ಸೌತೆ, ಮುಳ್ಳುಸೌತೆಗಳ ಸಿಪ್ಪೆಯಿಂದ ಪ್ಯಾಕಿಂಗ್ ಕವರ್ | ಹೊಸ ಸಂಶೋಧನೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಖರಗ್ಪುರ(19-11-2020); ಸೌತೆಕಾಯಿ ಮತ್ತು ಮುಳ್ಳುಸೌತೆಗಳ ಸಿಪ್ಪೆಯಿಂದ ಪ್ಯಾಕಿಂಗ್ ಕವರ್ ತಯಾರಿಸಬಹುದೆಂದು ಹೊಸ ಸಂಶೋಧನೆ ತೋರಿಸಿಕೊಟ್ಟಿದೆ. ಆಹಾರ ವಸ್ತುಗಳನ್ನು ಪ್ಯಾಕ್ ಮಾಡಲು ಈ ವರೆಗೆ ಉಪಯೋಗಿಸುತ್ತಾ ಬರುತ್ತಿರುವ ಪ್ಲಾಸ್ಟಿಕ್ ಕವರುಗಳಿಗೆ ಇದು ಪರ್ಯಾಯವಾಗಬಹುದೆಂದು ನಿರೀಕ್ಷಿಸಲಾಗಿದೆ.

ಖರಗ್ಪುರ ಐಐಟಿಯ ಎನ್ ಸಾಯಿ ಪ್ರಸನ್ನ ಮತ್ತು ಜಯೀತ ಮಿತ್ರ ಎಂಬವರೇ ಈ ಹೊಸ ಸಂಶೋಧನೆಯನ್ನು ಮಾಡಿದವರು. ಎರಡು ವರ್ಷಗಳೊಳಗೆ ಈ ಬಯೋ ಪೋಲಿಮರ್ ಉತ್ಪನ್ನವು ಮಾರುಕಟ್ಟೆಗೆ ಬರಲಿದೆಯೆಂದು ಹೇಳಲಾಗುತ್ತಿದೆ. ಹಾಗಾದರೆ ಇದು ಕೃಷಿಕರಿಗೂ ಅದೇ ರೀತಿ ಪ್ರಕೃತಿಗೂ ಹೆಚ್ಚು ಅನುಕೂಲವಾಗಲಿದೆ. ಉಪಯೋಗಕ್ಕೆ ಬರದ ಸೌತೆಕಾಯಿ, ಅದರ ಸಿಪ್ಪೆ, ಒಳಗಿರುವ ದ್ರವ ಎಲ್ಲವೂ ಈ ಪೋಲಿಮರ್ ಪ್ಯಾಕಿಂಗ್ ಮಾಡಲು ಬಳಸಲು ಸಾಧ್ಯವಿದೆಯೆಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಸೌತೆಕಾಯಿಯ ಸಿಪ್ಪೆಯೂ ಸೇರಿ ಶೇಕಡಾ ಹನ್ನೆರೆಡರಷ್ಟು ಭಾಗವು ಉಪಯೋಗಕ್ಕೆ ಬಾರದೇ ಹೋಗುತ್ತದೆ. ಈ ಉಪಯೋಗಕ್ಕೆ ಬಾರದ ಭಾಗದಿಂದ ಸೆಲ್ಯುಲೋಸ್, ಹೆಮಿ ಸೆಲ್ಯುಲೋಸ್, ಪೆಕ್ಟಿನ್ ಇತ್ಯಾದಿಗಳನ್ನು ಬೇರ್ಪಡಿಸಿ, ಅವುಗಳನ್ನು ಇಂತಹ ಬಯೋಕಾಂಪಸಿಟ್ ಉತ್ಪನ್ನಗಳಲ್ಲಿ ನ್ಯಾನೋ-ಫಿಲ್ಲರುಗಳಾಗಿ ಉಪಯೋಗಿಸಲಾಗುತ್ತದೆ. ಇಂತಹಾ ಉತ್ಪನ್ನಗಳು ಸಾಮಾನ್ಯವಾಗಿ ಉಪಯೋಗಿಸುವ ಪ್ಲಾಸ್ಟಿಕ್ ಮತ್ತು ಫೈಬರುಗಳಷ್ಟೇ ಬಲಯುತವಾಗಿರುತ್ತವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಈ ಉತ್ಪನ್ನಗಳಿಗೆ ಮಣ್ಣಿನಲ್ಲಿ ಜೇರ್ಣಿಸಿ ಹೋಗುವ ಗುಣವಿರುವುದರಿಂದ ಉಪಯೋಗಿಸಿದ ಬಳಿಕ ಬಿಸಾಡಿದರೂ ಪರಿಸರಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಅದೂ ಅಲ್ಲದೇ ಈ ಬಯೋ ಕವರಿನೊಳಗೆ ಯಾವುದೇ ಆಹಾರ ಪದಾರ್ಥಗಳನ್ನು ಹಾಕಿದರೂ ರಾಸಾಯನಿಕ ಕ್ರಿಯೆಗಳು ಜರುಗುವುದಿಲ್ಲ. ಹಾಗಾಗಿ ಆಹಾರಗಳ ರುಚಿ ಮತ್ತು ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಮತ್ತು ಇದರ ಬೆಲೆಯೂ ತುಂಬಾ ಕಡಿಮೆ.

ಈ ಬಯೋಕವರಿಗೆ ವಾತಾವರಣದಲ್ಲಿ ಆಗುವ ಸಾಮಾನ್ಯ ಬದಲಾವಣೆಯನ್ನು ತಾಳಿಕೊಳ್ಳುವ ಶಕ್ತಿಯಿರುವುದರಿಂದ ಒಳಗಿರುವ ಆಹಾರವೂ ಅಷ್ಟು ಬೇಗ ಹಾಳಾಗುವುದಿಲ್ಲ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನೆರಡು ವರ್ಷಗಳಲ್ಲಿ ಈ ಬಯೋ ಪೋಲಿಮರ್ ಕವರುಗಳು ಮಾರುಕಟ್ಟೆಗೆ ಪ್ರವೇಶಿಸಲಿದೆ. ಬೆಲೆ ಕಡಿಮೆಯಾಗಿ ಕೊನೆಗೆ ಬೆಳೆಗಳನ್ನು ಬಿಸಾಡುವಂತಹಾ ಸಮಸ್ಯೆಗಳನ್ನು ಎದುರಿಸುವ ರೈತರಿಗೆ ಈ ಹೊಸ ಸಂಶೋಧನೆ ಆಶಾದಾಯಕವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು