ಗಲ್ಫ್ ನ್ಯೂಸ್(03-10-2020): ಯುಎಇ ಮಾರ್ಗವಾಗಿ ಕುವೈತಿಗೆ ಪ್ರಯಾಣಿಸಲು ಉದ್ದೇಶಿಸಿದ ಅನಿವಾಸಿಗಳು ಯುಎಇಯಲ್ಲಿ ಅಡಕತ್ತರಿಯಲ್ಲಿ ಸಿಲುಕಿರುವ ಘಟನೆ ವರದಿಯಾಗಿದೆ.
ಭಾರತವೂ ಸೇರಿ 33 ದೇಶಗಳಿಂದ ಕುವೈತಿಗೆ ನೇರವಾಗಿ ಪ್ರಯಾಣಿಸಲು ನಿಷೇಧವಿದೆ. ಇದಕ್ಕಾಗಿ ಅನಿವಾಸಿಗಳು ಯುಎಇ ಮಾರ್ಗವಾಗಿ ಕುವೈತಿಗೆ ಪ್ರಯಾಣಿಸುತ್ತಿದ್ದಾರೆ. ಆದರೆ ಯುಎಇ ಯಿಂದ ಕುವೈತಿಗೆ ಹೋಗುವ ವಿಮಾನ ಟಿಕಟಿನ ದರವು ಏಕಾಏಕಿ ಅಸಹಜ ಏರಿಕೆ ಕಂಡ ಹಿನ್ನೆಲೆಯಲ್ಲಿ ಇದೀಗ ಪ್ರಯಾಣಿಕರು ಅತಂತ್ರಗೊಂಡಿದ್ದಾರೆ. ಐನೂರರಿಂದ ಏಳು ನೂರು ದಿರ್ಹಮುಗಳಿಗೆ ದೊರೆಯುತ್ತಿದ್ದ ವಿಮಾನ ಟಿಕೆಟು ಇದೀಗ ಸುಮಾರು ನಾಲ್ಕು ಸಾವಿರದಿಂದ ಆರು ಸಾವಿರದವರೆಗೂ ಅಚ್ಚರಿಯ ಏರಿಕೆ ಕಂಡಿದೆ!
ಕೋವಿಡ್ ಸುರಕ್ಷತಾ ಕ್ರಮಗಳ ಭಾಗವಾಗಿ, ಯುಎಇಯಿಂದ ಕುವೈತಿಗೆ ಹೋಗುತ್ತಿರುವ ಹೆಚ್ಚಿನೆಲ್ಲಾ ವಿಮಾನಗಳು ಐವತ್ತು ಶೇಕಡಾ ಪ್ರಯಾಣಿಕರನ್ನಷ್ಟೇ ಹೊತ್ತು ಕೊಂಡು ಹೋಗಲು ತೊಡಗಿದೆ. ಅಲ್ಲದೇ ಕುವೈತಿನಲ್ಲಿ ಕಾರ್ಯಾಚರಿಸುತ್ತಿರುವ ಫಿಲಿಪ್ಪೀನ್ಸ್ ಮತ್ತು ಇಥಿಯೋಪಿಯ ದೇಶಗಳ ಕಂಪೆನಿಗಳ ನೂತನ ಕರಾರು ನಿಯಮಗಳ ಕಾರಣದಿಂದಾಗಿ ಆ ಎರಡು ದೇಶಗಳಿಂದ ಯುಎಇ ಮೂಲಕ ಕುವೈತಿಗೆ ಹೋಗುವ ಪ್ರಯಾಣಿಕರ ಸಂಖ್ಯೆಯಲ್ಲೂ ಒಮ್ಮೆಲೇ ಏರಿಕೆ ಕಂಡು ಬಂದಿದೆ. ಹೀಗಾಗಿ ವಿಮಾನ ಟಿಕೆಟುಗಳಿಗೆ ಅನಿರೀಕ್ಷಿತ ಬೇಡಿಕೆ ಬಂದು ಈ ರೀತಿ ದರ ಏರಿಕೆಗೆ ಕಾರಣವಾಗಿದೆ.
ಯುಎಇಯಲ್ಲಿ ಕೋವಿಡ್ ಪರೀಕ್ಷೆಯ ಫಲಿತಾಂಶವು ಶೀಘ್ರವಾಗಿ ಕೈ ಸೇರುತ್ತದೆ. ಅಲ್ಲಿ ತಂಗುವ ಹೋಟೆಲ್ ಕೂಡಾ ಅಷ್ಟೊಂದು ವೆಚ್ಚದಾಯಕವಲ್ಲ. ಈ ಕಾರಣದಿಂದ ಯುಎಇ ಮಾರ್ಗವಾಗಿ ಸಾಗಲು ಎಲ್ಲರಿಗೂ ಸುಲಭವಾಗಿತ್ತು. ಊರಿನಿಂದ ಯುಎಇಗಷ್ಟೇ ಟಿಕೆಟ್ ಪಡೆದು, ಯುಎಇ ಯಲ್ಲಿ ಎರಡು ವಾರಗಳ ಕ್ವಾರಂಟೈನ್ ಅವಧಿ ಮುಗಿಸಿ, ಕುವೈತಿಗೆಂದು ಟಿಕೆಟ್ ಖರೀದಿಸಲು ಹೋದವರಿಗೆ ಈ ದರ ಏರಿಕೆಯ ಶಾಕ್ ಕಾದಿತ್ತು. ಆದರೆ ಊರಿನಿಂದ ಯುಎಇಗೆ ಬರುವಾಗಲೇ ಕುವೈತಿಗೆಂದು ಟಿಕೆಟ್ ಪಡೆದು ಬಂದವರಿಗೆ ಈ ಸಮಸ್ಯೆ ಬಂದಿಲ್ಲ.
ಈ ತಿಂಗಳ ಹದಿನೈದನೇ ತಾರೀಕಿನವರೆಗೂ ಯುಎಇಯಿಂದ ಕುವೈತಿಗೆ ಪ್ರಯಾಣಿಸುವ ವಿಮಾನಗಳ ಆಸನಗಳೆಲ್ಲಾ ಈಗಾಗಲೇ ಭರ್ತಿಯಾಗಿದೆ. ಟಿಕೇಟು ಲಭ್ಯವಿಲ್ಲ. ಆ ನಂತರ ಲಭ್ಯವಿದ್ದರೂ ಕೂಡಾ ದರ ಮಾತ್ರ ಕೈಗೆಟುಕದಷ್ಟು ಏರಿಕೆ ಕಂಡಿದೆ. ಈ ನಡುವೆ ಹಲವು ಪ್ರಯಾಣಿಕರು ಅಲ್ಲಿಂದಲೇ ಭಾರತಕ್ಕೆ ಹಿಂದಿರುಗಿದ್ದಾರೆ. ಕುಟುಂಬ ಸಮೇತವಾಗಿ ಪ್ರಯಾಣಿಸಿದ ಅನಿವಾಸಿಗಳು ಹೆಚ್ಚಿನ ತೊಂದರೆ ಅನುಭವಿಸಿದ್ದು, ಅಲ್ಲಿನ ನಗರ ಜೀವನದ ಖರ್ಚು ವೆಚ್ಚಗಳ ಬಗ್ಗೆ ಭೀತರಾಗಿದ್ದಾರೆ. ಕಳೆದ ಸಲದಂತೆ ಸರಕಾರ ಅಥವಾ ವಿವಿಧ ಸಂಘಸಂಸ್ಥೆಗಳು ಮುಂದೆ ಬಂದು, ಚಾರ್ಟಡ್ ವಿಮಾನವನ್ನು ವ್ಯವಸ್ಥೆಗೊಳಿಸುತ್ತಾರೋ ಅಥವಾ ರಾಜತಾಂತ್ರಿಕ ಪರಿಹಾರವನ್ನು ಕಂಡುಕೊಳ್ಳುತ್ತಾರೋ ಎಂದು ಕಾದು ನೋಡಬೇಕಿದೆ.