ಬೆಂಗಳೂರು(17-11-2020): ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಸಿಸಿಬಿ ಪೊಲೀಸರು ನಿನ್ನೆ ರಾತ್ರಿ ಸಂಪತ್ ರಾಜ್ ಅವರನ್ನು ಬಂಧಿಸಿದ್ದಾರೆ. ಬೆಂಗಳೂರು ಗಲಭೆ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ, ಪೊಲೀಸ್ ಠಾಣೆಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪತ್ ರಾಜ್ ವಿರುದ್ಧ ಆರೋಪ ಕೇಳಿಬಂದಿತ್ತು. ಇದರಿಂದಾಗಿ ಸಂಪತ್ ರಾಜ್ ಬಂಧನಕ್ಕೆ ಪೊಲೀಸರು ಮುಂದಾಗಿದ್ದರು. ಆದರೆ ಕೊರೊನಾ ನೆಪವೊಡ್ಡಿ ಸಂಪತ್ ರಾಜ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ದಿಡೀರ್ ಅಧಿಕಾರಿಗಳ ಕಣ್ಣು ತಪ್ಪಿಸಿ ಸಂಪತ್ ರಾಜ್ ನಾಪತ್ತೆಯಾಗಿದ್ದರು.
ಸಂಪತ್ ರಾಜ್ ನಾಪತ್ತೆ ಪೊಲೀಸರಿಗೆ ತಲೆನೋವಾಗಿತ್ತು. ಕಳೆದ 22 ದಿನಗಳ ಹುಡುಕಾಟದ ಬಳಿಕ ನಿನ್ನೆ ರಾತ್ರಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಂದು ಕೋರ್ಟ್ ಗೆ ಅವರನ್ನು ಹಾಜರುಪಡಿಸುವ ಸಾಧ್ಯತೆ ಇದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸರು ಅನುಮತಿ ಕೇಳಲಿದ್ದಾರೆ ಎನ್ನಲಾಗಿದೆ.