ಬೆಂಗಳೂರು (4-11-2020): ರಾಜ್ಯದ ಎಲ್ಲಾ ಸರಕಾರೀ ನೌಕರರು ತಮ್ಮ ಕರ್ತವ್ಯದ ವೇಳೆಯಲ್ಲಿ ಐಡಿ ಕಾರ್ಡ್ ಧರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ತವ್ಯದ ವೇಳೆಯಲ್ಲಿ ಅಧಿಕಾರಿಗಳಾಗಲೀ ಇತರ ಸಿಬ್ಬಂದಿಗಳಾಗಲೀ ಆಯಾ ಇಲಾಖೆಯಿಂದ ಪಡೆದ ಐಡಿ ಕಾರ್ಡನ್ನು ಧರಿಸಬೇಕು. ಹಾಗೂ ತಮ್ಮ ಕರ್ತವ್ಯ ನಿರ್ವಹಿಸುವ ಮೇಜಿನ ಮೇಲಿನ ಫಲಕದಲ್ಲಿ ಹೆಸರು ಮತ್ತು ಹುದ್ದೆಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ.
ಸಾರ್ವಜನಿಕರು ತಮ್ಮ ಕೆಲಸಕಾರ್ಯಗಳಿಗಾಗಿ ದಿನ ನಿತ್ಯವೂ ಕಛೇರಿಗಳಿಗೆ ಬರುತ್ತಾರೆ. ತಾವು ಭೇಟಿ ಮಾಡಬೇಕಾದ ಅಧಿಕಾರಿ ಅಥವಾ ಸಿಬ್ಬಂದಿಗಳು ಯಾರು? ಎಲ್ಲಿರುತ್ತಾರೆಂಬ ಮಾಹಿತಿ ಇರುವುದಿಲ್ಲ. ಹೀಗಾಗಿ ಐಡಿ ಕಾರ್ಡ್ ಧರಿಸಿದರೆ ಜನಸಾಮಾನ್ಯರಿಗೆ ಇವುಗಳನ್ನು ಸುಲಭವಾಗಿ ತಿಳಿಯಲು ಅನುಕೂಲವಾಗಲಿದೆ.
ಬ್ಯಾಂಕ್ ಹಾಗೂ ಅಂಚೆ ಕಚೇರಿಯಲ್ಲಿ ನಮೂದಿಸಿರುವಂತೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯದ ವೇಳೆಯಲ್ಲಿ ಅಧಿಕಾರಿಗಳು/ಸಿಬ್ಬಂದಿಗಳು ಕಡ್ಡಾಯವಾಗಿ ಇಲಾಖೆಯಿಂದ ಪಡೆದ ಗುರುತಿನ ಚೀಟಿ (ಐಡಿ ಕಾರ್ಡ್ ) ಧರಿಸುವುದರ ಜೊತೆಗೆ ನಾಮಫಲಕ ಅಳವಡಿಸಬೇಕು ಎಂದು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್.ಸಿ ಹರ್ಷರಾಣಿ ಹೊರಡಿಸಿದ ಸುತ್ತೋಲೆಯಲ್ಲಿ ಆದೇಶಿಸಲಾಗಿದೆ.