ಬೆಂಗಳೂರು (06-11-2020):ಸಂಸದ ತೇಜಸ್ವಿ ಸೂರ್ಯ ಪರವಾಗಿ ಸುಳ್ಳು ವರದಿ ಮಾಡಿದ ಡಿಸಿಪಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ತೇಜಸ್ವಿ ಸೂರ್ಯ ಸೆ.30 ರಂದು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬಿಜೆಪಿ ಕಚೇರಿವರೆಗೂ ನಡೆಸಿದ್ದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ರ್ಯಾಲಿಯಲ್ಲಿ ಮಾಸ್ಕ್ ಇಲ್ಲದೆ, ಅಂತರ ಕಾಯ್ದುಕೊಳ್ಳದೆ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ಕೋರ್ಟ್ ವರದಿ ನೀಡುವಂತೆ ಸೂಚಿಸಿತ್ತು. ತೇಜಸ್ವಿ ಸೂರ್ಯ ಮಾಸ್ಕ್ ಹಾಕದೆ ಇದ್ದಿರುವುದು ಫೋಟೋಗಳಲ್ಲಿ ವೈರಲ್ ಆಗಿತ್ತು. ಆದರೆ ಡಿಸಿಪಿ ತೇಜಸ್ವಿ ಮಾಸ್ಕ್ ಹಾಕಿದ್ದಾರೆ, ಮೆರವಣಿಗೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಲಾಗಿದೆ ಎಂದು ವರದಿ ಸಲ್ಲಿಸಿದ್ದಾರೆ.
ಇದಕ್ಕೆ ಗರಂ ಆದ ಹೈಕೋರ್ಟ್ ನ್ಯಾಯಪೀಠ, ಸಂಸದರು ಸೇರಿದಂತೆ ಯಾರೂ ಮಾಸ್ಕ್ ಧರಿಸಿರಲಿಲ್ಲ ಎಂಬುದು ಫೋಟೋಗಳಲ್ಲಿ ಕಾಣಿಸುತ್ತದೆ. ಆದರೆ, ಪೊಲೀಸ್ ಅಧಿಕಾರಿಯಾಗಿ ನೀವು ಈ ರೀತಿ ಯಾಕೆ ವರದಿ ಸಲ್ಲಿಸಿದ್ದೀರಿ ಎಂದು ಪ್ರಶ್ನಿಸಿದೆ.