ಅಬುಧಾಬಿ(5-11-2020): ಕೊರೋನಾ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುವ ಸಲುವಾಗಿ ತನ್ನ ಪೈಲಟುಗಳಿಗೆ ವೇತನ ರಹಿತ ರಜೆಯ ಅವಕಾಶ ನೀಡುವುದಾಗಿ ಎಮಿರೇಟ್ಸ್ ವಿಮಾನಯಾನ ಸಂಸ್ಥೆ ತಿಳಿಸಿದೆ.
ಇತ್ತೀಚಿಗೆ ಸಂಸ್ಥೆಯು ತುಸು ಚೇತರಿಸಿಕೊಳ್ಳುವ ಲಕ್ಷಣಗಳು ಕಂಡು ಬಂದಿರುವುದರಿಂದ ಒಂದು ವರ್ಷ ರಜೆಯ ನಡುವೆ ಯಾವಾಗ ಬೇಕಾದರೂ ಮರಳಿ ಕರ್ತವ್ಯಕ್ಕೆ ಹಾಜರಾಗುವ ಕರೆ ಬರಬಹುದು. ಆ ಸಂದರ್ಭದಲ್ಲಿ ಉದ್ಯೋಗಿಗಳು ಮರಳಿ ಬರಬೇಕೆಂಬ ಷರತ್ತೂ ಇದರಲ್ಲಿದೆ. ರಜೆಯ ಅವಧಿಯಲ್ಲಿ ವೇತನದ ಹೊರತಾದ ವಸತಿ, ವೈದ್ಯಕೀಯ ಇತ್ಯಾದಿ ಸವಲತ್ತುಗಳನ್ನು ಪಡೆದುಕೊಳ್ಳಬಹುದಾಗಿದೆ.
ಕೊರೋನಾ ತಂದ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಎಮಿರೇಟ್ಸ್ ಸಂಸ್ಥೆಯು ಜೂನ್ ತಿಂಗಳಿನಲ್ಲೇ ಹಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು. ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು ಅರುವತ್ತು ಸಾವಿರ ಉದ್ಯೋಗಿಗಳನ್ನು ಹೊಸದಾಗಿ ನೇಮಿಸಿದ ಸಂಸ್ಥೆ ಇದೀಗ ಕೊರೋನ ಕಾರಣದಿಂದಾಗಿ ಈ ಹಂತಕ್ಕೆ ತಲುಪಿದೆ. ಕೊರೋನಾವು ಜಗತ್ತಿನಾದ್ಯಂತ ವೈಮಾನಿಕ ಕ್ಷೇತ್ರದಲ್ಲಿ ಭಾರೀ ಕುಸಿತವನ್ನು ತಂದೊಡ್ಡಿದೆ.