ನಾನು ಜನರ ಸೇವೆಯಲ್ಲಿದ್ದೇನೆ ಮತ್ತು ನನ್ನ ವಿರುದ್ಧ ಒಂದೇ ಒಂದು ಎಫ್ಐಆರ್ ದಾಖಲಾಗಿಲ್ಲ. ನನ್ನನ್ನು ಭಾರತದ ಅತಿದೊಡ್ಡ ದೇಶದ್ರೋಹಿ ಮಾಡಿದಕ್ಕಾಗಿ ಧನ್ಯವಾದಗಳು ಎಂದು ಅವರು ಮಾಧ್ಯಮಗಳಿಗೆ ಹೇಳಿದರು.
ತಮ್ಮ ಸರ್ಕಾರವು ಯಾವುದೇ ಸಂಚುಕೋರರನ್ನು ಬಿಡುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಯಾರು ಪ್ರಯತ್ನಿಸುತ್ತಿದ್ದಾರೆ? ಅದೇ ಮುಖಗಳು ಮುಝಫರ್ಪುರ್ ಗಲಭೆಗೆ ಕಾರಣವಾಗಿದ್ದವು ಮತ್ತು ಸ್ಥಳೀಯ ಉದ್ಯಮಿಗಳನ್ನು ವಲಸೆ ಹೋಗುವಂತೆ ಒತ್ತಾಯಿಸಿದ್ದವು. ಈಗ ಅವರು ಅದನ್ನು ಮತ್ತೆ ಪುನರಾವರ್ತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.