ಬೆಂಗಳೂರು(03-10-2020): ಡ್ರಗ್ಸ್ ಪ್ರಕರಣದಲ್ಲಿ ಸ್ಪೋಟಕ ಸುದ್ದಿ ನೆಪದಲ್ಲಿ ಮಾಧ್ಯಮಗಳ ಕಪೋಲಕಲ್ಪಿತ ವರದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಮಾಧ್ಯಮಗಳು ಅನುಶ್ರೀ ಮೂರು ಪಕ್ಷಗಳ ಪ್ರಭಾವಿ ನಾಯಕರ ಜೊತೆ ಚರ್ಚೆ ಮಾಡಿದ್ಧಾರೆ. ಎರಡು ಬಾರಿ ಸಿಎಂ ಆದವರ ಜೊತೆ ಮಾತನಾಡಿದ್ದಾರೆ. ಮಾಜಿ ಸಿಎಂ ಪುತ್ರನ ಜೊತೆಯೂ ಸಮಾಲೋಚನೆ ಮಾಡಿದ್ದಾರೆ ಎಂಬಿತ್ಯಾದಿ ಸುದ್ದಿಗಳನ್ನು ಬಿತ್ತರಿಸಿದ್ದಾರೆ.
ಯಾರು ಆ ಮುಖ್ಯಮಂತ್ರಿ ಎಂದು ಸತ್ಯ ಹೇಳಬೇಕು. ಇಲ್ಲದಿದ್ದರೆ ಕಪೋಲಕಲ್ಪಿತ ಸುದ್ದಿಗಳನ್ನ ಪ್ರಸಾರ ಮಾಡುತ್ತಿರುವ ಮಾಧ್ಯಮಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಆಗ್ರಹ ಮಾಡಿದರು.
ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ನಾನು ಎರಡು ಬಾರಿ ಸಿಎಂ ಆಗಿದ್ದೇನೆ. ಎಸ್.ಎಂ. ಕೃಷ್ಣ, ಜಗದೀಶ್ ಶೆಟ್ಟರ್, ಸದಾನಂದ ಗೌಡ ಮತ್ತು ಸಿದ್ದರಾಮಯ್ಯ ಕೂಡ ಮುಖ್ಯಮಂತ್ರಿಯಾಗಿದ್ದವರಿದ್ದಾರೆ. ಆದರೆ, ಯಾರು ಆ ಸಿಎಂ ಆದು ಹೆಸರು ಹೇಳಬೇಕಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.