ವಿಜಯಪುರ(18-12-2020): ಸೊಸೆ ವಿರುದ್ಧ 72 ವರ್ಷದ ಅತ್ತೆ ಸ್ಪರ್ಧಿಸುವ ಮೂಲಕ ತಾಳಿಕೋಟೆ ಗ್ರಾಮ ಪಂಚಾಯತ್ ಚುನಾವಣೆ ರಾಜ್ಯದ ಗಮನ ಸೆಳೆದಿದೆ.
ತಾಳಿಕೋಟೆ ತಾಲೂಕಿನ ಕೊಡಗಾನೂರ ಲಕ್ಕುಂಡಿ ಗ್ರಾಮ ಪಂಚಾಯತ್ 6ನೇ ವಾರ್ಡು ಮಹಿಳೆಯರಿಗೆ ಮೀಸಲಾಗಿದೆ.
ನಿರ್ಮಲಾ ಬಸನಗೌಡ ಪಾಟೀಲ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದು, ಈಗ ಎರಡನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇನ್ನೊಂದು ಕಡೆ ಅವರ ಅತ್ತೆ ಗಂಗಮ್ಮ, ನಿರ್ಮಲಾಗೆ ಪ್ರತಿಸ್ಪರ್ಧಿಯಾಗಿ ಕಣಕ್ಕೆ ಇಳಿದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಲಾ ಪತಿ ಬಸನಗೌಡ ಪಾಟೀಲ್ ನನ್ನ ಪತ್ನಿಯ ಪ್ರತಿಸ್ಪರ್ಧಿಯಾಗಿ ನಮ್ಮ ದೊಡ್ಡಮ್ಮನನ್ನು ಕಣಕ್ಕಿಳಿಸಿದ್ದಾರೆ. ಇದು ಸೊಸೆ ಮತ್ತು ಅತ್ತೆಯ ನಡುವಿನ ಸ್ಪರ್ಧೆ ಎಂದು ಹೇಳಿದ್ದಾರೆ.
ಇನ್ನು ಚುನಾವಣೆ ಸಮೀಪಿಸುತ್ತಿದ್ದಂತೆ ಹೇಗಾದರೂ ಗೆಲ್ಲಬೇಕೆಂದು ಇಬ್ಬರೂ ಬಿರುಸಿನ ಮತ ಪ್ರಚಾರವನ್ನು ನಡೆಸುತ್ತಿದ್ದಾರೆ. 72 ವರ್ಷದ ವೃದ್ಧೆಯ ಸ್ಪರ್ಧೆಯ ಬಗೆಗಿನ ಆಸಕ್ತಿ ಇಡೀ ರಾಜ್ಯದ ಜನರನ್ನು ತಿರುಗಿ ನೋಡುವಂತೆ ಮಾಡಿದೆ.