ನವದೆಹಲಿ(8-11-2020): ಕೊರೋನಾ ನೆಗೆಟಿವ್ ಪ್ರಮಾಣಪತ್ರದೊಂದಿಗೆ ವಿದೇಶದಿಂದ ಬರುವವರಿಗಿನ್ನು ಕ್ವಾರೈಂಟೈನಿನ ಅಗತ್ಯವಿಲ್ಲ. ಪ್ರಯಾಣಕ್ಕೆ 72 ಗಂಟೆಗಳ ಮೊದಲು RT-PCR ಪರೀಕ್ಷೆಯು ನಡೆಸಿರಬೇಕಾಗುತ್ತದೆ. ಈ ರೀತಿ ಕೇಂದ್ರ ಆರೋಗ್ಯ ಇಲಾಖೆಯು ಈ ಮೊದಲು ಪ್ರಕಟಿಸಿದ ಕೊರೋನಾ ಮಾರ್ಗಸೂಚಿಗಳಲ್ಲಿ ಕೆಲವು ಮಹತ್ವದ ವ್ಯತ್ಯಾಸಗಳನ್ನು ಮಾಡಿದೆ.
RT-PCR ಪ್ರಮಾಣಪತ್ರ ಸೌಲಭ್ಯವಿರದ ದೇಶಗಳಿಂದ ಬಂದಿರುವುದಾದರೆ, ಅಂತಹ ಸೌಲಭ್ಯವಿರುವ ವಿಮಾನನಿಲ್ದಾಣಗಳಲ್ಲಿ ಬಂದಿಳಿದು, ಅಲ್ಲಿ ಪರೀಕ್ಷೆ ನಡೆಸಬಹುದು. ಅಲ್ಲಿ ಕೊರೋನಾ ನೆಗೆಟಿವ್ ಫಲಿತಾಂಶ ಬಂದರೆ, ಅಂಥವರಿಗೂ ಕ್ವಾರೈಂಟೈನಿನಲ್ಲಿರಬೇಕಾದ ಅಗತ್ಯ ಬರುವುದಿಲ್ಲ.
ಕೊರೋನಾ ನೆಗೆಟಿವ್ ಪ್ರಮಾಣಪತ್ರವನ್ನು ಹೊಂದಿರದಿದ್ದರೆ, ಏಳು ದಿವಸಗಳ ಸಾಂಸ್ಥಿಕ ಕ್ವಾರೈಂಟೈನ್ ಮತ್ತು ಏಳು ದಿವಸಗಳ ಹೋಮ್ ಕ್ವಾರೈಂಟೈನಿಗೆ ಒಳಪಡಬೇಕಾಗುವುದು. ಕುಟುಂಬಿಕರ ಮರಣ ಅಥವಾ ಗಂಭೀರ ರೋಗ ಮೊದಲಾದ ಕಾರಣಗಳಿಂದ ತುರ್ತಾಗಿ ಪ್ರಯಾಣಿಸುವವರಾಗಿದ್ದಲ್ಲಿ, ಪ್ರಯಾಣಕ್ಕೆ 72 ಗಂಟೆಗಳ ಮೊದಲು “ನ್ಯೂ ದೆಲ್ಹಿ ಏರ್ಪೋರ್ಟ್” ಪೋರ್ಟಲಿನಲ್ಲಿ ನೋಂದಣಿ ಮಾಡುವುದು ಅಗತ್ಯವಾಗಿದೆ. ಇಂಥವರಿಗೆ ಕೊರೋನಾ ನೆಗೆಟಿವ್ ಪ್ರಮಾಣಪತ್ರ ಇಲ್ಲದೇ ಪ್ರಯಾಣಿಸಬಹುದಾಗಿದ್ದರೂ, ಹದಿನಾಲ್ಕು ದಿನಗಳ ಕ್ವಾರೈಂಟೈನ್ ಕಡ್ಡಾಯವಾಗಿದೆ.
ಕ್ವಾರೈಂಟೈನಿಂದ ವಿನಾಯಿತಿ ಪಡೆದವರು, ತಮ್ಮ ಆರೋಗ್ಯದ ಬಗೆಗೆ ವಿಶೇಷ ನಿಗಾ ವಹಿಸಬೇಕೆಂದೂ ಸಚಿವಾಲಯ ನಿರ್ದೇಶಿಸಿದೆ. ವಿದೇಶಗಳಿಂದ ಬಂದ ಯಾತ್ರಿಕರಲ್ಲಿ ಕೊರೋನಾ ಸೋಂಕು ಗಣನೀಯವಾಗಿ ಕಡಿಮೆಯಾದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದ್ದು, ಅನಿವಾಸಿ ಭಾರತೀಯರಿಗೆ ಇದು ಶುಭಸುದ್ದಿಯಾಗಿದೆ.
ಕೇಂದ್ರ ಆರೋಗ್ಯ ಇಲಾಖೆಯ ಈ ಮಾರ್ಗಸೂಚಿಗಳನ್ನು ರಾಜ್ಯ ಆರೋಗ್ಯ ಇಲಾಖೆಗಳು ಯಾವ ರೀತಿ ಸ್ವೀಕರಿಸುತ್ತವೆ ಮತ್ತು ವ್ಯತ್ಯಾಸವನ್ನು ತರುತ್ತವೆಯೋ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಆಯಾ ರಾಜ್ಯಗಳ ಆರೋಗ್ಯ ಇಲಾಖೆಗಳು ಪ್ರಕಟಿಸುವ ಮಾರ್ಗಸೂಚಿಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಿದೆ.