ಹರಿಹರ(12-12-2020): ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ಆರೋಗ್ಯಾಧಿಕಾರಿ ಕಛೇರಿ ಎದುರು ಏಕಾಂಗಿಯಾಗಿ ಧರಣಿ ನಡೆಸುತ್ತಿದ್ದ ಹರಿಹರದ ಕೋವಿಡ್ ವಾರಿಯರ್ ಅಬ್ದುಲ್ ಖಾಲಖ್ ಪ್ರತಿಭಟಿಸುತ್ತಿದ್ದ ಸ್ಥಳಕ್ಕೆ ಹರಿಹರದ ಶಾಸಕರಾದ ರಾಮಪ್ಪ ಭೇಟಿ ನೀಡಿದರು. ಧರಣಿಯನ್ನು ಕೈ ಬಿಡುವಂತೆ ಗುತ್ತಿಗೆ ಆಧಾರಿತ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಅಬ್ದುಲ್ ಖಾಲಿಖರ ಮನವೊಲಿಸುವಲ್ಲಿ ಅವರು ಯಶಸ್ವಿಯಾದರು.
ಕೋವಿಡ್ ವಾರಿಯರ್ಸಿಗೆ ಮೂರು ದಿನಕ್ಕೆ ಒಂದು ಮಾಸ್ಕಿನಂತೆ ಕೊಡುತ್ತಿದ್ದಾರೆ. ನವೆಂಬರ್ ಒಂದರಿಂದ ಡಿ ಗ್ರೂಪ್ ನೌಕರರನ್ನು ತೆಗೆದು ಹಾಕಿದ್ದಾರೆ. 13ನೇ ತಾರೀಕಿನಿಂದ ಮದ್ಯಾಹ್ನದ ಊಟನೂ ಕೊಡುತ್ತಿಲ್ಲ. ಮೂರು ತಿಂಗಳಿನಿಂದ ಸಂಬಳ ಕೊಟ್ಟಿಲ್ಲ. ಈ ತಿಂಗಳ ಏಳನೇ ತಾರೀಕಿನಿಂದ ವಾಹನ ಸೌಲಭ್ಯವನ್ನು ನಿಲ್ಲಿಸಲಾಗಿದೆ. ಅಪಾಯಿಂಟ್ಮೇಟ್ ಆರ್ಡರ್ ಪ್ರಕಾರ ಪರ್ ಸ್ವಾಬ್ ಇನ್ಸೆಂಟಿವ್ ಕೊಡುತ್ತಿಲ್ಲ. ಇತ್ಯಾದಿ ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಅವರು ಧರಣಿ ಕೈಗೊಂಡಿದ್ದರು.
ಮುಂದಿನ ತಿಂಗಳ ಒಳಗಾಗಿ ಸಂಪೂರ್ಣ ಸಂಬಳ ನೀಡದಿದ್ದರೆ ಸಾಮೂಹಿಕ ರಾಜೀನಾಮೆ ನೀಡಲಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಅವರು ಸಂಬಂಧಪಟ್ಟವರಿಗೆ ಎಚ್ಚರಿಕೆ ಕೊಟ್ಟರು.
ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರದ ಶಾಸಕ ರಾಮಪ್ಪ ಅವರು ಡಿಎಚ್ಓ ಅವರಿಗೆ ಪೋನ್ ಮೂಲಕ ಮಾತನಾಡಿ ಆದಷ್ಟು ಬೇಗನೇ ಸಂಬಳ ಕೊಡಿಸಬೇಕೆಂದು ಹೇಳಿದರು. ಸರಕಾರ ಈ ರೀತಿ ಸಂಬಳ ಕೊಡದೆ ನೌಕರರನ್ನು ದುಡಿಸಿಕೊಳ್ಳುವುದು ಸರಿಯಲ್ಲ ಎಂದ ಶಾಸಕರು ಸ್ಥಳದಲ್ಲೇ ಇದ್ದ ಟಿಎಚ್ಓ ಡಾಕ್ಟರ್ ಚಂದ್ರ ಮೋಹನ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಕೆಳಹಂತದ ಕಾರ್ಮಿಕರಿಂದ ದುಡಿಸಿಕೊಳ್ಳುವ ಮೇಲಾಧಿಕಾರಿಗಳು ಅವರ ಸಂಬಳ ತರಿಸಿಕೊಡಲು ನಿರ್ಲಕ್ಷ್ಯ ತೋರಬಾರದು ಎಂದರು. ಪ್ರಸಕ್ತ ಬಿಜೆಪಿ ಸರಕಾರ ಜನರಿಗೆ ಹೊಟ್ಟೆ ತುಂಬಾ ಊಟ ನೀಡಿ ಎಂದರೆ ಗೋಹತ್ಯೆ ನಿಷೇಧ, ರೈತ ವಿರೋಧೀ ಕಾನೂನು ಮತ್ತು ಸಾರಿಗೆ ನೌಕರರ ಶೋಷಣೆ ಯಲ್ಲಿ ತೊಡಗಿದೆ ಎಂದರು.
ಶಾಸಕ ರಾಮಪ್ಪ ಅವರ ಮಾತಿಗೆ ಮನ್ನಣೆ ಕೊಟ್ಟ ಅಬ್ದುಲ್ ಖಾಲಖ್ ಟಿಎಚ್ಓ ಚಂದ್ರ ಮೋಹನ್ ಸಮ್ಮುಖದಲ್ಲಿ ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾದರು
ಪ್ರತಿಭಟನೆಯನ್ನು ಯೂತ್ ಕಾಂಗ್ರೆಸ್ ನ ಅಬ್ದುಲ್ ರಜಾಕ್ ಟಿ. ಮಜೀದ್ ಖಾನ್ ಏಚ್. ಮತ್ತು ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ಆಬಿದ್ ಅಲಿ, ಬಾಬುಲಾಲ್, ಸಾರಿಗೆ ನೌಕರರು, ರೈತಸಂಘಗಳು, ಕನ್ನಡ ಪರ ಸಂಘಟನೆಗಳು ಬೆಂಬಲಿಸಿದ್ದವು. ಆಮ್ ಆದ್ಮಿ ಪಾರ್ಟಿಯ ಆದಿಲ್ ಖಾನ್ ಕರ್ನಾಟಕ ಸೋಷಿಯಲ್ ಸರ್ವೀಸ್ ಸಂಘಟನೆ ಹಯಾತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.