ಹನೋಯಿ(20-10-2020): ಕೊರೋನಾ ಸಂದಿಗ್ಧತೆಯಿಂದ ಮೆಲ್ಲಮಲ್ಲನೇ ಹೊರ ಬರುತ್ತಿರುವ ಹೊತ್ತಲ್ಲೇ ವಿಯೆಟ್ನಾಮಿಗೆ ಭೀಕರ ನೆರೆಯ ಸಮಸ್ಯೆ ಎದುರಾಗಿದೆ. ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯೇ ಇಂತಹ ಪ್ರವಾಹಕ್ಕೆ ಕಾರಣವಾಗಿರುವುದು.
ಭೀಕರ ನೆರೆಯಿಂದಾಗಿ ಲಕ್ಷಾಂತರ ಮಂದಿ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸೈನಿಕರೂ ಸೇರಿದಂತೆ ನೂರಾರು ಜನರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.
ದೇಶದ ಬಹುಮುಖ್ಯ ಪ್ರದೇಶಗಳು ಜಲಾವೃತವಾಗಿದ್ದು, ಕಳೆದ ಹಲವಾರು ದಶಕಗಳ ಬಳಿಕ ವಿಯೆಟ್ನಾಂ ಇಂತಹ ನೆರೆಗೆ ಸಾಕ್ಷಿಯಾಗಿದೆ ಎಂದು ರೆಡ್ಕ್ರಾಸ್ ಸಂಸ್ಥೆಯ ಅಧ್ಯಕ್ಷ ಯೆಂಗೂ ಯೆನ್ ತೀ ಶುವಾನ್ ಹೇಳುತ್ತಾರೆ. ಹಲವಾರು ಕಡೆ ಭೂ ಕುಸಿತಗಳುಂಟಾಗಿದ್ದು, ಅಸಂಖ್ಯಾತ ರಸ್ತೆಗಳು ಬಂದಾಗಿ, ದೇಶದ ಪರಿಸ್ಥಿತಿ ಅಸ್ತವ್ಯಸ್ತಗೊಂಡಿದೆ.
178000 ಮಂದಿಗೆ ಮನೆಗಳು ನಷ್ಟವಾಗಿದ್ದು, ಸಾವಿರಾರು ಹೆಕ್ಟೇರ್ ಕೃಷಿ ನಾಶವಾಗಿದೆ. ಅಗತ್ಯ ವಸ್ತುಗಳನ್ನೂ, ಅಮೂಲ್ಯ ವಸ್ತುಗಳನ್ನೂ ನೀರು ಕೊಚ್ಚಿ ಕೊಂಡು ಹೋಗಿದೆ.
ಕೊರೋನಾದ ಬೆನ್ನಿಗೆ ಬಂದ ಈ ಸಮಸ್ಯೆ ವಿಯೆಟ್ನಾಮನ್ನು ನಲುಗಿಸಿದ್ದು, ಜಾಗತಿಕ ನೆರವಿನ ನಿರೀಕ್ಷೆಯಲ್ಲಿದೆ.