ಉತ್ತರ ಪ್ರದೇಶ: ಗಂಗಾ ನದಿ ತೀರದಲ್ಲಿ ಮರಳಿನೊಳಗೆ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾದ ರಾಶಿ ಮೃತದೇಹಗಳು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ: ಇತ್ತೀಚೆಗಷ್ಟೇ ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಹರಿಯುವ ಗಂಗಾ ನದಿಯಲ್ಲಿ ಅಪರಿಚಿತ ಮೃತದೇಹಗಳು ತೇಲಿ ಬಂದಿತ್ತು. ಇದೀಗ ಉತ್ತರ ಪ್ರದೇಶದಲ್ಲಿ ಗಂಗಾ ನದಿ ತೀರದ ಮರಳಿನೊಳಗೆ ಹೂತಿಟ್ಟ ಸ್ಥಿತಿಯಲ್ಲಿರುವ ರಾಶಿ ಮೃತದೇಹಗಳು ಪತ್ತೆಯಾಗಿವೆ.

ಉನ್ನಾವೋದ ಬಕ್ಸರ್ ಎಂಬ ಗ್ರಾಮದಲ್ಲಿರುವ ನದಿ ದಂಡೆಯಲ್ಲಿ ಮೃತದೇಹಗಳು ಪತ್ತೆಯಾಗಿದ್ದು, ಕೆಲವೊಂದನ್ನು ಬೀದಿನಾಯಿಗಳು ಕಚ್ಚಿಕೊಂಡು ಹೊರಕ್ಕೆಳೆದು ಹಾಕಿವೆ. ನದಿ ತೀರದಲ್ಲಿ ಕೊಳೆತು ಬಿದ್ದಿರುವ ಮೃತದೇಹಗಳನ್ನು ಕಂಡು ಗ್ರಾಮದ ಜನರು ಭಯಭೀತರಾಗಿದ್ದಾರೆ.

ಫತೇಪುರ್, ರಾಯ್ ಬರೇಲಿ ಮುಂತಾದ ಹತ್ತಿರದ ಜಿಲ್ಲೆಗಳಿಂದ ಮೃತದೇಹಗಳನ್ನು ತಂದು ಬಾಕ್ಸರ್ ಗ್ರಾಮದ ನದಿ ತೀರದಲ್ಲಿ ಸುಡುವುದು ಹಿಂದಿನಿಂದಲೂ ನಡೆದು ಬಂದಿರುವ ರೂಢಿ. ಉತ್ತರಪ್ರದೇಶದಲ್ಲಿ ಕೋವಿಡ್ ಹೆಚ್ಚಾದ ಬಳಿಕ ಇಲ್ಲಿಗೆ ಬರುತ್ತಿರುವ ಮೃತದೇಹಗಳ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡಿದೆಯೆಂದು ಸ್ಥಳೀಯರು ಹೇಳುತ್ತಾರೆ.

ಜೊತೆಗೆ ಮೃತದೇಹವನ್ನು ಸುಡಲೋ, ಅಂತ್ಯ ಸಂಸ್ಕಾರ ಮಾಡಲೋ ಹಣವಿಲ್ಲದವರು ಅಥವಾ ಆಸಕ್ತಿ ತೋರಿಸದವರು ಅವುಗಳನ್ನು ನದಿಗೆ ಬಿಡುತ್ತಾರೆ ಅಥವಾ ನದಿ ದಂಡೆಯಲ್ಲಿ ಹೂತಿಟ್ಟು ಹೋಗುತ್ತಾರೆ ಎನ್ನುವ ಆರೋಪಗಳಿವೆ. ಈಗ ಪತ್ತೆಯಾಗಿರುವ ಮೃತದೇಹಗಳು ಜನರೇ ನೇರವಾಗಿ ತಂದು ಹೂತಿಟ್ಟವುಗಳೇ ಅಥವಾ ನದಿಯಲ್ಲಿ ತೇಲಿ ಬಂದವುಗಳನ್ನು ಯಾರೋ ಹಿಡಿದು ಮರಳಿನಲ್ಲಿ ಹೂತಿಟ್ಟರೇ ಎನ್ನುವುದು ತಿಳಿದು ಬಂದಿಲ್ಲ.

ಅದೇ ರೀತಿ, ಮೃತದೇಹಗಳೆಲ್ಲವೂ ಕೋವಿಡ್ ಬಂದು ಮರಣ ಹೊಂದಿರುವವರ ಮೃತದೇಹಗಳೇ ಎನ್ನುವುದರ ಕುರಿತೂ ಸ್ಪಷ್ಟತೆಯಿಲ್ಲ. ಉತ್ತರ ಪ್ರದೇಶದಲ್ಲಿ ಕೋವಿಡ್ ರೋಗವು ತೀವ್ರಗತಿಯಲ್ಲಿ ಏರುತ್ತಿರುವುದರಿಂದ ಇವು ಕೋವಿಡ್ ಬಂದು ಮೃತಪಟ್ಟವರದ್ದೇ ಆಗಿರಬಹುದೆಂಬ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ. ಆರ್‍ ಟಿಪಿಸಿಆರ್ ಪರೀಕ್ಷೆ ನಡೆಸುವ ಕೇಂದ್ರ ಕೂಡಾ ಗ್ರಾಮದಿಂದ ಐವತ್ತು ಕಿಲೋ ಮೀಟರ್ ದೂರದಲ್ಲಿದೆ. ಕೋವಿಡ್ ಕೇರ್ ಸೆಂಟರ್ ಮೂವತ್ತು ಕಿಲೋ ಮೀಟರ್ ದೂರದಲ್ಲಿದೆ.

ಮೃತದೇಹಗಳು ಪತ್ತೆಯಾಗಿರುವುದರ ಕುರಿತು ಹೆಚ್ಚಿನ ತನಿಖೆ ನಡೆಸಿ, ವರದಿ ಒಪ್ಪಿಸಲು ಸಬ್ ಡಿವಿಶನಲ್ ಮ್ಯಾಜಿಸ್ಟ್ರೇಟ್ ಹಾಗೂ ಇತರ ತನಿಖಾ ಅಧಿಕಾರಿಗಳಿಗೆ ಉನ್ನಾವೋ ಜಿಲ್ಲಾಡಳಿತವು ಆದೇಶ ನೀಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು