ಬೆಂಗಳೂರು : ರಮೇಶ್ ಜಾರಕಿಹೊಳಿ ‘ಸಿಡಿ’ ಪ್ರಕರಣದಲ್ಲಿ ಯುವತಿ ಹೇಳಿಕೆ ಮೇಲೆ ಸೀರಿಯಸ್ ಕೇಸ್ ಅಡಿ ಎಫ್ಐಆರ್ ದಾಖಲಾಗಿದೆ. ಆದರೆ ಎಫ್ಐಆರ್ ಆದ ಆರೋಪಿ ಮಾಧ್ಯಮಗಳ ಮುಂದೆ ಗೂಳಿ ಥರಾ ಓಡಾಡುತ್ತಿದ್ದಾರೆ ಎಂದು ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಯುವತಿ ಪರವಾಗಿ ನಿನ್ನೆ ಕೇಸ್ ದಾಖಲಿಸಿದ ವಕೀಲ ಜಗದೀಶ್ ಫೇಸ್ಬುಕ್ ಲೈವ್ ಮೂಲಕ ಆರೋಪಿಸಿದ್ದಾರೆ.
“ನನ್ನನ್ನು ಅರೆಸ್ಟ್ ಮಾಡಿದರೆ 24 ಗಂಟೆಗಳಲ್ಲಿ ಸರ್ಕಾರವನ್ನು ಕಿತ್ತು ಬಿಸಾಕುತ್ತೇನೆ.ನಿಮ್ಮ ಟೇಬಲ್ ಮೇಲೆ ರಾಜಿನಾಮೆ ರಾಶಿ ಇರುತ್ತೆ, ಮೊದಲು ದೂರು ಕೊಟ್ಟವನು ನಾನು, ಅದನ್ನು ಬಗೆಹರಿಸಿ, ಬ್ಲಾಕ್ ಮೇಲ್ ಮಾಡಿದ ಯುವತಿಯನ್ನು ಅರೆಸ್ಟ್ ಮಾಡಿ, ನನ್ನನ್ನು ಅರೆಸ್ಟ್ ಅಂತ ಮನೆಗೆ ಬಂದರೆ ಸರಿ ಇರಲ್ಲ” ಎಂದು ಆರೋಪಿ ಸರ್ಕಾರ ಹಾಗೂ ಎಸ್ಐಟಿಯನ್ನು ಧಮ್ಕಿ ಹಾಕ್ತಾ ಇದ್ದರೆ ಕಬ್ಬನ್ ಪಾರ್ಕ್ ಪೋಲೀಸರು, ಎಸ್ಐಟಿಯವರು ಏನು ಮಾಡ್ತಾ ಇದ್ದೀರಾ ಎಂದು ವಕೀಲ ಜಗದೀಶ್ ಪ್ರಶ್ನಿಸಿದ್ದಾರೆ.
ಸಾಕ್ಷಿಗಳನ್ನು ಹೆದರಿಸಿ ತನಿಖೆಯನ್ನು ಹೀಗೆ ಹಾಳು ಮಾಡುತ್ತಾ ಹೊರಗಡೆ ಆರಾಮಾಗಿ ಓಡಾಡುತ್ತಿದ್ದರೆ, ಈ ತನಿಖೆ ಎಲ್ಲಿ ಹೋಗುವುದು? ಹಾಗಾಗಿ ತಕ್ಷಣವೇ ಈ ಒಂದು ಆರೋಪಿಯನ್ನು ಎಸ್ಐಟಿ ಹಾಗೂ ಬೆಂಗಳೂರು ಕಮೀಷನರ್ ರವರು ಬಂಧಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಪ್ರಕರಣವನ್ನು ಸ್ವತಂತ್ರವಾಗಿ ತನಿಖೆಯಾಗಬೇಕು, ಸಂತ್ರಸ್ತೆ ಯುವತಿಗೆ ನ್ಯಾಯ ಸಿಗಬೇಕು. ಮಾಧ್ಯಮಗಳ ಮುಂದೆ ಹೆದರಿಸಿ, ಬೆದರಿಸಿ ಗೂಳಿ ಥರಾ ಓಡಾಡುತ್ತಿದ್ದರೆ ಏನರ್ಥ, ಜನಸಾಮಾನ್ಯರ ಮೇಲೆ ಈ ಕೇಸ್ ದಾಖಲಾಗಿದ್ದರೆ ಹೀಗೆ ಓಡಾಡಲು ಬಿಡ್ತಾ ಇರಲಿಲ್ಲ. ಆರೋಪಿಯನ್ನು ಬಂಧಿಸಿ ತನಿಖೆಯಾಗಲಿ ಇಲ್ಲದಿದ್ದರೆ ಹೈಕೋರ್ಟ್ ಗೆ ಒಪ್ಪಿಸಿ ಎಂದು ವಕೀಲ ಜಗದೀಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.