ಲಖನೌ (05-10-2020): ಹತ್ರಾಸ್ ಗ್ಯಾಂಗ್ರೇಪ್ ಪ್ರಕರಣವನ್ನು ಕಾಶಿ ಕ್ಷೇತ್ರದ ಬಿಜೆಪಿ ಜಾಲತಾಣ ಮುಖ್ಯಸ್ಥ ಶಶಿಕುಮಾರ್ ವಿಭಿನ್ನ ಕಥೆಯನ್ನು ಕಟ್ಟಿ ನಿರೂಪಿಸಿದ್ದಾರೆ. ಇದು ತನಿಖೆಯ ದಿಕ್ಕನ್ನು ತಪ್ಪಿಸುವ ತಂತ್ರವಾ ಅಥವಾ ವಾಸ್ತವತೆಯಾ ಎನ್ನುವುದು ನಿಷ್ಪಕ್ಷಪಾತ ತನಿಖೆಯಿಂದಲೇ ತಿಳಿದು ಬರಬೇಕಿದೆ.
ಹತ್ರಾಸ್ ಪ್ರಕರಣದಲ್ಲಿ ಸತ್ಯ ಬೇರೆ ಇದೆ ಇಡೀ ಪ್ರಕರಣವನ್ನು ಗ್ಯಾಂಗ್ರೇಪ್ ಮತ್ತು ಕೊಲೆ ಎಂದು ತಿರುಚಿದ್ದಾರೆ. ಕಾಂಗ್ರೆಸ್ ತನ್ನ ರಾಜಕೀಯ ಅಜೆಂಡಾವನ್ನಾಗಿ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ ಎಂದು ದೂರಿ ಶಶಿಕುಮಾರ್ ಸರಣಿ ಟ್ವೀಟ್ ಮಾಡಿದ್ದಾರೆ.
ಸಂತ್ರಸ್ತ ಯುವತಿಯ ಕುಟುಂಬ ಹಾಗೂ ಆರೋಪಿ ಸಂದೀಪ್ ಕುಟುಂಬದ ನಡುವೆ 2001ರಿಂದ ಹಳೆಯ ದ್ವೇಷವಿತ್ತು. ಇಬ್ಬರು ಪರಸ್ಪರ ದೂರು ಸಹ ಸಲ್ಲಿಸಿದ್ದರು. ಸಂದೀಪ್ ಕುಟುಂಬದಿಂದ 2 ಲಕ್ಷ ರೂ.ಹಣ ಪಡೆದುಕೊಂಡ ಬಳಿಕ ಸಂತ್ರಸ್ತೆಯ ಕುಟುಂಬ ಪ್ರಕರಣವನ್ನು ಹಿಂಪಡೆದುಕೊಂಡಿತ್ತು. ಆದರೆ, ಎರಡು ಕುಟುಂಬಗಳ ದ್ವೇಷದ ನಡುವೆಯೂ ಯುವತಿ ಮತ್ತು ಸಂದೀಪ್ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಸಂತ್ರಸ್ತೆಯ ಕುಟುಂಬಸ್ಥರು ವಿರೋಧವನ್ನು ವ್ಯಕ್ತಪಡಿಸಿದ್ದರು.ಘಟನೆ ನಡೆದ ದಿನದಂದು ಸಂದೀಪ್ ಸಂತ್ರಸ್ತೆಯನ್ನು ಹೊಲದಲ್ಲಿ ಭೇಟಿಯಾಗಿದ್ದ. ಈ ವೇಳೆ ಆಕೆಯ ತಾಯಿ ನೋಡಿ ಮಗನನ್ನು ಕರೆದಿದ್ದಾರೆ. ಸಹೋದರನೇ ಬಂದು ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಸಂದೀಪ್ ಮತ್ತು ಆತನ ಗೆಳೆಯರ ಮೇಲೆ ಆರೋಪ ಮಾಡಲಾಗಿದೆ ಎಂದು ಹೇಳಿದ್ದಾರೆ.
ಆದರೆ ಈ ಕಥೆಯನ್ನು ಹೇಳಿದ ಬಿಜೆಪಿ ನಾಯಕ, ರಾತ್ರೋ ರಾತ್ರಿ ಸೀಮೆ ಎಣ್ಣೆ ಸುರಿದು ಸಂತ್ರಸ್ತೆಯನ್ನು ದಹನ ಏಕೆ ಮಾಡಿದ್ದಾರೆ ಎಂದು ತಿಳಿಸಿಲ್ಲ. ಅವಳ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಬಿಜೆಪಿ ಹೇಳುತ್ತಿದೆ. ಮಹಿಳೆ ಮೇಲೆ ದೌರ್ಜನ್ಯ ನಡೆದಾಗ ಬಿಜೆಪಿ ನೇತೃತ್ವದ ಯುಪಿ ಸರಕಾರ ಸೂಕ್ತ ತನಿಖೆಯನ್ನು ನಡೆಸಿ ಕಾನೂನಿಡಿ ಆರೋಪಿಗಳಿಗೆ ಶಿಕ್ಷೆಗೆ ಒಳಪಡಿಸಬೇಕಾಗಿತ್ತು, ಆದರೆ ಹತ್ರಾಸ್ ನಲ್ಲಿ ಸಾವಿರಾರೂ ಪೊಲೀಸರನ್ನು ನೇಮಿಸಿ ಸಂತ್ರಸ್ತೆಯ ಕುಟುಂಬಸ್ಥರಿಗೆ ನಿರ್ಬಂಧ ಹಾಕಿ, ಹಲ್ಲೆ ಮಾಡಿ , ಮಾದ್ಯಮಗಳಿಗೆ ಕೂಡ ನಿರ್ಬಂಧ ಹಾಕಿದ್ದಾರೆ. ಈಗಿರುವಾಗ ಯಾರನ್ನು ರಕ್ಷಿಸಲು ಬಿಜೆಪಿ ಈ ರೀತಿ ಮಾಡುತ್ತಿದೆ ಎನ್ನವುದು ಪ್ರಶ್ನೆಯಾಗಿದೆ.