ನವದೆಹಲಿ(06-02-2021): ಕೇಂದ್ರದ ಹೊಸ ಕೃಷಿ ಕಾಯಿದೆ ವಿರೋಧಿಸಿ ರೈತರು ರಾಷ್ಟ್ರವ್ಯಾಪಿ ಚಕ್ಕಾ ಜಾಮ್ ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನ ಗೇಟ್ಗಳನ್ನು ಮುಚ್ಚುವುದಾಗಿ ಶನಿವಾರ ಪ್ರಕಟಿಸಿದೆ. ಪರಿಸ್ಥ್ಥಿತಿಯನ್ನು ಎದುರಿಸಲು ಅರೆಸೈನಿಕ ಪಡೆಗಳೂ ಸೇರಿದಂತೆ ಸಾವಿರಾರು ಸಿಬ್ಬಂದಿಯನ್ನು ದೆಹಲಿ ಪೊಲೀಸರು ಎಲ್ಲಾ ಗಡಿ ಕೇಂದ್ರಗಳಲ್ಲಿ ನಿಯೋಜಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮಗಳಾಗಿ ಮಂಡಿ ಹೌಸ್, ಐಟಿಒ, ದೆಹಲಿ ಗೇಟ್, ವಿಶ್ವವಿದ್ಯಾಲಯ, ಲಾಲ್ ಕ್ವಿಲಾ, ಜಮಾ ಮಸೀದಿ, ಜನಪಥ್ ಮತ್ತು ಕೇಂದ್ರ ಸಚಿವಾಲಯದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ.
ಚಕ್ಕಾ ಜಾಮ್ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘಟನೆಗಳು ಬೆಂಬಲ ನೀಡಿದ್ದು, ರಾಜ್ಯದಲ್ಲೂ ಹೆದ್ದಾರಿ ತಡೆ ನಡೆಸಲಾಗುತ್ತಿದೆ. ರೈತರ ಪ್ರತಿಭಟನೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.