ಸೌದಿಅರೇಬಿಯಾ(09-10-2020): ಮುಂದಿನ ಸಲದ ಹಜ್ ಯಾತ್ರೆಯಲ್ಲಿ ಎಲ್ಲಾ ಯಾತ್ರಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆಯಾಗಲಿದೆ. ಜೊತೆಗೆ ಉಮ್ರಾ ಯಾತ್ರಿಕರ ಆರೋಗ್ಯ ಕಾಪಾಡಿಕೊಳ್ಳಲು ಕಟ್ಟುನಿಟ್ಟಿನ ವಿಧಾನಗಳನ್ನು ಅನುಸರಿಸುವುದಾಗಿ ಹರಮುಗಳ ಕಛೇರಿ ಹೇಳಿದೆ. ಪವಿತ್ರ ಯಾತ್ರೆಗಳ ಸಮಯದಲ್ಲಿ ಮಾಸ್ಕ್ ಧರಿಸುವುದು ಧಾರ್ಮಿಕಾಗಿಯೂ ಯಾವುದೇ ತಪ್ಪಿಲ್ಲವೆಂದು ಗ್ರಾಂಡ್ ಮುಫ್ತಿ ಹೇಳಿದರು.
ಕಳೆದ ಬಾರಿ ಪ್ರಾಯೋಗಿಕವಾಗಿ ಐವತ್ತು ಸಾವಿರ ಸ್ಮಾರ್ಟ್ ಕಾರ್ಡುಗಳನ್ನು ಯಾತ್ರಿಕರಿಗೆ ಹಂಚಲಾಗಿತ್ತು. ಮುಂದಿನ ಸಲದ ಹಜ್ ಯಾತ್ರೆಯ ಸಮಯದಲ್ಲಿ ಇದನ್ನು ಎಲ್ಲಾ ಯಾತ್ರಿಕರಿಗೂ ಹಂಚಲಿದ್ದೇವೆ ಎಂದು ಹಜ್ ಉಮ್ರಾ ಸಹಾಯಕ ಸಚಿವ ಅಬ್ದುಲ್ ಫತ್ತಾಹ್ ಬಿನ್ ಸುಲೈಮಾನ್ ಮಶತ್ ಹೇಳಿದರು. ಸ್ಮಾರ್ಟ್ ಕಾರ್ಡುಗಳು ಯಾತ್ರಿಕರ ವೈಯಕ್ತಿಕ ಮಾಹಿತಿ, ತಂಗುವ ಸ್ಥಳ, ಆರೋಗ್ಯ ಸಂಬಂಧಿ ವಿಚಾರಗಳು ಇತ್ಯಾದಿಗಳನ್ನು ಒಳಗೊಂಡಿರುತ್ತವೆ. ಯಾತ್ರಿಕರ ಪ್ರತಿಯೊಂದು ಚಲನವಲನಗಳನ್ನು ಗಮನಿಸಿ, ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಲು ಇದು ಸಹಕಾರಿಯಾಗಿದೆ. ವಿವಿಧ ದೇಶಗಳಿಂದ ಬರುವ ಯಾತ್ರಿಕರು ಕೆಲವೊಮ್ಮೆ ದಾರಿತಪ್ಪಿ ಎಲ್ಲೆಲ್ಲಿಗೋ ತಲುಪಿರುತ್ತಾರೆ. ಅಂಥವರಿಗೂ, ಬೇರೆ ಯಾವುದಾದರೂ ಸಂಕಷ್ಟಕ್ಕೆ ಸಿಲುಕಿದ ಯಾತ್ರಿಕರಿಗೂ ಇದು ಪ್ರಯೋಜನಕಾರಿಯಾಗಿದೆ.
ಉಮ್ರಾ ಯಾತ್ರೆ ಆರಂಭಗೊಂಡ ನಾಲ್ಕು ದಿವಸದಲ್ಲೇ ಹಲವು ಜನರು ಉಮ್ರಾ ಮಾಡಿರುವುದಾಗಿ ಹರಮುಗಳ ಕಛೇರಿ ತಿಳಿಸಿದೆ. ಉಮ್ರಾ ಸಮಯದಲ್ಲಿ ಯಾರಿಗಾದರೂ ಕೋರೋನಾ ಲಕ್ಷಣಗಳು ಕಂಡು ಬಂದರೆ, ಅವರ ಬಗ್ಗೆ ನಿಗಾ ವಹಿಸಲು ನಾಲ್ಕು ಐಸಲೇಷನ್ ಕ್ಯಾಂಪುಗಳು ಕಾರ್ಯನಿರ್ವಹಿಸುತ್ತಿವೆ.
ಇಹ್ರಾಮಿನಲ್ಲಿರುವ ಯಾತ್ರಿಕರು ಮಾಸ್ಕ್ ಧರಿಸುವುದು ಪಾಪವಲ್ಲವೆಂದೂ, ಅದಕ್ಕಾಗಿ ಪಾಪ ಕ್ಷಮಾಪಣೆ ನಡೆಸುವ ಅಗತ್ಯವಿಲ್ಲವೆಂದು ಸೌದಿ ಗ್ರ್ಯಾಂಡ್ ಮುಫ್ತಿ ಶೈಖ್ ಅಬ್ದುಲ್ ಅಝೀಝ್ ಅಲ್ ಶೈಖ್ ಹೇಳಿದರು. ಯಾತ್ರಿಕರ ಆರೋಗ್ಯದ ದೃಷ್ಟಿಯಿಂದ ಮತ್ತು ಧಾರ್ಮಿಕ ಸಂಶಯ ನಿವಾರಣೆಯ ಉದ್ದೇಶವನ್ನಿಟ್ಟು ಅವರ ಈ ಹೇಳಿಕೆ ಹೊರ ಬಿದ್ದಿದೆ.