ಗ್ರಾಮೀಣ ಪ್ರದೇಶಗಳಿಗೆ ಕೊರೊನಾ ಸೋಂಕು ಹರಡದಂತೆ ಸರ್ಕಾರ ಎಚ್ಚೆತ್ತುಕೊಳ್ಳಲಿ : ಮಾಜಿ ಸಿಎಂ ಸಿದ್ದರಾಮಯ್ಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಕೊರೊನಾ ಸೋಂಕು ತ್ವರಿತ ಗತಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹರಡುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಈಗಿನ ಶೇಕಡಾ 55ರಷ್ಟು ಸೋಂಕಿನ ಪ್ರಕರಣಗಳು ಗ್ರಾಮೀಣ ಪ್ರದೇಶದಿಂದ ವರದಿಯಾಗುತ್ತಿರುವುದನ್ನು ತಜ್ಞರು ಗುರುತಿಸಿದ್ದಾರೆ. ತಿಂಗಳ ಹಿಂದೆ ಈ ಪ್ರಮಾಣ ಶೇಕಡಾ 30 ರಷ್ಟಿತ್ತು.
ರಾಜ್ಯ ಸರ್ಕಾರ ಬೆಂಗಳೂರು ನಗರಕ್ಕಷ್ಟೇ ಸೀಮಿತವಾಗದೆ ಜಿಲ್ಲೆ, ತಾಲೂಕು, ಗ್ರಾಮಗಳ ಕಡೆ ಗಮನಹರಿಸಬೇಕಾಗಿದೆ. ಈಗಲೂ ಕಾಲ ಮಿಂಚಿಲ್ಲ, ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ, ಐಸಿಯು, ವೆಂಟಿಲೇಟರ್ ಮತ್ತು ವೈದ್ಯಕೀಯ ಸಿಬ್ಬಂದಿಯ ವ್ಯವಸ್ಥೆಯನ್ನು ಬಲಪಡಿಸಬೇಕು.
ಜಿಲ್ಲೆಗಳಲ್ಲಿ ಕೊರೊನಾ ಚಿಕಿತ್ಸೆ ಮತ್ತು ನಿಯಂತ್ರಣ ವ್ಯವಸ್ಥೆಯ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ವಹಿಸಿಕೊಡಬೇಕು. ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿಯೇ ಮೊಕ್ಕಾಂ ಹೂಡಿ ಮೇಲ್ವಿಚಾರಣೆ ನಡೆಸುವಂತೆ ತಾಕೀತು ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ‌.

ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ಅನುಸರಿಸಲಾಗಿದ್ದ ಸುರಕ್ಷತಾ ಕ್ರಮಗಳನ್ನು ಎರಡನೇ ಅಲೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಕೂಡಾ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಉಲ್ಭಣಗೊಳ್ಳಲು ಕಾರಣ.

ಕಳೆದ ಒಂದೆರಡು ತಿಂಗಳ ಅವಧಿಯಲ್ಲಿ ಹೆಚ್ಚು ಸೋಂಕಿನ ಪ್ರಕರಣಗಳಿದ್ದ ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳಿಂದ ಜನ ಯಾವುದೇ ತಪಾಸಣೆ, ಪರೀಕ್ಷೆ ಇಲ್ಲದೆ ಕರ್ನಾಟಕಕ್ಕೆ ಬಂದಿದ್ದಾರೆ. ಬೆಂಗಳೂರಿನ ಸ್ಥಿತಿ ಬಿಗಡಾಯಿಸಿದ ನಂತರ ರಾಜಧಾನಿಯಿಂದಲೂ ಜನ ಹಿಂಡುಗಟ್ಟಿಕೊಂಡು ಜಿಲ್ಲೆಗಳಿಗೆ ತೆರಳಿದ್ದಾರೆ. ಅಂತರರಾಜ್ಯ ಮಾತ್ರವಲ್ಲ ಅಂತರಜಿಲ್ಲಾ ಸಂಚಾರವನ್ನು ಕೂಡಾ ನಿರ್ಬಂಧಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬೆಂಗಳೂರು ನಗರಕ್ಕೆ ಹೋಲಿಸಿದರೆ ಜಿಲ್ಲೆಗಳಲ್ಲಿ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯ ತೀವ್ರ ಕೊರತೆಯಿರುವುದು ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿಯೇ ಜಗಜ್ಜಾಹೀರಾಗಿದೆ. 25 ಅಮಾಯಕರನ್ನು ಬಲಿತೆಗೆದುಕೊಂಡ ಚಾಮರಾಜನಗರ ಜಿಲ್ಲೆಯ ದುರಂತ ಘಟನೆಯ ನಂತರವೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು